
ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಫೆ.02ರಂದು 59,612 ಚೀಲ (14,903 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿದ್ದು, ಬೆಲೆ ಏರಿಕೆಯಾಗಿದೆ.
ಪ್ರಸಕ್ತ ಹಂಗಾಮಿನಲ್ಲಿ 8ನೇ ಬಾರಿಗೆ 50 ಸಾವಿರಕ್ಕಿಂತ ಹೆಚ್ಚು ಆವಕವಾಗಿದೆ. ಸೋಮವಾರ ಹೆಚ್ಚಿನ ಆವಕವಾಗಬಹುದು ಎನ್ನುವ ವರ್ತಕರ ನಿರೀಕ್ಷೆ ಮತ್ತೆ ಹುಸಿಯಾಗಿದೆ. ಮೈಲಾರ ಜಾತ್ರೆಯಲ್ಲಿ ಸಾಕಷ್ಟು ಜನರು ಪಾಲ್ಗೊಳ್ಳಬಹುದು ಎನ್ನುವ ಹಿನ್ನೆಲೆಯಲ್ಲಿ ಆವಕದಲ್ಲಿ ಹೆಚ್ಚಳ ಕಂಡುಬಂದಿಲ್ಲ ಎನ್ನಲಾಗಿದೆ.
ಬ್ಯಾಡಗಿ ಮೂಲ ತಳಿ (ಲೋಕಲ್) ಮೆಣಸಿನಕಾಯಿಗೆ ಬೇಡಿಕೆ ಮತ್ತೆ ಹೆಚ್ಚುತ್ತಿದೆ. 18 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹75,555, 4 ಚೀಲ ಬ್ಯಾಡಗಿ ಕಡ್ಡಿ ಮೆಣಸಿಕಾಯಿ ಕ್ವಿಂಟಲ್‌ಗೆ ₹62,499 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಗುಂಟೂರು ತಳಿ ಮಾತ್ರ ₹18,009 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿ ಸ್ಥಿರತೆ ಕಾಯ್ದುಕೊಂಡಿದೆ. ಕಳೆದ ಜ.29ರಂದು ಮಾರುಕಟ್ಟೆಯಲ್ಲಿ ಒಟ್ಟು 46,499 ಚೀಲ (11,624 ಕ್ವಿಂಟಲ್) ಮೆಣಸಿನಕಾಯಿ ಮಾರಾಟವಾಗಿವೆ.
ಮಾರುಕಟ್ಟೆಯಲ್ಲಿ ಸೋಮವಾರ 9,285 ಲಾಟ್ ಮೆಣಸಿನಕಾಯಿ ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಮತ್ತು ಗುಣಮಟ್ಟದ ಕೊರತೆ ಇರುವ 259 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ. ಸರಾಸರಿ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹45,109, ಬ್ಯಾಡಗಿ ಕಡ್ಡಿ ₹43,009 ಹಾಗೂ ಗುಂಟೂರ ತಳಿ ₹14,509 ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 356 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.