ADVERTISEMENT

ಬ್ಯಾಡಗಿ | ಮುಖ್ಯರಸ್ತೆ ವಿಸ್ತರಣೆ ವಿವಾದ: ಚಕಮಕಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 2:11 IST
Last Updated 19 ನವೆಂಬರ್ 2025, 2:11 IST
ಬ್ಯಾಡಗಿ ಪಟ್ಟಣದ ಮುಖ್ತ ರಸ್ತೆ ವಿಸ್ತರಣೆ ಮಾಡುವರೆಗೂ ಸರ್ಕಲ್‌ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ರಸ್ತೆ ಹೋರಾಟ ಸಮಿತಿಯ ಸದಸ್ಯರು ಶಾಸಕ ಬಸವರಾಜ ಶಿವಣ್ಣನವರ ಅವರೊಂದಿಗೆ ವಾಗ್ವಾದ ನಡೆಸಿದರು.
ಬ್ಯಾಡಗಿ ಪಟ್ಟಣದ ಮುಖ್ತ ರಸ್ತೆ ವಿಸ್ತರಣೆ ಮಾಡುವರೆಗೂ ಸರ್ಕಲ್‌ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ರಸ್ತೆ ಹೋರಾಟ ಸಮಿತಿಯ ಸದಸ್ಯರು ಶಾಸಕ ಬಸವರಾಜ ಶಿವಣ್ಣನವರ ಅವರೊಂದಿಗೆ ವಾಗ್ವಾದ ನಡೆಸಿದರು.   

ಬ್ಯಾಡಗಿ : ಪಟ್ಟಣದ ಮುಖ್ಯ ರಸ್ತೆಯ ಮೂಲಕ ಹಾದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ ವಿಸ್ತರಣೆ ಕುರಿತು ಅನುಮಾನ ಬರುವ ರೀತಿಯ ಪೋಸ್ಟರ್‌ಗಳು ಜಾಲತಾಣದಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರಸ್ತೆ ವಿಸ್ತರಣೆ ಹೋರಾಟ ಸಮಿತಿಯ ಸದಸ್ಯರು ಮಂಗಳವಾರ ಆಯೋಜಿಸಿದ್ದ ವೃತ್ತದ ಭೂಮಿ ಪೂಜಾ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರು.

ಕಳೆದ 15 ವರ್ಷಗಳಿಂದ ಮುಖ್ಯ ರಸ್ತೆ ವಿಸ್ತರಣೆಗೆ ಹೋರಾಟ ನಡೆಸಲಾಗುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳುವ ಮೊದಲು ಆಶ್ರಯ ಸಮಿತಿಯ ಕಾಂಗ್ರೆಸ್‌ ಸದಸ್ಯರೊಬ್ಬರು ರಾಜ್ಯ ಹೆದ್ದಾರಿ 237.97ರಿಂದ 238.90 ಮತ್ತು 249.20ರಿಂದ 249.40 ಎಂದು ನಮೂದಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು ಎನ್ನಲಾಗಿದೆ. ಹೋರಾಟಗಾರರು ವೃತ್ತ ನಿರ್ಮಾಣ ಭೂಮಿ ಪೂಜೆ ನಡೆಯುವ ಸ್ಥಳಕ್ಕೆ ಆಗಮಿಸಿ ಶಾಸಕ ಬಸವರಾಜ ಶಿವಣ್ಣನವರ ಮುಖ್ಯ ರಸ್ತೆ ವಿಸ್ತರಣೆ ಕುರಿತು ಸ್ಪಷ್ಟನೆ ನೀಡುವವರೆಗೂ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು.

ಮುಖ್ಯರಸ್ತೆ ವಿಷಯದಲ್ಲಿ ಶಾಸಕರಿಗಿಂತ ಮೊದಲು ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ಬ್ಯಾನರ್‌ ಅಳವಡಿಸಿ ಗೊಂದಲ ಸೃಷ್ಟಿಸಿದ್ದಾರೆ. ಇಂತಹ ಘಟನೆಗಳಿಗೆ ಬ್ರೇಕ್‌ ಹಾಕದಿದ್ದರೆ ಶಾಸಕರು ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು. ಇದಕ್ಕೆ ಸ್ಪಷ್ಟನೆ ನೀಡಿದ ಶಾಸಕ ಬಸವರಾಜ ಶಿವಣ್ಣನವರ ತಪ್ಪು ಗ್ರಹಿಕೆಯಿಂದ ಈ ಘಟನೆ ನಡೆದಿದ್ದು, ಯಾವುದೇ ಕಾರಣಕ್ಕೂ ರಸ್ತೆ ವಿಸ್ತರಣೆ ಮಾಡದೆ ಬಿಡುವುದಿಲ್ಲ. ಈ ರಸ್ತೆಯಲ್ಲಿ ಅಪಘಾತಗಳಾಗುವುದನ್ನು ತಪ್ಪಿಸಲು ಸುರಕ್ಷಿತ ವೃತ್ತಗಳನ್ನು ನಿರ್ಮಿಸುವ ಉದ್ದೇಶದಿಂದ ಸೇಫ್ಟಿ ಸರ್ಕಲ್ ನಿರ್ಮಾಣದ ಯೋಜನೆಯಡಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗುತ್ತಿದೆ. ಇದನ್ನು ತಪ್ಪಾಗಿ ಗ್ರಹಿಸಲಾಗಿದ್ದು, ಭೂಮಿ ಪೂಜೆ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಮುಖ್ಯ ರಸ್ತೆ ವಿಸ್ತರಣೆ ವಿಷಯದಲ್ಲಿ ಯಾರೊಂದಿಗೂ ರಾಜೀ ಮಾಡಿಕೊಳ್ಳುವ ಪ್ರಶ್ನೆ ಉದ್ಭವಿಸದು. ತಮ್ಮ ಅವಧಿಯಲ್ಲಿಯೇ ವಿಸ್ತರಣೆ ಕಾರ್ಯ ನಡೆಯಲಿದೆ ಎಂದು ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಭೂಮಿಪೂಜೆಗೆ ಅವಕಾಶ ನೀಡಲಾಯಿತು ಎನ್ನಲಾಗಿದೆ.

ADVERTISEMENT

ಭೂಮಿ ಪೂಜೆ : ಪಟ್ಟಣದ ಗುಮ್ಮನಹಳ್ಳಿ ಮತ್ತು ಅಂಗರಗಟ್ಟಿ ಸರ್ಕಲ್‌ಗಳ ನಿರ್ಮಾಣಕ್ಕೆ ಶಾಸಕ ಬಸವರಾಜ ಶಿವಣ್ಣನವರ ಮಂಗಳವಾರ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಗುಣಮಟ್ಟದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಪ್ರತಿಯೊಂದು ಕಾಮಗಾರಿಯನ್ನು ಖುದ್ದಾಗಿ ಪರೀಕ್ಷಿಸಿ ಬಿಲ್‌ಗಳಿಗೆ ಮಂಜೂರಾತಿ ನೀಡುವುದಾಗಿ ತಿಳಿಸಿದರು. ಸದರಿ ಸ್ಥಳದಲ್ಲಿ ಅಪಘಾತಗಳು ಹೆಚ್ಚು ಆಗುತ್ತಿವೆ. ಇದನ್ನು ಪರಿಗಣಿಸಿ ಹೆದ್ದಾರಿ 136ಕ್ಕೆ ಹೊದಿಕೊಂಡಿರುವ ತಿಳವಳ್ಳಿ, ರಟ್ಟಿಹಳ್ಳಿ ಮತ್ತು ಹಿರೆಕೇರೂರು ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಸರ್ಕಲ್ ನಿರ್ಮಾಣ ಮಾಡಿ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಬರುವುದರಿಂದ ದೊಡ್ಡ ಸಿಡಿ ನಿರ್ಮಾಣ ಮಾಡಲಾಗುವುದು. ಕಾರಣ ಸಾರ್ವಜನಿಕರು ಇದಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ಆಂಜನೆಯಪ್ಪ, ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳಿಯಪ್ಪಗೋಳ, ಗಂಗಣ್ಣ ಎಲಿ, ಚನಬಸಪ್ಪ ಹುಲ್ಲತ್ತಿ, ಡಾ.ಎ.ಎಂ.ಸೌದಾಗರ, ರಾಮಣ್ಣ ಕೊಡಿಹಳ್ಳಿ, ಫಕ್ಕೀರಮ್ಮ ಛಲವಾದಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಬ್ಯಾಡಗಿ ಪಟ್ಟಣದಲ್ಲಿ ಗುಮ್ಮನಹಳ್ಳಿ ವೃತ್ತ ನಿರ್ಮಾಣ ಕಾಮಗಾರಿಗೆ ಶಾಸಕ ಬಸವರಾಜ ಶಿವಣ್ಣನವರ ಭೂಮಿ ಪೂಜೆ ನೆರವೇರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.