ADVERTISEMENT

ಗರ್ಭಿಣಿ ಸೇರಿದಂತೆ ನಾಲ್ವರಿಗೆ ಸೋಂಕು

ಜಿಲ್ಲೆಯಲ್ಲಿ 122ಕ್ಕೇರಿದ ಕೋವಿಡ್‌ ಪ್ರಕರಣಗಳು: ನಾಲ್ಕು ಗ್ರಾಮಗಳು ‘ಬಫರ್‌ ಜೋನ್‌’

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 14:52 IST
Last Updated 2 ಜುಲೈ 2020, 14:52 IST
ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ 
ಕೃಷ್ಣ ಬಾಜಪೇಯಿ, ಜಿಲ್ಲಾಧಿಕಾರಿ    

ಹಾವೇರಿ: ಜಿಲ್ಲೆಯಲ್ಲಿ ಗುರುವಾರ ಗರ್ಭಿಣಿ, ಬಾಣಂತಿ ಸೇರಿದಂತೆ ನಾಲ್ಕು ಮಹಿಳೆಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಎಂಟು ಜನರು ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 122 ಪಾಸಿಟಿವ್ ಪ್ರಕರಣ ದೃಢಗೊಂಡಿದ್ದು, ಈ ಪೈಕಿ 33 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 87 ಪ್ರಕರಣಗಳು ಸಕ್ರಿಯವಾಗಿವೆ ಎಂದು ಮಾಹಿತಿ ನೀಡಿದ್ದಾರೆ.

ಹಾವೇರಿ ತಾಲ್ಲೂಕು ಕನವಳ್ಳಿ ಗ್ರಾಮದ ನಿವಾಸಿ 25 ವರ್ಷದ ಐದು ತಿಂಗಳ ಗರ್ಭಿಣಿ (ಪಿ-119), ಹಾನಗಲ್ ತಾಲ್ಲೂಕು ಅಕ್ಕಿಲೂರಿನ 30 ವರ್ಷದ ಬಾಣಂತಿ (ಪಿ-120) ಹಾಗೂ ಯಳ್ಳೂರು 45 ವರ್ಷದ ಮಹಿಳೆ (ಪಿ-121), ಹಿರೇಕೆರೂರು ತಾಲ್ಲೂಕಿನ ಮೇದೂರಿನ 40 ವರ್ಷದ ಮಹಿಳೆ (ಪಿ-122)ಗೆ ಇಂದು ಸೋಂಕು ದೃಢಪಟ್ಟಿದೆ.

ADVERTISEMENT

ಕನವಳ್ಳಿಯ ಗರ್ಭಿಣಿ ತನ್ನ ತಂದೆ-ತಾಯಿ, ಅಣ್ಣಂದಿರು ಮತ್ತು ಗಂಡನೊಂದಿಗೆ ವಾಸವಾಗಿದ್ದು, ಗಂಡ ಮೆಣಸಿನಕಾಯಿ ವ್ಯಾಪಾರಿಯಾಗಿದ್ದಾರೆ. ಅಕ್ಕಿಆಲೂರಿನ ನಿವಾಸಿಯಾದ 30 ವರ್ಷದ ಮಹಿಳೆ ಹೆರಿಗೆಗಾಗಿ ಅದೇ ಗ್ರಾಮದ ಮಾಳೋದೆ ಆಸ್ಪತ್ರೆಗೆ ದಾಖಲಾಗಿದ್ದು, ಈ ಸಂದರ್ಭದಲ್ಲಿ ಗಂಟಲು ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಹೆರಿಗೆಯ ನಂತರ ಜುಲೈ 1ರಂದು ಈಕೆಯ ಲ್ಯಾಬ್ ವರದಿ ಪಾಸಿಟಿವ್ ಬಂದಿದೆ. ಯಳ್ಳೂರ ನಿವಾಸಿ 45 ವರ್ಷದ ಮಹಿಳೆ ತನ್ನ ಗಂಡ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಇವರೆಲ್ಲರ ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಮೇದೂರ ಗ್ರಾಮದ 40 ವರ್ಷದ ಮಹಿಳೆ ತನ್ನ ಗಂಡ ಮತ್ತು ಮಕ್ಕಳೊಂದಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಜೂನ್ 23ರಂದು ರಾಣೇಬೆನ್ನೂರಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿರುತ್ತಾರೆ. ಜೂನ್ 29ರಂದು ಮೇದೂರಿನಿಂದ ಶಿವಮೊಗ್ಗಕ್ಕೆ ತೆರಳಿ ನಾರಾಯಣ ಹೃದಯಾಲಯದ ಆಸ್ಪತ್ರೆಯಲ್ಲಿ ಕಣ್ಣಿನ ಪರೀಕ್ಷೆಗೆ ತೆರಳಿರುತ್ತಾರೆ. ಸದರಿ ಆಸ್ಪತ್ರೆಯ ಸೂಚನೆ ಮೇರೆಗೆ ಶಿವಮೊಗ್ಗದಲ್ಲಿ ಪರೀಕ್ಷೆಗಾಗಿ ಗಂಟಲು ಮಾದರಿ ತೆಗೆಸಿರುತ್ತಾರೆ.ಜುಲೈ 1ರಂದು ರಾತ್ರಿ ಸದರಿ ಮಹಿಳೆಯ ಗಂಟಲು ಮಾದರಿಯ ವರದಿ ಪಾಸಿಟಿವ್ ಬಂದಿರುವ ಕಾರಣ ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪರ್ಕದ ವಿವರವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಕನವಳ್ಳಿ, ಅಕ್ಕಿಆಲೂರು, ಯಳ್ಳೂರು ಹಾಗೂ ಮೇದೂರ ಗ್ರಾಮಗಳ ಸೋಂಕಿತರ ನಿವಾಸದ 100 ಮೀ.ಪ್ರದೇಶವನ್ನು ‘ಕಂಟೈನ್‍ಮೆಂಟ್ ಜೋನ್’ ಆಗಿ ಪರಿವರ್ತಿಸಲಾಗಿದೆ ಹಾಗೂ ಈ ನಾಲ್ಕು ಗ್ರಾಮಗಳನ್ನು ‘ಬಫರ್ ಜೋನ್’ ಆಗಿ ಪರಿಗಣಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.