ADVERTISEMENT

ಹಾವೇರಿ: ತಾನೇ ಇಂಜೆಕ್ಷನ್‌ ತೆಗೆದುಕೊಂಡ ಕೋವಿಡ್–19 ರೋಗಿ!

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 16:34 IST
Last Updated 14 ಸೆಪ್ಟೆಂಬರ್ 2020, 16:34 IST
ಕೋವಿಡ್‌ ವಾರ್ಡ್‌ನಲ್ಲಿ ತನಗೆ ತಾನೇ ಇಂಜೆಕ್ಷನ್‌ ಚುಚ್ಚಿಕೊಳ್ಳುತ್ತಿರುವ ರೋಗಿ
ಕೋವಿಡ್‌ ವಾರ್ಡ್‌ನಲ್ಲಿ ತನಗೆ ತಾನೇ ಇಂಜೆಕ್ಷನ್‌ ಚುಚ್ಚಿಕೊಳ್ಳುತ್ತಿರುವ ರೋಗಿ   

ಹಾವೇರಿ: ನಗರದ ಕೋವಿಡ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬ ತನಗೆ ತಾನೇ ಇಂಜೆಕ್ಷನ್‌ ಚುಚ್ಚಿಕೊಳ್ಳುತ್ತಿರುವ ವಿಡಿಯೊ ಈಗ ಎಲ್ಲೆಡೆ ಹರಿದಾಡುತ್ತಿದೆ.

ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ ತೀವ್ರವಾಗಿದ್ದು, ವೈದ್ಯರು ದಿನಕ್ಕೆ ಎರಡು ಬಾರಿ ಮಾತ್ರ ಬಂದು ಹೋಗುತ್ತಾರೆ. ರೋಗಿಗಳನ್ನು ಸರಿಯಾಗಿ ಚಿಕಿತ್ಸೆ ಮಾಡುತ್ತಿಲ್ಲ ಎಂದು ದೂರುಗಳು ಕೇಳಿ ಬಂದಿವೆ.

ರೋಗಿಯ ಪಕ್ಕದಲ್ಲೇ ನರ್ಸ್‌ ಓಡಾಡುತ್ತಿದ್ದರೂ ನೆರವಿಗೆ ಬಂದಿಲ್ಲ. ರೋಗಿಗಳ ಕಷ್ಟವನ್ನು ಕಂಡೂ ಕಾಣದಂತೆ ಸಿಬ್ಬಂದಿ ವರ್ತಿಸುತ್ತಿದ್ದಾರೆ. ಸಕಾಲದಲ್ಲಿ ಚಿಕಿತ್ಸೆ ಸಮರ್ಪಕವಾಗಿ ಸಿಗುತ್ತಿಲ್ಲ ಎಂಬ ಆರೋಪಗಳು ವ್ಯಕ್ತವಾಗಿವೆ.

ADVERTISEMENT

‘ಕೋವಿಡ್‌ ವಾರ್ಡ್‌ನಲ್ಲಿ ಇಂಜೆಕ್ಷನ್‌ ತೆಗೆದುಕೊಂಡ ವ್ಯಕ್ತಿ ಹೆಸರು ಮೈಲಾರಪ್ಪ. ಅವರು ಎಕ್ಸ್‌ರೇ ತಂತ್ರಜ್ಞರಾಗಿದ್ದು, ಇಂಜೆಕ್ಷನ್‌ ತೆಗೆದುಕೊಳ್ಳುವ ಬಗ್ಗೆ ಅನುಭವ ಇರುವುದರಿಂದ ತೆಗೆದುಕೊಂಡಿದ್ದಾರೆ. ಸಿಬ್ಬಂದಿ ಚಿಕಿತ್ಸೆ ನೀಡದ ಕಾರಣಕ್ಕಾಗಿ ತೆಗೆದುಕೊಂಡಿಲ್ಲ. ಅವರು ಒಂದು ತಿಂಗಳು ಕೋವಿಡ್‌ ವಾರ್ಡ್‌ನಲ್ಲೇ ಕೆಲಸ ಮಾಡಿದ್ದರು. ಸೋಂಕು ತಗುಲಿದ ಪರಿಣಾಮ ಕೋವಿಡ್‌ ವಾರ್ಡ್‌ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾದರು. ಈಗ ಅವರು ಆರೋಗ್ಯವಾಗಿ ಮನೆಯಲ್ಲಿದ್ದಾರೆ’ ಎಂದು ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಪಿ.ಆರ್‌‌.ಹಾವನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.