ಹಾವೇರಿ: ರಾಜ್ಯ ಉಪ ಲೋಕಾಯುಕ್ತ ಬಿ. ವೀರಪ್ಪ ಅವರು ನಗರಕ್ಕೆ ಭೇಟಿ ನೀಡಿದ್ದು, ನಗರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ಬೆಳಿಗ್ಗೆಯೇ ಭೇಟಿ ನೀಡಿದರು.
ರೈತರಿಂದ ಸೊಪ್ಪು ಹಾಗೂ ತರಕಾರಿ ಖರೀದಿಸುವ ವ್ಯಾಪಾರಿಗಳನ್ನು ವೀರಪ್ಪ ಅವರು ಮಾತನಾಡಿಸಿದರು.
ಶೌಚಾಲಯ ಹಾಗೂ ಮೂಲ ಸೌಕರ್ಯ ಇಲ್ಲದಿದ್ದಕ್ಕೆ ಗರಂ ಆದ ವೀರಪ್ಪ, 'ಕೋಟಿಗಟ್ಟಲೇ ಆದಾಯ ಸಂಗ್ರಹ ಆಗುತ್ತದೆ. ನೀವು ಏಕೆ ಸೌಕರ್ಯ ಕಲ್ಪಿಸಲ್ಲ' ಎಂದು ತರಾಟೆಗೆ ತೆಗೆದುಕೊಂಡರು.
'ನನಗೆ ತಪ್ಪು ಮಾಹಿತಿ ನೀಡಬೇಡಿ. ಯಾಮಾರಿಸಬೇಡಿ' ಎಂದೂ ಗರಂ ಆದರು.
ತೂಕದ ಯಂತ್ರ ಪರಿಶೀಲನೆ ನಡೆಸಿದ ವೀರಪ್ಪ, ಅದರಲ್ಲಿ ವ್ಯತ್ಯಾಸ ಇರುವುದನ್ನು ಗಮನಿಸಿದರು.
ತೂಕದ ಯಂತ್ರದ ಎರಡು ಫಲಕಗಲ್ಲಿ ಒಂದು ಕಡೆ 80 ಕೆ.ಜಿ ಹಾಗೂ ಇನ್ನೊಂದು ಕಡೆ 60 ಕೆ.ಜಿ ಪ್ರಮಾಣ ತೋರಿಸುತ್ತಿತ್ತು. ತೂಕದ ಯಂತ್ರವನ್ನು ಪ್ರಮಾಣೀಕರಿಸಿದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ತೂಕದಲ್ಲಿ ಮೋಸ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
'ತೂಕದಲ್ಲಿ ರೈತರಿಗೆ ಮೋಸ ಮಾಡಬೇಡಿ' ಎಂದು ವೀರಪ್ಪ ಅವರು ವ್ಯಾಪಾರಿಗಳಿಗೆ ಹೇಳಿದರು.
ಮಾರುಕಟ್ಟೆಯಲ್ಲಿ ವಹಿವಾಟಿನ ದಾಖಲೆಗಳನ್ನು ಸಂಗ್ರಹಿಸಿದರು. ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ವೀರಪ್ಪ, 'ಮಾರುಕಟ್ಟೆಯಲ್ಲಿ ಎಷ್ಟು ಆದಾಯ ಸಂಗ್ರಹವಾಗಿದೆ' ಎಂದು ಎಪಿಎಂಸಿ ಅಧಿಕಾರಿಗಳನ್ನು ಪ್ರಶ್ನಿಸಿದರು.
'ವಾರ್ಷಿಕ ₹ 3 ಕೋಟಿ ಆದಾಯ ಸಂಗ್ರಹವಾಗುತ್ತದೆ' ಎಂದು ಅಧಿಕಾರಿಗಳು ಹೇಳಿದರು.
'ಅಷ್ಟು ಆದಾಯ ಬಂದರೂ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯ ಏಕಿಲ್ಲ. ರೈತರು, ವ್ಯಾಪಾರಿಗಳು, ಖರೀದಿದಾರರ ವಿಶ್ರಾಂತಿಗೆ ಮೂಲ ಸೌಕರ್ಯ ಕಲ್ಪಿಸಿ' ಎಂದು ವೀರಪ್ಪ ಹೇಳಿದರು.
ಉಪ ಲೋಕಾಯುಕ್ತ ವೀರಪ್ಪ ಅವರು ಫೆ. 12ರಿಂದ 14ರವರೆಗೆ ಜಿಲ್ಲೆಯಲ್ಲಿ ಇರಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.