ADVERTISEMENT

ವಸತಿ ರಹಿತರ ಮಾಹಿತಿ ಸಂಗ್ರಹಿಸಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 14:10 IST
Last Updated 7 ಆಗಸ್ಟ್ 2022, 14:10 IST
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ನಡೆಸಿದರು 
ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ನಡೆಸಿದರು    

ಹಾವೇರಿ: ನಿವೇಶನ ಹಾಗೂ ವಸತಿ ರಹಿತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮಾಹಿತಿ ಸಂಗ್ರಹಿಸಿ, ಶೀಘ್ರವೇ ಸಲ್ಲಿಕೆ ಮಾಡಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ. ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಮನೆ ಇಲ್ಲದ ಹಾಗೂ ನಿವೇಶನ ಇಲ್ಲದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಆರು ತಿಂಗಳೊಳಗಾಗಿ ನಿವೇಶನ ಹಾಗೂ ವಸತಿ ಕಲ್ಪಿಸಲು ಸರ್ಕಾರ ಉದ್ದೇಶಿಸಿದೆ. ಈ ಕುರಿತಂತೆ ಪ್ರಾಯೋಗಿಕವಾಗಿ ಹಾವೇರಿ, ಚಿತ್ರದುರ್ಗ, ಚಾಮರಾಜನಗರ ಹಾಗೂ ಕಲಬುರ್ಗಿಯಲ್ಲಿ ವಸತಿ, ನಿವೇಶನ ರಹಿತರ ಸಮೀಕ್ಷೆಯನ್ನು ಕೈಗೊಂಡಿದೆ. ತ್ವರಿತವಾಗಿ ಸರ್ವೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ADVERTISEMENT

ನಗರಾಭಿವೃದ್ಧಿ ಇಲಾಖೆಗೆ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ.ಯೋಜನೆಯಡಿ ಬಿಡುಗಡೆಯಾದ ಅನುದಾನ ಬಳಕೆ ಮಾಡದೇ ಇರುವ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ಒಂದು ವಾರದಲ್ಲಿ ನಿಗದಿತ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರಗತಿಯಾಗಬೇಕು. ಎಲ್ಲ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿ, ಇಲ್ಲವಾದರೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಿಕೊಡಿ ಎಂದು ಸೂಚನೆ ನೀಡಿದರು.

ಕ್ರೈಸ್ ಶಾಲೆಗಳಲ್ಲಿ ಹೆಚ್ಚುವರಿ ಪ್ರವೇಶಾವಕಾಶ ಕಲ್ಪಿಸುವ ಕುರಿತಂತೆ ಕ್ರಮವಹಿಸಿ. 6ನೇ ತರಗತಿ ವಿದ್ಯಾರ್ಥಿಗಳು ಹೆಚ್ಚಿನ ಪ್ರವೇಶ ಕಂಡುಬಂದಿದೆ. ಎ ಮತ್ತು ಬಿ ವಿಭಾಗವಾಗಿ ವರ್ಗೀಕರಿಸಿ ಹೆಚ್ಚುವರಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಿ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳ ಹಾಗೂ ವಸತಿ ಶಾಲೆಗಳ ಕಟ್ಟಡ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಮಹಿಳೆಯರಿಗೆ ಹೊಲಿಗೆ ತರಬೇತಿ ಕಾರ್ಯಕ್ರಮ ಸ್ಥಗಿತಗೊಳಿಸಲಾಗಿತ್ತು. ಈ ವರ್ಷದಿಂದ ಪುನಃ ಆರಂಭಿಸಲಾಗುವುದು. ಈ ಕುರಿತಂತೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ವಸತಿ ಶಾಲೆಗಳ ಮತ್ತು ವಿದ್ಯಾರ್ಥಿ ನಿಲಯಗಳ ಅಡಿಗೆ ಮನೆ ನವೀಕರಣ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಹೊರಗುತ್ತಿಗೆ ನೌಕರರ ಬಾಕಿ ವೇತನವನ್ನು ಈ ವಾರದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದವರಿಗೆ ಉದ್ಯೋಗಖಾತ್ರಿ ಯೋಜನೆ, ಕೌಶಲ ಅಭಿವೃದ್ಧಿ ಯೋಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಶಿಕ್ಷಣ, ವಸತಿ, ಕ್ರೀಡೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌, ಸಮಾಜ ಕಲ್ಯಾಣ ಇಲಾಖೆಯ ವಿಶೇಷ ಘಟಕ ಯೋಜನೆಗಳ ಅನುಷ್ಠಾನ ವಿಭಾಗದ ನಿರ್ದೇಶಕಿ ಉರ್ಮಿಳಾ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.