
ಬ್ಯಾಡಗಿ: ಬಡವರು, ಕೂಲಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರ ಆರೋಗ್ಯ ಚಿಕಿತ್ಸೆಗೆ ಅನುಕೂಲವಾಗಿರುವ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಸೇವಾ ದರವನ್ನು ದಿಢೀರ್ ದುಪ್ಪಟ್ಟು ಮಾಡಲಾಗಿದ್ದು, ಈ ತೀರ್ಮಾನದಿಂದ ಬಡವರ ಜೇಬಿಗೆ ಕತ್ತರಿ ಬೀಳುತ್ತಿದೆ.
ಔಷಧಿಗಳ ಖರೀದಿ ಹಾಗೂ ಇತರೆ ಖರ್ಚಿನ ನಿರ್ವಹಣೆ ಹೆಸರಿನಲ್ಲಿ ತಾಲ್ಲೂಕು ಆಸ್ಪತ್ರೆಯ ನಿರ್ವಹಣೆ ನೆಪದಲ್ಲಿ ಎಲ್ಲ ಸೇವೆಗಳ ದರಗಳನ್ನು ದುಪ್ಪಟ್ಟು ಮಾಡಲಾಗಿದೆ. ಶಾಸಕ ಬಸವರಾಜ ಶಿವಣ್ಣನವರ ಅವರ ಅಧ್ಯಕ್ಷತೆಯಲ್ಲಿ ಫೆ. 7ರಂದು ನಡೆದ ಆರೋಗ್ಯ ರಕ್ಷಾ ಸಮಿತಿಯ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
‘ಫೆ. 12ರಿಂದಲೇ ಪರಿಷ್ಕೃತ ದರ ವಸೂಲಿ ಮಾಡಲಾಗುವುದು’ ಎಂದು ಆಡಳಿತ ವೈದ್ಯಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಆರೋಗ್ಯ ರಕ್ಷಾ ಸಮಿತಿಯ ತೀರ್ಮಾನವನ್ನು ಖಂಡಿಸಿರುವ ಜನರು, ‘ಇದು ಬಡವರನ್ನು ಸುಲಿಗೆ ಮಾಡುವ ತೀರ್ಮಾನ. ಈ ತೀರ್ಮಾನವನ್ನು ಕೂಡಲೇ ಹಿಂಪಡೆಯಬೇಕು. ಮೊದಲಿದ್ದ ದರವನ್ನೇ ಮುಂದುವರಿಸಬೇಕು’ ಎಂದು ಆಗ್ರಹಿಸುತ್ತಿದ್ದಾರೆ.
ಹೊರ ರೋಗಿಗಳು–ಒಳ ರೋಗಿಗಳ ದಾಖಲು, ಶಸ್ತ್ರ ಚಿಕಿತ್ಸೆ ಇತರೆ ಸೇವೆಗಳ ಶುಲ್ಕವನ್ನು ಎರಡು ಪಟ್ಟು ಹೆಚ್ಚಿಸಲಾಗಿದೆ. ಸಾರ್ವಜನಿಕರಿಗೆ ಆರೋಗ್ಯ ಉಚಿತ ಸೇವೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಗಳು, ವಾಣಿಜ್ಯ ಕೇಂದ್ರಗಳಾಗಿ ಬದಲಾವಣೆ ಹೊಂದುತ್ತಿರುವುದು ವಿಪರ್ಯಾಸ ಸಂಗತಿ ಎಂದು ಜನರು ದೂರುತ್ತಿದ್ದಾರೆ.
‘ಇಂದಿನ ಕಾಲದಲ್ಲಿ ಖಾಸಗಿ ಆಸ್ಪತ್ರೆಗಳು, ಬಡವರ ರಕ್ತ ಹೀರುತ್ತಿದೆ. ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಆಧಾರವಾಗಿವೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಆದರೆ, ಈಗ ಸೇವಾ ದರವನ್ನು ದಿಢೀರ್ ಏರಿಕೆ ಮಾಡಿರುವುದು ಖಂಡನೀಯ. ಇದು ಬಡ ಜನರ ಮೇಲೆ ಸರ್ಕಾರ ಮಾಡುತ್ತಿರುವ ಸವಾರಿ’ ಎಂದು ಕಿಡಿಕಾರುತ್ತಿದ್ದಾರೆ.
‘ರಾಜ್ಯದ ಯಾವುದೇ ಆಸ್ಪತ್ರೆಗಳಲ್ಲಿ ದರ ಏರಿಕೆಯಾಗಿಲ್ಲ. ಆದರೆ, ಬ್ಯಾಡಗಿ ತಾಲ್ಲೂಕಿನಲ್ಲಿ ಮಾತ್ರ ದಿಢೀರ್ ದರ ಏರಿಕೆ ಮಾಡಲು ಕಾರಣವೇನು. ಇದು ಖಾಸಗಿ ಆಸ್ಪತ್ರೆಗಳ ಲಾಬಿಯೂ ಇರಬಹುದು’ ಎಂದು ಜನರು ಅನುಮಾನಿಸುತ್ತಿದ್ದಾರೆ.
ನಿತ್ಯ 600 ಮಂದಿ ಭೇಟಿ: ಮೆಣಸಿನಕಾಯಿ ಮಾರುಕಟ್ಟೆಗೆ ಹೆಸರುವಾಸಿಯಾಗಿರುವ ಬ್ಯಾಡಗಿಯ ತಾಲ್ಲೂಕು ಆಸ್ಪತ್ರೆಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ. ವೈದ್ಯರ ಕೊರತೆಯೂ ಕಾಡುತ್ತಿದೆ. ಇದರ ನಡುವೆಯೇ ನಿತ್ಯವೂ 600 ಮಂದಿ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಇದರ ನಡುವೆಯೇ, ರೋಗಿಗಳ ಸೇವಾ ದರ ಏರಿಕೆ ಮಾಡಿರುವುದು ಬಡ ಜನರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ.
‘ಬಡವರ ಪರ ಇರುವುದಾಗಿ ಹೇಳುತ್ತಿದ್ದ ಶಾಸಕರೇ, ಈಗ ಸಮಿತಿ ಮೂಲಕ ದರ ದುಪ್ಪಟ್ಟು ಮಾಡಲು ಒಪ್ಪಿಗೆ ನೀಡಿರುವುದು ಆಶ್ಚರ್ಯ ಮೂಡಿಸಿದೆ. ಶಾಸಕರು ಕೂಡಲೇ ದರ ಇಳಿಕೆ ಮಾಡಬೇಕು. ಯಥಾಸ್ಥಿತಿ ಮುಂದುವರಿಸಬೇಕು’ ಎಂದು ಜನರು ಆಗ್ರಹಿಸಿದರು.
ದರ ದುಪ್ಪಟ್ಟು ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಜಯಾನಂದ, ‘ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯಲ್ಲಿ ಸೇವಾ ದರಗಳನ್ನು ಹೆಚ್ಚಿಸಿರುವುದು ಗಮನಕ್ಕೆ ಬಂದಿದೆ. ಸರ್ಕಾರ ಎಲ್ಲದಕ್ಕೂ ಅನುದಾನ ನೀಡಿದೆ. ದರ ಏರಿಕೆ ಮಾಡಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಸಭೆಯ ನಡಾವಳಿ ಪರಿಶೀಲಿಸಿ ಕ್ರಮ ಕೈಗೊಳ್ಳುವೆ’ ಎಂದರು.
ಒಂದು ಕಡೆ ಗ್ಯಾರಂಟಿ ಯೋಜನೆ ನೀಡುತ್ತಿರುವ ರಾಜ್ಯ ಸರ್ಕಾರ ಇನ್ನೊಂದು ಕಡೆ ಬಡವರ ಸುಲಿಗೆ ಮಾಡಲಾರಂಭಿಸಿದೆ. ಬ್ಯಾಡಗಿ ತಾಲ್ಲೂಕು ಆಸ್ಪತ್ರೆಯ ಶುಲ್ಕ ದುಬಾರಿಯೇ ಪುರಾವೆಹಜರತ್ಅಲಿ ಬ್ಯಾಡಗಿ ನಿವಾಸಿ