ADVERTISEMENT

ಕಾಂಗ್ರೆಸ್ ನನ್ನನ್ನು ಕಡೆಗಣಿಸಿದ್ದು ತಪ್ಪು: ಕುಬೇರಪ್ಪ ಆಕ್ರೋಶ

ಪಶ್ವಿಮ ಪದವೀಧರರ ಮತಕ್ಷೇತ್ರದ ಚುನಾವಣೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 4:30 IST
Last Updated 3 ಜನವರಿ 2026, 4:30 IST
ಆರ್‌.ಎಂ.ಕುಬೇರಪ್ಪ
ಆರ್‌.ಎಂ.ಕುಬೇರಪ್ಪ   

ರಾಣೆಬೆನ್ನೂರು: ‘ಕಾಂಗ್ರೆಸ್ ಪಕ್ಷ ನನ್ನನ್ನು ಕಡೆಗಣಿಸಿರುವುದು ತುಂಬಾ ನೋವುಂಟು ಮಾಡಿದೆ. ನನಗಾಗಿರುವ ಈ ನಷ್ಟವನ್ನು ತುಂಬಿಕೊಡಲು ಪಕ್ಷ ನನಗೆ ತಕ್ಷಣ ಸೂಕ್ತ ಸ್ಥಾನಮಾನವನ್ನು ನೀಡಬೇಕು. ಮುಂಬರುವ ಪಶ್ವಿಮ ಪದವೀಧರ ಮತಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ನನಗೆ ಟಿಕೆಟ್ ನೀಡುವ ಭರವಸೆ ನೀಡಬೇಕು’ ಎಂದು ಆಕಾಂಕ್ಷಿ ಆರ್.ಎಂ. ಕುಬೇರಪ್ಪ ಹೇಳಿದರು.

‘ನನಗೆ ಟಿಕೆಟ್‌ ನೀಡದಿದ್ದರೆ ಈಗ ಟಿಕೆಟ್ ಪಡೆದಿರುವ ಅಭ್ಯರ್ಥಿಯ ಗೆಲುವು ಸಾಧ್ಯವಿಲ್ಲ ಎಂಬ ಸಂದೇಶವನ್ನು ನನ್ನ ಬೆಂಬಲಿಗರು ಹಾಗೂ ಕಾರ್ಯಕರ್ತರು ಗಂಭೀರವಾಗಿ ನೀಡಿದ್ದಾರೆ’ ಎಂದು ಶುಕ್ರವಾರ ಪತ್ರಿಕಾ ಪ್ರಕಟಣೆ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಇಲ್ಲದಾಗ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಶಿಕ್ಷಕರು ಹಾಗೂ ಪದವೀಧರರ ಘಟಕದ ರಾಜ್ಯ ಘಟಕದ ಅಧ್ಯಕ್ಷನಾಗಿ ಇಡೀ ರಾಜ್ಯದ ತುಂಬೆಲ್ಲಾ ಪ್ರವಾಸ ಮಾಡಿ  ಪಕ್ಷ ಸಂಘಟನೆ ಮಾಡಿದ್ದೇನೆ. 2020 ರ ಪದವೀಧರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲದಂತಹ ಸಮಯದಲ್ಲಿ ಪಕ್ಷದ ಆದೇಶದಂತೆ ಚುನಾವಣೆಯಲ್ಲಿ ಸ್ಪರ್ಧಿಸಿ, ಪಕ್ಷಕ್ಕೆ ಗೌರವ ತಂದಿರುವೆ’ ಎಂದು ಹೇಳಿದ್ದಾರೆ.

ADVERTISEMENT

‘ಈ ಕ್ಷೇತ್ರಗಳಲ್ಲಿ ಕೇವಲ ಮೂವರು ಶಾಸಕರಿದ್ದಾಗ ಮತ್ತು ರಾಜ್ಯದಲ್ಲಿ ಪ್ರಧಾನಿ ಮೋದಿ ಹವಾ ಇದ್ದಾಗ, ಈಗ ಟಿಕೆಟ್ ಕೇಳಿರುವವರು, ಟಿಕೆಟ್ ಪಡೆದು ಕೊಂಡಿರುವವರು ಆಗ ಎಲ್ಲಿ ಹೋಗಿದ್ದರು. ಪಕ್ಷಕ್ಕೆ ಇವರ ಕೊಡುಗೆ ಏನು’ ಎಂದು ಪ್ರಶ್ನಿಸಿದ ಅವರು, ಈ ಬಾರಿ ಪಕ್ಷ ಟಿಕೆಟ್ ನೀಡಲು ಮಾನದಂಡವಾದರು ಯಾವುದು?’ ಎಂದು ಕೇಳಿದ್ದಾರೆ.

‘ಬೆಂಬಲಿಗರ ಜೊತೆ ಸಭೆ ಮಾಡಿ ತೀರ್ಮಾನ’

‘ಮತಕ್ಷೇತ್ರದಲ್ಲಿ ಸರ್ವೆ ಮಾಡಿಸಿ ಯಾರ ಪರ ಮತದಾರರ ಒಲವಿದೆಯೋ ಅಂತಹವರಿಗೆ ಟಿಕೆಟ್ ನೀಡಿ ಎಂದು ಮನವಿ ಮಾಡಿದ್ದೆ ನನ್ನ ಅಭಿಪ್ರಾಯದ ವಿರುದ್ಧ ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಗೂ ಪರಿಚಯವಿಲ್ಲದ ಹಾಗೂ ಯಾವ ಕಾರ್ಯಕರ್ತರಿಗೂ ಪರಿಚಯವಿಲ್ಲದ ಅಭ್ಯರ್ಥಿಗೆ ಟಿಕೆಟ್ ನೀಡಿದರೆ ನನ್ನಂತಹ ಪ್ರಾಮಾಣಿಕ ಕಾರ್ಯಕರ್ತರು ಪಕ್ಷದ ಜೊತೆಗೆ ಹೇಗೆ ಬರಲು ಸಾಧ್ಯ? ನಾಲ್ಕೂ ಜಿಲ್ಲೆಗಳಲ್ಲಿ ನನ್ನ ಬೆಂಬಲಿಗರ ಜೊತೆ ಸಭೆ ಮಾಡಿ ಅವರ ತೀರ್ಮಾನದಂತೆ ನನ್ನ ಮುಂದಿನ ರಾಜಕೀಯ ನಡೆ ನಿರ್ಧರಿಸಲು ತೀರ್ಮಾನಿಸಿದ್ದೇನೆ ಎಂದು ಆರ್.ಎಂ. ಕುಬೇರಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.