
ಬ್ಯಾಡಗಿ: ಭಾರತೀಯರ ಒಂದು ಸಂಪ್ರದಾಯಿಕ ಜನಪ್ರಿಯ ಆಟವಾಗಿರುವ ಕೊಕ್ಕೊ, ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಟವಾಗಿದೆ ಎಂದು ಮಾಜಿ ಸೈನಿಕ ಮಹದೇವ ಬಣಕಾರ ಹೇಳಿದರು.
ಪಟ್ಟಣದ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕೊಕ್ಕೊ ಸಂಸ್ಥೆಗಳು ಹಾಗೂ ಬ್ಯಾಡಗಿ ಸಿಟಿ ಕೊಕ್ಕೊ ಸಂಸ್ಥೆಯ ಆಶ್ರಯದಲ್ಲಿ ಆರಂಭವಾದ ಸೀನಿಯರ್ ನ್ಯಾಷನಲ್ಸ್‌ನಲ್ಲಿ ಪಾಲ್ಗೊಳ್ಳಲಿರುವ ಕರ್ನಾಟಕ ಪುರುಷರ ತಂಡದ 10 ದಿನಗಳ ಪೂರ್ವಸಿದ್ಧತಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತೀವ ವೇಗ, ಚುರುಕುತನ ಹಾಗೂ ಬುದ್ದಿವಂತಿಕೆಯ ಆಟವಾಗಿರುವ ಕೊಕ್ಕೊ ಆಟಕ್ಕೆ ಜಾಗತಿಕ ಮಟ್ಟದಲ್ಲಿ ಸಿಗುವಂತಹ ಗುಣಮಟ್ಟದ ಕೌಶಲ ಮತ್ತು ತರಬೇತಿ ದೇಶದ ಕ್ರೀಡಾಪಟುಗಳಿಗೆ ಆರಂಭಿಕ ಹಂತದಲ್ಲಿಯೇ ಸಿಗಬೇಕಾಗಿದೆ ಎಂದರು.
ಭಾರತೀಯ ಕ್ರೀಡಾಪ್ರಾಧಿಕಾರದ ನಿವೃತ್ತ ಕೊಕ್ಕೊ ತರಬೇತುದಾರ ಸುಜಯಕುಮಾರ ಮಾತನಾಡಿ, ಕ್ರೀಡೆಯಲ್ಲಿ ಮಕ್ಕಳ ಆಸಕ್ತಿಯನ್ನು ಹೆಚ್ಚಿಸಲು ಪ್ರಾಥಮಿಕ ಶಾಲಾ ಹಂತದಲ್ಲಿಯೇ ತರಬೇತಿ ಆರಂಭಿಸಬೇಕು. ಅದು ಕಾಲೇಜು ಶಿಕ್ಷಣದವರೆಗೂ ಮುಂದುವರೆಯುವಂತಾಗಬೇಕು. ಅಲ್ಲದೆ ಕ್ರೀಡೆಗಳನ್ನು ವೃತ್ತಿಪರತೆಯಿಂದ ನೋಡುವಂತೆ ಪೋಷಕರಿಗೆ ಸಲಹೆ ನೀಡಬೇಕಾಗಿದೆ ಎಂದರು.
ಸರ್ಕಾರ ಕ್ರೀಡಾ ನೀತಿಗಳಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಓಲಂಪಿಕ್ ಹಾಗೂ ನಾನ್ ಓಲಂಪಿಕ್ ಆಟಗಳು ಎಂಬ ತಾರತಮ್ಯ ಹೋಗಲಾಡಿಸಿದಾಗ ಮಾತ್ರ ದೇಶೀಯ ಕ್ರೀಡೆಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ರಾಷ್ಟ್ರಮಟ್ಟದ ಕೊಕ್ಕೊ ತೀರ್ಪುಗಾರ ಜಿತೇಂದ್ರ ಸುಣಗಾರ ಮಾತನಾಡಿ, ಮಣ್ಣಿನ ಗುಣಧರ್ಮಕ್ಕೆ ತಕ್ಕಂತೆ ನಾವೆಲ್ಲರೂ ಕೊಕ್ಕೊ, ಕಬಡ್ಡಿ ಹಾಗೂ ಕುಸ್ತಿ ಇನ್ನಿತರ ಕ್ರೀಡೆಗಳನ್ನು ಪರಿಚಯಿಸಿದ್ದೇವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಟದ ಮೈದಾನಗಳು, ಟ್ರ್ಯಾಕ್ ಮತ್ತು ಒಳಾಂಗಣ ಕ್ರೀಡಾಂಗಣ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಿ ಪ್ರೋತ್ಸಾಹಿಸಿದಲ್ಲಿ ನಿರೀಕ್ಷಿತ ಗುರಿಯನ್ನು ತಲುಪಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ದೇಶಿಯ ಕ್ರೀಡೆಗಳು ಮತ್ತು ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರುತಿಸುವ ಕೆಲಸವಾಗಬೇಕು ಎಂದರು.
ಬ್ಯಾಡಗಿ ಸಿಟಿ ಕೊಕ್ಕೊ ಸಂಸ್ಥೆಯ ಅಧ್ಯಕ್ಷ ವಿರೇಂದ್ರ ಶೆಟ್ಟರ, ಮಾಜಿ ಸೈನಿಕ ಎಂ.ಡಿ.ಚಿಕ್ಕಣ್ಣನವರ, ವಿನಾಯಕ ಆಲೂರ, ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಇದ್ದರು.