ADVERTISEMENT

ಹಾವೇರಿ | ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್: ವರದಿ ಕೇಳಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:33 IST
Last Updated 25 ಫೆಬ್ರುವರಿ 2026, 6:33 IST
   

ಹಾವೇರಿ: ಜಿಲ್ಲೆಗೊಂದು ಡಿಸಿಸಿ (ಜಿಲ್ಲಾ ಕೋ–ಆಪರೇಟಿವ್) ಬ್ಯಾಂಕ್ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಬಗ್ಗೆ ಆರ್ಥಿಕ ಪ್ರಗತಿ ಹಾಗೂ ಮೂಲ ಸೌಕರ್ಯಗಳನ್ನು ಪರಿಶೀಲಿಸಿ ವರದಿ ನೀಡುವಂತೆ ರಾಜ್ಯದಲ್ಲಿರುವ ಹಾಲಿ 8 ಡಿಸಿಸಿ ಬ್ಯಾಂಕ್‌ಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಎರಡು ಹಾಗೂ ಅದಕ್ಕಿಂತ ಹೆಚ್ಚು ಜಿಲ್ಲೆಗಳನ್ನು ಸೇರಿಸಿ ಒಂದು ಡಿಸಿಸಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿವೆ. ಇದರಿಂದ ಆಯಾ ಜಿಲ್ಲೆಗಳ ಜನರು ಪ್ರತಿಯೊಂದಕ್ಕೆ ಮತ್ತೊಂದು ಜಿಲ್ಲೆಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್ ಮಾಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿತ್ತು. ಆದರೆ, ಆರ್‌ಬಿಐ ನಿಯಮಾವಳಿ ಮುಂದಿಟ್ಟುಕೊಂಡು ಕೋರಿಕೆಯನ್ನು ತಿರಸ್ಕರಿಸಲಾಗಿತ್ತು.

ಆದರೆ, ಈಗ ‘ಜಿಲ್ಲೆಗೊಂದು ಡಿಸಿಸಿ ಬ್ಯಾಂಕ್’ ಸ್ಥಾಪನೆ ಬಗ್ಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಘೋಷಣೆ ಮಾಡಿದ್ದಾರೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಮಾಡಲು ಅಗತ್ಯವಿರುವ ಮಾಹಿತಿ ನೀಡುವಂತೆ ರಾಜ್ಯದ ಬಳ್ಳಾರಿ (ಬಳ್ಳಾರಿ, ವಿಜಯನಗರ), ಬೆಂಗಳೂರು (ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ), ಕಲಬುರಗಿ (ಕಲಬುರಗಿ, ಯಾದಗಿರಿ), ಧಾರವಾಡ (ಧಾರವಾಡ, ಹಾವೇರಿ, ಗದಗ), ಕೋಲಾರ (ಕೋಲಾರ, ಚಿಕ್ಕಬಳ್ಳಾಪುರ), ಮೈಸೂರು (ಮೈಸೂರು, ಚಾಮರಾಜನಗರ), ರಾಯಚೂರು (ರಾಯಚೂರು, ಕೊಪ್ಪಳ) ಹಾಗೂ ಸೌತ್ ಕೆನರಾ (ದಕ್ಷಿಣ ಕನ್ನಡ, ಉಡುಪಿ) ಕೋ–ಆಪರೇಟಿವ್ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ವರದಿ ಬಂದ ನಂತರ, ರಾಜ್ಯ ಸಹಕಾರ ಇಲಾಖೆಯಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ನಂತರವೇ, ಪ್ರತ್ಯೇಕ ಡಿಸಿಸಿ ಬ್ಯಾಂಕ್‌ ಘೋಷಣೆಯಾಗಲಿದೆ.

ADVERTISEMENT

‘ಧಾರವಾಡ ಡಿಸಿಸಿ ಬ್ಯಾಂಕ್‌ ವ್ಯಾಪ್ತಿಯಲ್ಲಿರುವ ಹಾವೇರಿ, ಗದಗ ಜಿಲ್ಲೆಗಳಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡುವಂತೆ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿತ್ತು. ಈಗ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರೇ ಆಸಕ್ತಿ ತೋರಿಸಿದ್ದಾರೆ. ಸದ್ಯದಲ್ಲೇ ಡಿಸಿಸಿ ಬ್ಯಾಂಕ್ ಘೋಷಣೆಯಾಗಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.