
ರಾಣೆಬೆನ್ನೂರು: ಕಾರು ಅಪಘಾತ
ರಾಣೆಬೆನ್ನೂರು (ಹಾವೇರಿ ಜಿಲ್ಲೆ): ನಗರದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸರ್ವೀಸ್ ರಸ್ತೆಗೆ ಬಿದ್ದ ಪರಿಣಾಮ ನಾಲ್ವರು ಸಾವಿಗೀಡಾಗಿದ್ದು, ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಗುರುವಾರ ಮಧ್ಯರಾತ್ರಿ 12.30ರಲ್ಲಿ ನಡೆದಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಹಾವೇರಿಯ ಅಶ್ವಿನಿ ನಗರದ ಸುರೇಶ್ (45), ಐಶ್ವರ್ಯ( 22 ) ಚೇತನಾ (7) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಮೀಳಾ (28) ರಾಣೆಬೆನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಚನ್ನವೀರಪ್ಪ ಜಾಡಿ, ಸಾವಿತ್ರಾ ಜಾಡಿ, ವಿಕಾಸ ಬಾರ್ಕಿ, ಪ್ರಭುರಾಜ್ ಸಮಗಂಡಿ, ಗೀತಾ ಭಾರ್ಕಿ, ಹೊನ್ನಪ್ಪ ಬಾರ್ಕಿ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಹೆಚ್ಚುವರಿ ಚಿಕಿತ್ಸೆಗೆ ನಾಲ್ವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ ಎಸ್ಪಿ ಅoಶುಕುಮಾರ್ ಹಾಗೂ ಡಿವೈಎಸ್ಪಿ ಗಿರೀಶ್ ಭೋಜಣ್ಣನವರ ಘಟನಾ ಸ್ಥಳಕ್ಕೆ ಬಂದು ಪರಿಶೀಲಿಸಿದರು. ನಗರದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.