
ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ನೀಡನೇಗಿಲು ಗ್ರಾಮದ ಮನೆಯೊಂದರಲ್ಲಿ ನಡೆದಿದ್ದ ದರೋಡೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಹಾವೇರಿ ಡಿಎಆರ್ (ಜಿಲ್ಲಾ ಸಶಸ್ತ್ರ ಮೀಸಲು ಪಡೆ) ಕಾನ್‌ಸ್ಟೆಬಲ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹಿರೇಕೆರೂರು ತಾಲ್ಲೂಕಿನ ಮುದ್ದಿನಕೊಪ್ಪದ ಕಾನ್‌ಸ್ಟೆಬಲ್ ಪ್ರದೀಪ್ ಹನುಮಂತಪ್ಪ ನಾಯ್ಕ (37), ಅವರ ಸ್ನೇಹಿತರಾದ ಬ್ಯಾಡಗಿ ತಾಲ್ಲೂಕಿನ ಶಿಡೇನೂರ ತಾಂಡಾದ ನಿವಾಸಿ ಮಲ್ಲೇಶಪ್ಪ ವೆಂಕಪ್ಪ ನಾಯ್ಕ (47), ಬಾಗಲಕೋಟೆ ಜಿಲ್ಲೆಯ ಕೇರೂರಿನ ಕಾಂತೇಶ ವಡ್ಡರ ಅಲಿಯಾಸ್ ಜಡೇಜಾ (32), ಬೆಳಗಾವಿ ಜಿಲ್ಲೆಯ ಬೆಳವಡಿಯ ಅಜೇಯ ಸಾಲಹಳ್ಳಿ ಅಲಿಯಾಸ್ ಬೆಕ್ಕು (20), ನಾಗರಾಜ ವಡ್ಡರ ಅಲಿಯಾಸ್ ನಾಗೇಶ (19) ಬಂಧಿತರು. ಅವರಿಂದ ₹1.04 ಲಕ್ಷ ನಗದು, 7.70 ಗ್ರಾಂ ತೂಕದ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
‘ಜ. 19ರಂದು ರಾತ್ರಿ 11.15 ಗಂಟೆ ಸುಮಾರಿಗೆ ಮನೆಯ ಹಿಂಬಾಗಿಲು ಮುರಿದು ಒಳಗೆ ನುಗ್ಗಿದ್ದ ಆರೋಪಿಗಳು, ಮನೆಯಲ್ಲಿದ್ದ ಮಗು ಸೇರಿ ಐವರಿಗೆ ಚಾಕು ತೋರಿಸಿ ಕೊಲೆ ಬೆದರಿಕೆಯೊಡ್ಡಿ ದರೋಡೆ ಮಾಡಿ ಪರಾರಿಯಾಗಿದ್ದರು. ₹ 5 ಲಕ್ಷ ನಗದು, 40 ಗ್ರಾಂ ಚಿನ್ನಾಭರಣ ಹಾಗೂ 244 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಕಿತ್ತೊಯ್ದ ಬಗ್ಗೆ ಮನೆ ಮಾಲೀಕರು ದೂರು ನೀಡಿದ್ದರು. ತನಿಖೆಗಾಗಿ ನಾಲ್ಕು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳು, ಪುನಃ ಕೃತ್ಯ ಎಸಗಲು ಸಂಚು ಹಾಕುತ್ತಿದ್ದರು. ಅನುಮಾನಾಸ್ಪದ ರೀತಿಯಲ್ಲಿ ಓಡಾಡುತ್ತಿದ್ದ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ತಪ್ಪೊಪ್ಪಿಕೊಂಡರು. ಕಾನ್‌ಸ್ಟೆಬಲ್ ಪ್ರದೀಪ್ ತೋರಿಸಿದ್ದ ಮನೆಯಲ್ಲಿ ಕೃತ್ಯ ಎಸಗಿದ್ದಾಗಿ ಹೇಳಿಕೆ ನೀಡಿದರು. ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದಾಗ ಕೃತ್ಯದಲ್ಲಿ ಪ್ರದೀಪ್ ಭಾಗಿಯಾಗಿರುವುದು ಗೊತ್ತಾಯಿತು. ಹೀಗಾಗಿ, ಆತನನ್ನೂ ಬಂಧಿಸಿ ₹ 52,000 ನಗದು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ. ಆತನನ್ನು ಅಮಾನತುಗೊಳಿಸಿ ಇಲಾಖೆ ವಿಚಾರಣೆ ನಡೆಸಲು ಕ್ರಮ ಜರುಗಿಸಲಾಗಿದೆ’ ಎಂದು ಹೇಳಿದರು.
‘ಬಂಧಿತ ಆರೋಪಿ ಅಜೇಯ್ ಈ ಹಿಂದೆ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದ. ಇದೇ ಆರೋಪಿಗಳು, ಧಾರವಾಡ ಹಾಗೂ ಇತರೆ ಕಡೆಯಲ್ಲಿಯೂ ದರೋಡೆ ಮಾಡಿರುವ ಮಾಹಿತಿಯಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆಯಬೇಕಿದೆ’ ಎಂದರು.
ಪೊಲೀಸ್ ಜೀಪು ಚಾಲಕ: ‘ಆರೋಪಿ ಪ್ರದೀಪ್, 2008ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ. ಹಿರೇಕೆರೂರು ಠಾಣೆಯ ಪೊಲೀಸ್ ಜೀಪಿನ ಚಾಲಕನಾಗಿಯೂ ಕೆಲ ವರ್ಷ ಕೆಲಸ ಮಾಡಿದ್ದ. ಈಗ, ಪ್ರಮುಖ ಕಚೇರಿ ಹಾಗೂ ಇತರೆಡೆ ಭದ್ರತೆ ಕೆಲಸಕ್ಕೆ ನಿಯೋಜನೆಗೊಳ್ಳುತ್ತಿದ್ದ. ತನ್ನ ಪತ್ನಿ ಊರಾದ ನೀಡನೇಗಿಲು ಗ್ರಾಮದಲ್ಲಿರುವ ಪರಿಚಯಸ್ಥರ ಮನೆಯಲ್ಲಿಯೇ ದರೋಡೆ ಮಾಡಲು ಸಂಚು ರೂಪಿಸಿದ್ದ’ ಎಂದು ಎಸ್.ಪಿ. ಹೇಳಿದರು.
ಕೆಲಸದ ಸ್ಥಳದಲ್ಲಿ ಪರಿಚಯ: ‘ಆರೋಪಿ ಮಲ್ಲೇಶಪ್ಪ ಹಾಗೂ ಕಾಂತೇಶ, ಚಾಲಕರು. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿದ್ದರು. ಇತರೆ ಆರೋಪಿಗಳು ಸಹ ಪರಸ್ಪರ ಸ್ನೇಹಿತರಾಗಿದ್ದರು. ವಾಹನ ತಪಾಸಣೆ ಸಂದರ್ಭದಲ್ಲಿ ಪೊಲೀಸರಿಂದ ಬಿಡಿಸಿಕೊಂಡು ಹೋಗಲು ಸಹಾಯವಾಗುತ್ತದೆ ಎಂದು ಮಲ್ಲೇಶಪ್ಪ, ಕಾನ್‌ಸ್ಟೆಬಲ್ ಪ್ರದೀಪ್‌ನ ಪರಿಚಯ ಮಾಡಿಕೊಂಡಿದ್ದ. ಇದೇ ಪರಿಚಯದಿಂದ ಆತ್ಮಿಯರಾಗಿದ್ದ ಎಲ್ಲರೂ ಅಕ್ರಮವಾಗಿ ಹಣ ಸಂಪಾದಿಸಲು ದರೋಡೆಗೆ ಮುಂದಾಗಿದ್ದರು’ ಎಂದು ತಿಳಿಸಿದರು.
‘ಕೇರೂರಿನ ಕಾಂತೇಶ, ಬೆಳವಡಿಯ ಅಜೇಯ್, ನಾಗರಾಜ ಅವರು ಬೈಕ್‌ನಲ್ಲಿ ಜಿಲ್ಲೆಗೆ ಬಂದಿದ್ದರು. ನಂತರ, ಮಲ್ಲೇಶಪ್ಪ ಹಾಗೂ ಇತರರ ಜೊತೆ ಸೇರಿ ಮುಖಕ್ಕೆ ಮಂಕಿ ಕ್ಯಾಪ್ ಹಾಗೂ ಕೈಗವಸ ಹಾಕಿಕೊಂಡು ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ’ ಎಂದು ಮಾಹಿತಿ ನೀಡಿದರು.
ಹೆಚ್ಚುವರಿ ಎಸ್.ಪಿ. ಎಲ್.ವೈ. ಶಿರಕೋಳ, ಡಿವೈಎಸ್ಪಿ ಲೋಕೇಶ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.