ADVERTISEMENT

ಗೆದ್ದು ಬಂದವರು | ಮಾನವೀಯತೆಯ ದೀಪ ಆರದಿರಲಿ

ಸಿದ್ದು ಆರ್.ಜಿ.ಹಳ್ಳಿ
Published 30 ಜುಲೈ 2020, 14:00 IST
Last Updated 30 ಜುಲೈ 2020, 14:00 IST
ವಿಮಲಾ ರಾಜಪುರೋಹಿತ
ವಿಮಲಾ ರಾಜಪುರೋಹಿತ   

ಹಾವೇರಿ: ‘ಕೋವಿಡ್‌ ಮತ್ತು ಹೆರಿಗೆ ಎರಡು ಯುದ್ಧಗಳಲ್ಲೂ ದೊಡ್ಡ ಹೋರಾಟ ಮಾಡಿ ಗೆದ್ದು ಬಂದಿದ್ದೇನೆ. ಈ ಸಂದರ್ಭ ಮಾನವೀಯತೆ ಮರೆತು ವರ್ತಿಸಿದ ಕೆಲವು ವೈದ್ಯರು ಮತ್ತು ಜನರಿಂದ ಮನಸ್ಸಿಗೆ ತುಂಬಾ ನೋವಾಗಿದೆ’ ಎನ್ನುತ್ತಾರೆ ಅಕ್ಕಿಆಲೂರಿನ ನಿವಾಸಿ ವಿಮಲಾ ರಾಜಪುರೋಹಿತ.

ಚೆನ್ನೈನಲ್ಲಿ ವಾಸವಾಗಿದ್ದ ನಾನು 8 ತಿಂಗಳ ಗರ್ಭಿಣಿಯಾಗಿದ್ದೆ. ಹೆರಿಗೆಗಾಗಿ ಅಕ್ಕಿಆಲೂರಿನ ತವರು ಮನೆಗೆ ಮೇ 13ರಂದು ಬಂದೆ. ನಂತರ 14 ದಿನ ಹೋಂ ಕ್ವಾರಂಟೈನ್‌ನಲ್ಲಿದ್ದೆ. ಮೇ 24ರಂದು ಬಂದ ಲ್ಯಾಬ್ ವರದಿ ನೆಗೆಟಿವ್ ಆಗಿತ್ತು. ನನಗೆ 9 ತಿಂಗಳು ತುಂಬಿದ ಸಂದರ್ಭ ವೈದ್ಯರು ಮುನ್ನೆಚ್ಚರಿಕಾ ಕ್ರಮವಾಗಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಹೀಗಾಗಿ ಮತ್ತೆ ಜುಲೈ 6ರಂದು ‘ಸ್ವಾಬ್‌ ಟೆಸ್ಟ್’‌ ಮಾಡಿಸಿಕೊಂಡೆ. ಜುಲೈ 10ರಂದು ‘ಕೋವಿಡ್‌‌’ ದೃಢವಾಯಿತು.

ಯಾವುದೇ ಸೋಂಕಿನ ಲಕ್ಷಣಗಳಿಲ್ಲದ ನಾನು ಹಾವೇರಿ ಕೋವಿಡ್‌ ಆಸ್ಪತ್ರೆಗೆ ದಾಖಲಾದೆ. ಜುಲೈ 14ರಂದು ಹೆರಿಗೆಯಾಗಬಹುದು ಎಂದು ವೈದ್ಯರು ದಿನಾಂಕ ಸೂಚಿಸಿದ್ದರು. ಕೋವಿಡ್‌ ಜತೆಗೆ ಹೆರಿಗೆಯ ಆತಂಕ ಕಾಡುತ್ತಿತ್ತು. ಆದರೆ, 14ರಂದು ನನಗೆ ಹೆರಿಗೆ ನೋವು ಬರಲಿಲ್ಲ. ಜುಲೈ 16ರಂದು ಗುಣಮುಖಳಾಗಿ ಆಸ್ಪತ್ರೆಯಿಂದ ಬಿಡುಗಡೆಯಾದೆ.

ADVERTISEMENT

ಜುಲೈ 21ರಂದು ಹೆರಿಗೆ ನೋವು ಕಾಣಿಸಿಕೊಂಡಿತು. ತಕ್ಷಣ ಹಾವೇರಿ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದೆವು. ಆದರೆ, ನಾನು ‘ಕೋವಿಡ್‌ ಗುಣಮುಖಳು’ ಎಂಬುದು ಗೊತ್ತಾಗಿ ತಕ್ಷಣ ಆಸ್ಪತ್ರೆಯಿಂದ ಆಚೆ ಕಳುಹಿಸಿ, ಬಾಗಿಲು ಹಾಕಿದರು. ಇದೇ ಅನುಭವ ಮುರ್ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ ಆಯಿತು. ಒಂದು ಕಡೆ ಹೊಟ್ಟೆಯೊಳಗಿನ ಸಂಕಟ, ಮತ್ತೊಂದು ಕಡೆ ಅವಮಾನದ ನೋವು.

ಮತ್ತೆ ಹಾವೇರಿಯ ಜಿಲ್ಲಾಸ್ಪತ್ರೆಗೆ ಬಂದು ದಾಖಲಾದೆ. ದೇವರ ದಯೆಯಿಂದ ಸುಗಮವಾಗಿ ಹೆರಿಗೆಯಾಗಿ ‘ಭಾಗ್ಯದ ಲಕ್ಷ್ಮಿ’ ಹೊರಬಂದಳು. ಪ್ರತ್ಯೇಕ ವಾರ್ಡ್‌ ಇಲ್ಲದ ಕಾರಣ ಸೋಂಕಿತ ಗರ್ಭಿಣಿಯರು ಇದ್ದ ವಾರ್ಡ್‌ನಲ್ಲೇ ನಾನು ಇರಬೇಕಾಯಿತು.ಮಗುವಿಗೆ ಸೋಂಕು ತಗುಲಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 22ರಂದು ಮೂರನೇ ಬಾರಿ ಗಂಟಲು ದ್ರವ ಕೊಟ್ಟಿದ್ದೆ. ಅದು ನೆಗೆಟಿವ್‌ ಬಂದಿತು. ನನ್ನ ಮಗು ಮತ್ತು ನನ್ನ ತಂಗಿಯ ವರದಿಯೂ ನೆಗೆಟಿವ್ ಬಂದಿತು.

ಪ್ರಾಣ ಉಳಿಸಬೇಕಾದ ವೈದ್ಯರೇ ಸೋಂಕಿತರನ್ನು, ಕೋವಿಡ್‌ ಗುಣಮುಖರನ್ನು ಅನುಮಾನದಿಂದ ನೋಡಿದರೆ, ಜನಸಾಮಾನ್ಯರ ಜೀವಗಳ ಗತಿಯೇನು? ಸಮಾಜದಲ್ಲಿ ಮಾನವೀಯತೆಯ ದೀಪ ಎಂದಿಗೂ ಆರದಿರಲಿ ಎನ್ನುತ್ತಾರೆ ವಿಮಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.