ADVERTISEMENT

ಹಾವೇರಿ | ಸಾಧನಾ ಸಮಾವೇಶ: 30 ಸಾವಿರ ಮಂದಿಗೆ ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 7:42 IST
Last Updated 16 ಫೆಬ್ರುವರಿ 2026, 7:42 IST
<div class="paragraphs"><p>ಶಿವಾನಂದ ಪಾಟೀಲ</p></div>

ಶಿವಾನಂದ ಪಾಟೀಲ

   

ಹಾವೇರಿ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧನಾ ಸಮಾವೇಶ–ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ’ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ 30 ಸಾವಿರ ಮಂದಿಗೆ ಹಕ್ಕುಪತ್ರ ಹಾಗೂ ಇತರೆ ಕಂದಾಯ ದಾಖಲೆಗಳನ್ನು ವಿತರಿಸಲಾಗಿದೆ.

ನಗರದ ಹೊರವಲಯದಲ್ಲಿರುವ ಅಜ್ಜಯ ದೇವಸ್ಥಾನ ಎದುರಿನ 130 ಎಕರೆ ಜಾಗದಲ್ಲಿ ಹಮ್ಮಿಕೊಂಡಿದ್ದ ಸಮಾವೇಶಕ್ಕಾಗಿ ಹಾಕಿದ್ದ ಶೆಡ್‌ಗಳನ್ನು ತೆರವು ಮಾಡುವ ಕೆಲಸ ಭಾನುವಾರ ನಡೆಯಿತು. ಜರ್ಮನ್ ಮಾದರಿಯ ಶೆಡ್‌ ಇರುವುದರಿಂದ, ಅದನ್ನು ತೆರವು ಮಾಡಲು ಎರಡ್ಮೂರು ದಿನ ಬೇಕಾಗಬಹುದೆಂದು ಕಾರ್ಮಿಕರು ಹೇಳಿದರು.

ADVERTISEMENT

ಸಮಾವೇಶದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅವರ ಸುಗಮ ಸಂಚಾರ ಹಾಗೂ ಭದ್ರತೆಗಾಗಿ ನಗರದ ಹಲವು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಭಾನುವಾರ ನಗರದಲ್ಲಿ ಸಂಚರಿಸಿದ ಪೊಲೀಸರು, ಬಹುತೇಕ ಬ್ಯಾರಿಕೇಡ್‌ಗಳನ್ನು ತೆರವು ಮಾಡಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದರು.

ಎಲ್ಲರ ಶ್ರಮದಿಂದ ಸಮಾವೇಶ ಯಶಸ್ವಿ:

ಸಮಾವೇಶದಲ್ಲಿ ಸೇರಿದ್ದ ಜನರನ್ನು ನೋಡಿ ತುಂಬಾ ಖುಷಿಯಾಗಿದೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಪಕ್ಷದ ಮುಖಂಡರು ಸಮಾವೇಶಕ್ಕೆ ನೀಡಿದ ಸಹಕಾರ ದೊಡ್ಡದು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪೊಲೀಸರು ಹಾಗೂ ಇತರರ ಶ್ರಮದಿಂದ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶ ಯಶಸ್ವಿಯಾಗಿ ಜರುಗಿದೆ. ಜಿಲ್ಲೆಯ ಅಭಿವೃದ್ಧಿಗಾಗಿ ನಾವು ಇದೇ ಹಾದಿಯಲ್ಲಿ ಮುನ್ನಡೆಯಲಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸಮಾವೇಶದಲ್ಲಿ ಜಿಲ್ಲೆಯ 30 ಸಾವಿರಕ್ಕೂ ಅಧಿಕ ಫಲಾನುಭವಿಗಳಿಗೆ, ಹಕ್ಕು ಪತ್ರ ಹಾಗೂ ಇತರೆ ಕಂದಾಯ ದಾಖಲೆಗಳನ್ನು ವಿತರಣೆ ಮಾಡಲಾಗಿದೆ. ಇನ್ನೂ ಹತ್ತು ಸಾವಿರ ಫಲಾನುಭವಿಗಳಿಗೆ ವಿವಿಧ ಹಕ್ಕುಪತ್ರಗಳ ವಿತರಣೆ ಬಾಕಿ ಇದ್ದು, ಆದಷ್ಟು ಬೇಗ ವಿತರಿಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಕಂದಾಯ ಗ್ರಾಮದಡಿ 20,186 ಹಕ್ಕುಪತ್ರ, 7,825 ಇ–ಪೌತಿ, 502 ದರಖಾಸ್ತು ಪೋಡಿ, 1,675 ಪಿಎಂಜಿಎ, 16 ಬಗರ್‌ ಹುಕುಂ ದಾಖಕೆಗಳನ್ನು ವಿತರಣೆ ಮಾಡಲಾಗಿದೆ’ ಎಂದರು.

‘ಕಂದಾಯ ಇಲಾಖೆಯಲ್ಲಿ ಬಹು ದೊಡ್ಡ ಬದಲಾವಣೆ ಆಗುತ್ತಿದೆ. ಇಲಾಖೆಯ ಆಸ್ತಿ ಮತ್ತು ಭೂದಾಖಲೆಗಳ ನಿರ್ವಹಣೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆಗಳನ್ನು ಶಾಶ್ವತವಾಗಿ ಪರಿಹರಿಸಲು ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಉಪಕರಣಗಳು ಹಾಗೂ ಹೆಚ್ಚಿನ ಸಿಬ್ಬಂದಿಯೊಂದಿಗೆ ಸಮಗ್ರ ಬದಲಾವಣೆ ತರಲಾಗಿದೆ. ಕಾಗದ ರಹಿತ ಆಡಳಿತ, ಆಧಾರ್ ಜೋಡಣೆ, ಬಾಕಿ ಭೂ ವ್ಯಾಜ್ಯ ಪ್ರಕರಣ ಇತ್ಯರ್ಥ, ಖಾತೆ ಬದಲಾವಣೆ, ಲ್ಯಾಂಡ್‌ ಬಿಟ್‌ ಮೂಲಕ ಸರ್ಕಾರಿ ಆಸ್ತಿಗಳ ರಕ್ಷಣೆ ಸೇರಿ ಹಲವು ಕಾರ್ಯಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ’ ಎಂದು ಹೇಳಿದರು.

‘ಸಮಾವೇಶದ ಮೂಲಕ ನೀಡಿದ ಹಕ್ಕು ಪತ್ರಗಳು, ಜನರ ಬದುಕಿಗೊಂದು ಭರವಸೆ ನೀಡಿವೆ. ರಾಜ್ಯ ಸರ್ಕಾರ ಸಾವಿರ ದಿನಗಳನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ ಹಾವೇರಿಯಲ್ಲಿ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶವನ್ನು ಆಯೋಜನೆ ಮಾಡಲು ಅವಕಾಶ ಸಿಕ್ಕಿದ್ದು, ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ’ ಎಂದರು.

ಯಶೋಧಾ ವಂಟಗೋಡಿ

ಡಿ.ಸಿ.–ಎಸ್‌.ಪಿ. ನೇತೃತ್ವ

‘ಸರ್ಕಾರ ಸಾವಿರ ದಿನ ಪೂರೈಸಿದ್ದಕ್ಕಾಗಿ ಹಾವೇರಿಯಲ್ಲಿ ಫೆ. 14ರಂದು ಸಾಧನಾ ಸಮಾವೇಶ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಘೋಷಣೆ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ತಯಾರಿ ಶುರುವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಶಾಸಕರಾದ ಶ್ರೀನಿವಾಸ್ ಮಾನೆ ಬಸವರಾಜ ಶಿವಣ್ಣನವರ ರುದ್ರಪ್ಪ ಲಮಾಣಿ ಯು.ಬಿ. ಬಣಕಾರ ಯಾಸೀರ್ ಅಹ್ಮದ್ ಖಾನ್ ಪಠಾಣ ಸಮಾವೇಶದ ರೂಪುರೇಷೆ ಸಿದ್ಧಪಡಿಸಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಸಹ ಸದಾ ಜೊತೆಗಿದ್ದರು. ಬಳಿಕ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಜಿಲ್ಲಾ ಎಸ್‌.ಪಿ. ಯಶೋಧಾ ವಂಟಗೋಡಿ ಅವರು ಸಮಾವೇಶ ಆಯೋಜನೆಗೆ ಬೇಕಾದ ಸಿದ್ಧತೆ ಶುರು ಮಾಡಿದರು.

ಜಾಗ ಸ್ವಚ್ಛಗೊಳಿಸುವುದರಿಂದ ಹಿಡಿದು ಸಮಾವೇಶ ಮುಗಿದು ಪೆಂಡಾಲ್ ತೆರವು ಮಾಡುವವರೆಗೂ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಸ್ಥಳದಲ್ಲಿ ಹಾಜರಿದ್ದರು. ಜಿಲ್ಲಾಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಿ ಕೆಲಸ ಹಂಚಿಕೆ ಮಾಡಿದರು. ಇದರ ಪರಿಣಾಮವಾಗಿ ಸಣ್ಣದೊಂದು ಸಮಸ್ಯೆಯಾಗದಂತೆ ಸಮಾವೇಶ ಸುಗಮವಾಗಿ ಮುಕ್ತಾಯಗೊಂಡಿತು.

‘ಸಮಾವೇಶಕ್ಕೆ ಲಕ್ಷಾಂತರ ಜನರು ಬರುತ್ತಾರೆ’ ಎಂಬುದನ್ನು ಮೊದಲೇ ತಿಳಿದಿದ್ದ ಎಸ್‌.ಪಿ. ಯಶೋಧಾ ಪಾರ್ಕಿಂಗ್ ಹಾಗೂ ಭದ್ರತೆಗೆ ಪೂರ್ವ ತಯಾರಿ ಮಾಡಿಕೊಂಡರು. ಗಣ್ಯರ ಸಂಚಾರಕ್ಕೂ ಪ್ರತ್ಯೇಕ ಮಾರ್ಗ ಕಂಡುಕೊಂಡರು. ಸಮಾವೇಶಕ್ಕೂ ಎರಡು ದಿನ ಮುನ್ನವೇ ಪೊಲೀಸರ ತಯಾರಿ ಶುರುವಾಯಿತು. ಜನರನ್ನು ಎಲ್ಲಿ ಇಳಿಸಬೇಕು? ವೇದಿಕೆ ಬಳಿ ಹೇಗೆ ಕಳುಹಿಸಬೇಕು ? ಸಮಾವೇಶ ಮುಗಿದ ಮೇಲೆ ವಾಪಸು ಯಾವ ಮಾರ್ಗದಲ್ಲಿ ಕಳುಹಿಸಬೇಕು ? ಊಟಕ್ಕೆ ಹೇಗೆ ವ್ಯವಸ್ಥೆ ಮಾಡಬೇಕು ? ಎಂಬಿತ್ಯಾದಿ ಸಿದ್ಧತೆಯನ್ನು ಮೊದಲೇ ಮಾಡಿಟ್ಟುಕೊಂಡಿದ್ದರು. ಹೀಗಾಗಿ ಸಣ್ಣದೊಂದು ಅವಘಡಕ್ಕೂ ಆಸ್ಪದ ನೀಡದಂತೆ ಸಮಾವೇಶ ಸಮಾಪ್ತಿಗೊಂಡಿತು.

ವಿಜಯ ಮಹಾಂತೇಶ ದಾನಮ್ಮನವರ  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.