ಬ್ಯಾಡಗಿ: ಪಟ್ಟಣದ ಮುಖ್ಯರಸ್ತೆ ವಿಸ್ತರಣೆಗೆ ಆಗ್ರಹಿಸಿ ವರ್ತಕರ ನೇತೃತ್ವದಲ್ಲಿ 40ಕ್ಕೂ ಹೆಚ್ಚು ವಿವಿಧ ಸಂಘಟನೆಗಳು ನಡೆಸಿದ ಪ್ರತಿಭಟನೆ ವಾಪಸ್ ಪಡೆದು ಹದಿನೈದು ದಿನಗಳಾಗಿದ್ದರೂ ರಸ್ತೆಯಲ್ಲಿ ಬಾಯಿ ತೆರೆದುಕೊಂಡಿರುವ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
ಮುಖ್ಯರಸ್ತೆ ಪ್ರವೇಶಿಸುವ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿ, ಜೊತೆಗೆ ಜಲ್ಲಿ ಕಲ್ಲು ಚಲ್ಲಾಪಿಲ್ಲಿಯಾಗಿ ಸೃಷ್ಠಿಯಾದ ಹತ್ತಾರು ಗುಂಡುಗಳನ್ನು ದಾಟಿ ಮುಂದೆ ಸಾಗಬೇಕಾದ ಪರಿಸ್ಥಿತಿ ಇದೆ. ಕಾಲಕಾಲಕ್ಕೆ ಗುಂಡಿಗಳನ್ನು ಮುಚ್ಚಬೇಕಾದ ಲೋಕೋಪಯೋಗಿ ಇಲಾಖೆ ಕಣ್ಣು ಮುಚ್ಚಿ ಕುಳಿತಿದೆ.
ರಸ್ತೆ ದಾಟುವುದು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿದೆ. ಮುಖ್ಯರಸ್ತೆಯಲ್ಲಿ ಗುಂಡಿಗಳು ಹರಿಡಿಕೊಂಡಿವೆ. ಮುಖ್ಯ ರಸ್ತೆಗೆ ಬಂದರೆ ಯಾಕಾದರೂ ಪ್ರವೇಶಿಸಿದೆ ಎಂದು ಸವಾರರು ಪಶ್ಚಾತಾಪ ಪಡುವಂತಾಗಿದೆ. ರಸ್ತೆ ಪಕ್ಕದ ಕೆಲವು ಕಡೆ ಚಿಕ್ಕ ಚರಂಡಿ ನಿರ್ಮಿಸಲಾಗಿದೆ. ಕಸ ಕಡ್ಡಿ ಸಂಗ್ರಹವಾಗಿ ನೀರು ಹರಿಯದೇ ದುರ್ನಾತ ಬೀರುತ್ತಿವೆ. ಸೊಳ್ಳಗಳ ವಾಸ ಸ್ಥಳವಾಗಿ ಪರಿವರ್ತನೆಯಾಗಿದ್ದು ಅಲ್ಲಿಯ ಅನೇಕ ಸಾಂಕ್ರಾಮಿಕ ರೋಗಳಿಗೆ ತುತ್ತಾಗುವ ಆತಂಕ ಹೆಚ್ಚುತ್ತಿದೆ. ಇಂತಹ ದುಸ್ಥಿತಿಯಲ್ಲಿರುವ ಚರಂಡಿಗಳ ಸ್ವಚ್ಛತೆಗೆ ಪುರಸಭೆ ಮುಂದಾಗುತ್ತಿಲ್ಲ. ಯಾಕೆ ಈ ರೀತಿಯ ವಿಳಂಭವಾಗುತ್ತಿದೆ ಎಂದು ಪಾದಚಾರಿಗಳು ಪ್ರಶ್ನಿಸುವಂತಾಗಿದೆ.
ಕಾಲ್ನಡಿಗೆಯಲ್ಲಿ ಸಾಗುವ ವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ರೋಸಿ ಹೋಗಿರುವ ನೂರಾರು ಜನರು ಪುರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಮುಖ್ಯ ರಸ್ತೆಯ ಗುಂಡಿಗಳಲ್ಲಿ ಸಂಗ್ರವಾಗಿರುವ ಮಳೆ ನೀರು, ಚಲಿಸುವ ವಾಹನಗಳಿಂದ ಬಟ್ಟೆಗೆ ಸಿಡಿಯುವ ಭಯ ಒಂದಾದರೆ, ಗುಂಡಿಯ ಮೂಲಕ ಹಾಯ್ದು ಹೋಗುವವರು ಕೈಯಲ್ಲಿ ಜೀವ ಹಿಡಿದುಕೊಂಡು ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.
ಬಾಯಿ ತೆರೆದ ಗುಂಡಿಗಳನ್ನಾದರೂ ಮುಚ್ಚಿ ರಸ್ತೆ ಸಂಚಾರಕ್ಕೆ ಅವಕಾಶಮಾಡಿಕೊಡಬೇಕಾಗಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ರಸ್ತೆ ವಿಸ್ತರಣೆ ವಿಳಂಬ ಸಾಧ್ಯತೆ: ಮುಖ್ಯರಸ್ತೆ ವಿಸ್ತರಣೆಗೆ ವಿರೋಧಿಸಿದ ಭೂಮಾಲಿಕರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ನ್ಯಾಯಾಲಯ ನೀಡಿದ್ದ ತಡೆಯಾಜ್ಞೆಯನ್ನು ತೆರವುಗಳಿಸಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಕೆಲ ಭೂಮಾಲಿಕರು ಇನ್ನೂ ಸಹಕಾರ ನೀಡುತ್ತಿಲ್ಲ. ಪ್ರತಿಭಟನೆ ವಾಪಸ್ ಪಡೆಯುವ ವೇಳೆ ರಸ್ತೆ ವಿಸ್ತರಣೆಗೆ ಒಪ್ಪಿಗೆ ನೀಡಿದ್ದ ಅವರು ಸಂಬಂಧಿಸಿದ ಕಾಗದ ಪತ್ರಗಳಿಗೆ ಸಹಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಭೂಸ್ವಾಧೀನಕ್ಕೆ ಅಗತ್ಯ ದಾಖಲೆಗಲನ್ನು ಸಲ್ಲಿಸಬೇಕಾಗಿದೆ. ಹೀಗಾದರೆ ರಸ್ತೆ ವಿಸ್ತರಣೆ ಕಾರ್ಯ ಮತ್ತಷ್ಟು ವಿಳಂಬವಾಗುವ ಸಂಶಯ ವ್ಯಕ್ತಪಡಿಸಿದರು. ಕಾಗದ ಪತ್ರಗಳಿಗೆ ಸಹಿ ಪಡೆಯಲು ಕೆಲ ಮಾಲೀಕರ ಮನೆಗಳಿಗೆ ಅಲೆದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಧಿಕಾರಿಯೊಬ್ಬರು ಅಳಲು ತೋಡಿಕೊಂಡರು.
ರಾಜ್ಯ ಹೆದ್ದಾರಿ ಹಾಯ್ದು ಹೋಗಿರುವ ನಗರ ಮಿತಿಯಲ್ಲಿ 20 ಮೀ ರಸ್ತೆ ನಿರ್ಮಾಣವಾಗಬೇಕು. ಇನ್ನುಳಿದಂತೆ 6ಮೀ ಜಾಗೆಯನ್ನು ವಾಹನಗಳ ನಿಲುಗಡೆ ಹಾಗೂ ಮತ್ತಿತರ ಕೆಲಸಗಳಿಗೆ ಉಪಯೋಗಿಸಿಕೊಳ್ಳಲು ಬಿಡಬೇಕೆನ್ನುವ ಸರ್ಕಾರದ ನಿಯಮವಿದೆ. ಅದನ್ನು ಯಾವ ನಗರಗಳಲ್ಲಿಯೂ ಪಾಲಿಸಲಾಗಿಲ್ಲ. ಆದರೆ, ಇಲ್ಲಿಯ ಮುಖ್ಯ ರಸ್ತೆಯ ಕೆಲ ಭೂಮಾಲಕರು ಕಟ್ಟಡಗಳನ್ನು ನಿರ್ಮಿಸಿಕೊಳ್ಳಲು 36 ಅಡಿ ಬಿಟ್ಟು ಅನುಮತಿ ನೀಡುವಂತೆ ಕೇಳುತ್ತಿದ್ದಾರೆ. ಆದರೆ, ಸರ್ಕಾರದ ನಿಯಮದ ವಿರುದ್ಧ ಅದನ್ನು ಬರೆದುಕೊಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಒಪ್ಪದ ಭೂಮಾಲಿಕರು ಸಹಿ ಹಾಕಲು ವಿಳಂಬ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರ ಮಿತಿಯಲ್ಲಿ 20 ಮೀ ರಸ್ತೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ನಡೆದ ಸಭೆಯಲ್ಲಿ ಎಲ್ಲರೂ ಒಪ್ಪಿಗೆ ನೀಡಿದ್ದಾರೆ. ಇನ್ನೊಮ್ಮೆ ಮುಖಂಡರು ಹಾಗೂ ಜನಪ್ರತಿನಿಧಿಗಳು ಸೇರಿಕೋಡು ಸೌಹಾರ್ಧಯುತವಾಗಿ ಬಗೆ ಹರಿಸಬೇಕಾಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಮುಖ್ಯ ರಸ್ತೆಯಲ್ಲಿ 20ಮೀ ರಸ್ತೆ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಒಪ್ಪಿಗೆ ಇದೆ. ಆದರೆ, ಮತ್ತೆ ಹೆಚ್ಚುವರಿಯಾಗಿ ಸೆಟ್ ಬ್ಯಾಕ್‌ಗೆ 6 ಮೀ ಜಾಗೆಯನ್ನು ಬಿಟ್ಟು ಮಳಿಗೆ ಕಟ್ಟಿಕೊಳ್ಳಲು ಹೇಳಿದರೆ, ನಮಗಿರುವ ಅತ್ಯಲ್ಪ ಜಾಗೆಯಲ್ಲಿ ಮಳಿಗೆ ಕಟ್ಟಿಕೊಂಡು ವ್ಯಾಪಾರ ವಹಿವಾಟು ಮಾಡುವುದಾದರೂ ಹೇಗೆ, ನಮ್ಮ ಭವಿಷ್ಯದ ಗತಿ ಏನು..? ಎಂದು ಕೆಲ ಭೂಮಾಲಿಕರು ಪ್ರಶ್ನಿಸಿದರು. ಎರಡೂ ಬದಿ ಸೇರಿ 20ಮೀ ರಸ್ತೆಗೆ ಜಾಗೆ ಬಿಟ್ಟು ಮಳಿಗೆ ಕಟ್ಟಿಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
‘ಕಾನೂನು ಪ್ರಕ್ರಿಯೆ ಮುಗಿಸಿ’
ಹಾಲಿ ಮಾಜಿ ಶಾಸಕರು ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ತಹಶೀಲ್ದಾರ್ ಹಾಗೂ 58ಕ್ಕೂ ಹೆಚ್ಚು ವಿವಿಧ ಸಂಘಟನೆಗಳ ಪದಾಧಿಕಾರಿಗಳು ವರ್ತಕರು ಹೋರಾಟಗಾರರು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ಮುಖ್ಯರಸ್ತೆ ವಿಸ್ತರಣೆಗೆ ಸಹಕಾರ ನೀಡಲು ಭೂಮಾಲಿಕರು ಒಪ್ಪಿಗೆ ನೀಡಿದ್ದಾರೆ. ಕಾರಣ ಕಾನೂನು ಪ್ರಕ್ರಿಯೆ ವಿಳಂಬವಾಗಲು ಅವಕಾಶ ನೀಡದೆ ಕಾಗದ ಪತ್ರಗಳಿಗೆ ಸಹಿ ಹಾಕುವುದು ಅಗತ್ಯವಾಗಿದೆ. ಈಗಾಗಲೆ ಜಿಲ್ಲಾಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ನಾಲ್ಕೈದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಆದಷ್ಟು ಬೇಗನೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರೆ ಉತ್ತಮ. ಯಾವುದಕ್ಕೂ ಕಾಯ್ದು ನೋಡಲಾಗುವುದು ಎನ್ನುತ್ತಾರೆ ಮುಖ್ಯರಸ್ತೆ ವಿಸ್ತರಣೆ ಹೋರಾಟ ಸಮಿತಿ ಗೌರವಾಧ್ಯಕ್ಷ ಬ್ಯಾಡಗಿಯ ಗಂಗಣ್ಣ ಎಲಿ.
ಈಗಾಗಲೆ ಜಿಲ್ಲಾಧಿಕಾರಿಗಳು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲು ನಾಲ್ಕೈದು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ. ಆದಷ್ಟು ಬೇಗನೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದರೆ ಉತ್ತಮ-ಗಂಗಣ್ಣ ಎಲಿ, ಮುಖ್ಯರಸ್ತೆ ವಿಸ್ತರಣೆ ಹೋರಾಟ ಸಮಿತಿ ಗೌರವಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.