ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ದಿಢೀರ್‌ ಇಳಿಕೆ: ಬೆಲೆಯೂ ತುಸು ಕುಸಿತ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:36 IST
Last Updated 28 ಏಪ್ರಿಲ್ 2025, 13:36 IST
<div class="paragraphs"><p>ಬ್ಯಾಡಗಿ ಮೆಣಸಿನಕಾಯಿ</p></div>

ಬ್ಯಾಡಗಿ ಮೆಣಸಿನಕಾಯಿ

   

ಬ್ಯಾಡಗಿ: ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ 76,313 ಚೀಲ (19,078 ಕ್ವಿಂಟಲ್‌ ) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ದಿಢೀರ್‌ ಇಳಿಕೆ ಕಂಡಿದೆ.

ಬೆಲೆಯಲ್ಲಿಯೂ ತುಸು ಇಳಿಕೆಯಾಗಿದೆ. ಕಳೆದ ಗುರುವಾರ 1,04,516 ಚೀಲ (26,129 ಕ್ವಿಂಟಲ್‌) ಆವಕವಾಗಿತ್ತು. ಮೋಡ ಕವಿದ ವಾತಾವರಣ ಹಾಗೂ ಆಗಾಗ ಮಳೆ ಸುರಿಯುತ್ತಿರುವುದರಿಂದ ಮೆಣಸಿನಕಾಯಿ ತೇವಾಂಶ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆವಕದಲ್ಲಿ ಇಳಿಮುಖ ಕಂಡಿದೆ ಎಂದು ವರ್ತಕರು ತಿಳಿಸಿದರು. 

ADVERTISEMENT

ಕಳೆದ ವಾರ ಒಟ್ಟಾರೆ 2,60,516 ಚೀಲ (65,129 ಚೀಲ) ಮೆಣಸಿನಕಾಯಿ ಮಾರಾಟವಾದಂತಾಗಿದೆ. ಸೋಮವಾರ ಮಾರುಕಟ್ಟೆಗೆ 5,965 ಲಾಟ್‌ ಮೆಣಸಿನಕಾಯಿ ಚೀಲಗಳನ್ನು ಟೆಂಡರ್‌ಗೆ ಇಡಲಾಗಿದ್ದು, ಈ ಪೈಕಿ ತೇವಾಂಶ ಹೆಚ್ಚಿರುವ ಹಾಗೂ ಗುಣಮಟ್ಟದ ಕೊರತೆ ಇರುವ 203 ಲಾಟ್‌ಗಳಿಗೆ ವರ್ತಕರು ಟೆಂಡರ್ ನಮೂದಿಸಿಲ್ಲ. 65 ಚೀಲ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹23,189 ರಂತೆ, 22 ಚೀಲ ಕಡ್ಡಿ ಮೆಣಸಿನಕಾಯಿ ₹19,399 ರಂತೆ ಹಾಗೂ ಗುಂಟೂರು ತಳಿ ಮೆಣಸಿನಕಾಯಿ ₹12,329 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಆದರೆ ಗರಿಷ್ಠ ಬೆಲೆಯಲ್ಲಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹1 ಸಾವಿರ, ಕಡ್ಡಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹2 ಸಾವಿರ ಇಳಿಕೆಯಾಗಿದೆ. 

ಸರಾಸರಿ ಬೆಲೆಯಲ್ಲಿಯೂ ಇಳಿಕೆಯಾಗಿದ್ದು, ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ₹19,859, ಬ್ಯಾಡಗಿ ಕಡ್ಡಿ ಮೆಣಸಿನಕಾಯಿ ₹18,009 ಹಾಗೂ ಗುಂಟೂರ ತಳಿ ₹11,129ರಂತೆ ಮಾರಾಟವಾಗಿವೆ. ಇಂದಿನ ಟೆಂಡರ್ ಪ್ರಕ್ರಿಯೆಯಲ್ಲಿ ಒಟ್ಟು 287 ಖರೀದಿದಾರ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.