ADVERTISEMENT

ಹಾನಗಲ್‌ನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ: ಸಿದ್ಧಲಿಂಗಪ್ಪ ಕಮಡೊಳ್ಳಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 2:14 IST
Last Updated 20 ಅಕ್ಟೋಬರ್ 2025, 2:14 IST
ಸಿದ್ಧಲಿಂಗಪ್ಪ ಕಮಡೊಳ್ಳಿ
ಸಿದ್ಧಲಿಂಗಪ್ಪ ಕಮಡೊಳ್ಳಿ   

ಹಾನಗಲ್: ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ಒಂದು ವಾರದ ಅವಧಿಯಲ್ಲಿ ಕಂದಾಯ ಇಲಾಖೆಯ 5 ಅಧಿಕಾರಿಗಳು ಎರಡು ಪ್ರತ್ಯೇಕ ದಾಳಿಗಳಲ್ಲಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ ಎಂದು ಸಮಾಜ ಸೇವಕ ಸಿದ್ಧಲಿಂಗಪ್ಪ ಕಮಡೊಳ್ಳಿ ಹೇಳಿದರು.

ತಾಲ್ಲೂಕಿನಲ್ಲಿ ಆಡಳಿತ ವ್ಯವಸ್ಥೆ ಯಾವ ಹಂತ ತಲುಪಿದೆ ಎನ್ನುವುದಕ್ಕೆ ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತರ ದಾಳಿಗೆ ಸಿಲುಕುತ್ತಿರುವುದು ಸಾಕ್ಷಿ ಒದಗಿಸುತ್ತಿದೆ ಎಂದು ಭಾನುವಾರ ಇಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಡಳಿತ ವ್ಯವಸ್ಥೆ ಯಾರ ಹಿಡಿತದಲ್ಲಿಯೂ ಇಲ್ಲ. ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಲಂಚವಿಲ್ಲದೇ ಯಾವುದೇ ಕೆಲಸ ಆಗದು ಎಂಬ ಮನಸ್ಥಿತಿ ಇದೆ. ಈ ತಾಲ್ಲೂಕಿನ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಧಿಕಾರಿಗಳು ಎಗ್ಗಿಲ್ಲದೇ ಸುಲಿಗೆ ಮಾಡುವ ಲಂಚದ ಹಣ ಯಾರ ಬಳಿ ಬಂದು ಸೇರುತ್ತಿದೆ ಎಂಬುದು ತಿಳಿಯದಾಗಿದೆ. ಹಾನಗಲ್ ತಾಲ್ಲೂಕು ಭ್ರಷ್ಟಾಚಾರ ಮುಕ್ತ ಮಾಡಲು ಪಕ್ಷಾತೀತವಾಗಿ ರೈತರು, ಕೃಷಿ ಕಾರ್ಮಿಕರನ್ನು ಸೇರಿಸಿಕೊಂಡು ಹೋರಾಟ ಮಾಡುತ್ತೇನೆ ಎಂದು ಹೇಳಿದರು.

ಅಪಘಾತಗಳು ಸಾಮಾನ್ಯ: ‘ತಾಲ್ಲೂಕಿನ ರಸ್ತೆಗಳು ಹದಗೆಟ್ಟು ಅಪಘಾತಗಳು ಸಾಮಾನ್ಯ ಎನ್ನಿಸುತ್ತಿವೆ. ನಿತ್ಯವೂ ನಾಲ್ಕೈದು ಅಪಘಾತ ಘಟನೆಯ ಗಾಯಾಳುಗಳು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ. ತೆಗ್ಗು, ಗುಂಡಿಗಳಲ್ಲಿ ಸಂಚರಿಸುವ ವಾಹನಗಳು ಪದೇಪದೇ ಕೆಟ್ಟು ನಿಲ್ಲುತ್ತಿವೆ. ಕೃಷಿಕರು, ಕೂಲಿಕಾರರು ತಮ್ಮ ಅನುಕೂಲದ ವಾಹನಗಳನ್ನು ರಿಪೇರಿ ಮಾಡಿಸಲು ಹಣ ಇಡುತ್ತಿದ್ದಾರೆ. ಅಲ್ಲಲ್ಲಿ ಸರ್ಕಾರಿ ಆಸ್ತಿಗಳು ಕಂಡವರ ಪಾಲಾಗುತ್ತಿವೆ. 80 ಗ್ರಾಮಗಳಲ್ಲಿ ಸ್ಮಶಾನವಿಲ್ಲ. ಆದರೆ ಸರ್ಕಾರಿ ಆಸ್ತಿಗಳು ಕ್ರಮೇಣ ಅತಿಕ್ರಮಣಕ್ಕೆ ಒಳಗಾಗುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳೆಹಾನಿ ಪರಿಹಾರ ವಿತರಣೆಯಲ್ಲೂ ರಾಜಕೀಯ ಬೆರೆಸಲಾಗಿದೆ. ತಾರತಮ್ಯ ಮಾಡಿ ಹಾನಿ ಪರಿಹಾರ ವಿತರಿಸಲಾಗುತ್ತಿದೆ. ಸರ್ಕಾರದಿಂದ ಸಾರಾಯಿ ಮಾರಾಟದ ಟಾರ್ಗೆಟ್‌ ನೀಡಲಾಗುತ್ತಿದೆ ಎನ್ನುವ ವಿಚಾರ ಈ ರಾಜ್ಯ ಯಾವ ಹಂತ ತಲುಪಿದೆ ಎಂಬುದನ್ನು ತಿಳಿಸುತ್ತಿದೆ’ ಎಂದರು.

‘ಜಾತಿ ಗಣತಿಗೆ ಆತುರತೆ ತೋರುವ ಸರ್ಕಾರ, ರೈತರ ಬೆಳೆ ಹಾನಿ ಸಮೀಕ್ಷೆಯನ್ನು ವ್ಯವಸ್ಥಿತವಾಗಿ ಮಾಡಿದ್ದರೆ, ರಾಜ್ಯದ ರೈತರು ಉದ್ಧಾರವಾಗುತ್ತಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.