ADVERTISEMENT

ತಜ್ಞವೈದ್ಯರ ತಂಡ ರಚಿಸಿ: ಸಚಿವ

ಕೋವಿಡ್ ವಾರ್ ರೂಂ ರಚನೆ, ತಾಲ್ಲೂಕುವಾರು ಹಾಸಿಗೆಗಳ ಸಂಖ್ಯೆ ಹೆಚ್ಚಳಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 15:43 IST
Last Updated 30 ಏಪ್ರಿಲ್ 2021, 15:43 IST
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ನಡೆಸಿದ ಕೋವಿಡ್‌ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು 
ಹಾವೇರಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ನಡೆಸಿದ ಕೋವಿಡ್‌ ಕುರಿತ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು    

ಹಾವೇರಿ: ಜಿಲ್ಲಾ ಮಟ್ಟದಲ್ಲಿ ತಜ್ಞವೈದ್ಯರನ್ನು ಒಳಗೊಂಡ ತಂಡ ರಚಿಸಿ, ಜಿಲ್ಲೆಯ ತಾಲ್ಲೂಕು ಆಸ್ಪತ್ರೆಗಳಿಂದ ಕೋವಿಡ್ ತುರ್ತು ಪ್ರಕರಣಗಳಲ್ಲಿ ಚಿಕಿತ್ಸೆಗೆ ಕರೆ ಬಂದಾಗ ಜಿಲ್ಲಾ ತಜ್ಞರ ತಂಡವನ್ನು ಕಳುಹಿಸಿ ಕೊಡುವ ವ್ಯವಸ್ಥೆ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಕೋವಿಡ್ ನಿಯಂತ್ರಣ ಮತ್ತು ಕೈಗೊಂಡ ಕ್ರಮಗಳ ಕುರಿತಂತೆ ಪರಿಶೀಲನಾ ಸಭೆ ನಡೆಸಿದರು.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ, ತಾಲ್ಲೂಕುವಾರು ಹಾಸಿಗೆಗಳ ಸಂಖ್ಯೆ, ಆಮ್ಲಜನಕ ವ್ಯವಸ್ಥೆ, ಲಸಿಕೆ ನೀಡಿಕೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಅನಸ್ತೇಸಿಯಾ, ಫಿಜಿಷಿಯನ್ ಹಾಗೂ ಟೆಕ್ನಿಷಿಯನ್ ಒಳಗೊಂಡಂತೆ ಜಿಲ್ಲಾ ಮಟ್ಟದಲ್ಲಿ ತಜ್ಞವೈದ್ಯರ ತಂಡ ರಚಿಸಿ ‘ಕಾಲ್‍ಆನ್’ ಸೇವೆ ಆರಂಭಿಸಿ ಎಂದು ಸೂಚಿಸಿದರು.

ADVERTISEMENT

ಸಿಬ್ಬಂದಿ ನೇಮಿಸಿಕೊಳ್ಳಿ:

ತಜ್ಞವೈದ್ಯರು, ವೈದ್ಯರು, ಟೆಕ್ನಿಷಿಯನ್, ಪ್ಯಾರಾಮೆಡಿಕಲ್ ಹಾಗೂ ‘ಡಿ’ ಗ್ರೂಪ್ ಸಿಬ್ಬಂದಿ ಕೊರತೆಯನ್ನು ನೀಗಿಸಲು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗೆ ಎಲ್ಲ ಅಧಿಕಾರ ನೀಡಲಾಗಿದೆ.ಬ್ಯಾಡಗಿ ಮತ್ತು ಹಿರೇಕೆರೂರು ಆಸ್ಪತ್ರೆಗಳಲ್ಲಿ ಫಿಜಿಷಿಯನ್ ಕೊರತೆ ನೀಗಿಸಿ. ಹಾನಗಲ್ ತಾಲ್ಲೂಕಿಗೆ ಗಂಟಲುದ್ರವ ಸಂಗ್ರಹಿಸಲು ಅಗತ್ಯವಾದ ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸಿ ಎಂದು ಸೂಚಿಸಿದರು.

ಹಾಸಿಗೆ ಹೆಚ್ಚಳ ಮಾಡಿ:

ಜಿಲ್ಲಾ ಆಸ್ಪತ್ರೆಯಲ್ಲಿ 50 ಹಾಗೂ ತಾಲ್ಲೂಕುಗಳಲ್ಲಿ ತಲಾ 20ರಂತೆ ಹಾಸಿಗೆಗಳನ್ನು ಹೆಚ್ಚು ಮಾಡಿ. ಸಾರಿ ಹಾಗೂ ಉಸಿರಾಟದ ಕೇಸ್‍ಗಳು ಗುಣಮುಖರಾದ ಮೇಲೆ ಜನರಲ್ ವಾರ್ಡ್‍ಗೆ ಶಿಫ್ಟ್‌ ಮಾಡಿ ಪ್ರತಿ ದಿನ ತಪಾಸಣೆ ಮಾಡಿ ನಿರ್ವಹಣೆ ಮಾಡಬೇಕು. ಕೋವಿಡ್ ಚಿಕಿತ್ಸೆಗೆ ತಾಲ್ಲೂಕುವಾರು ಬೆಡ್‍ಗಳ ಸಂಖ್ಯೆ, ಐಸಿಯು ಹಾಗೂ ಆಕ್ಸಿಜನ್ ಬೆಡ್, ಸೋಂಕಿತರ ಸಂಖ್ಯೆ ವಿವರ ಪಡೆದು ವಾರಕ್ಕೊಮ್ಮೆ ಯೋಜನೆ ರೂಪಿಸಿ ಕೋವಿಡ್ ಪ್ರಕರಣಗಳ ಪ್ರಮಾಣಕ್ಕನುಗುಣವಾಗಿ ಹಾಸಿಗೆ, ವ್ಯಾಕ್ಸಿನ್, ಔಷಧ, ಆಕ್ಸಿಜನ್ ಬೆಡ್‍ಗಳ ಹೆಚ್ಚಳಕ್ಕೆ ಕ್ರಮವಹಿಸಿ ಎಂದು ಸೂಚನೆ ನೀಡಿದರು.

ಗ್ರಾಮೀಣ ಟಾಸ್ಕ್‌ಫೋರ್ಸ್‌:

ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಗ್ರಾಮೀಣ ಮಟ್ಟದಲ್ಲಿ ಪಿಡಿಒ ನೇತೃತ್ವಲ್ಲಿ ಕೋವಿಡ್ ಟಾಸ್ಕ್‌ಫೋರ್ಸ್‌ ರಚಿಸಬೇಕು. ತಪಾಸಣೆ, ಸಂಪರ್ಕ ಪತ್ತೆ, ಐಸೋಲೇಷನ್ ಸೇರಿದತೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಕ್ರಮವಹಿಸಿ. ಹಳ್ಳಿಗಳಲ್ಲಿ ಸೋಂಕು ಹರಡದಂತೆ ನಿಗ್ರಹಿಸಿ ಎಂದು ಹೇಳಿದರು.

ಜಿಲ್ಲಾ ವಾರ್ ರೂಮ್‌ ರಚನೆ:

ಜಿಲ್ಲಾ ಮಟ್ಟದ ವಾರ್‌ ರೂಂ ಸ್ಥಾಪನೆ ಮಾಡಿ ಕೋವಿಡ್ ಸಂಬಂಧ ಎಲ್ಲ ಮಾಹಿತಿ ದೊರಕುವಂತೆ ಕ್ರಮವಹಿಸಿ ಎಂದು ಸೂಚನೆ ನೀಡಿದರು. ಜನತಾ ಕಫ್ರ್ಯೂ ಉಲ್ಲಂಘನೆಯಾಗದಂತೆ ಕ್ರಮವಹಿಸಿ. ಎರಡು ವಾರದವರೆಗೆ ಜನರನ್ನು ನಿಯಂತ್ರಿಸಿ ಕೋವಿಡ್ ಹರಡುವಿಕೆ ಸಂಪರ್ಕ ಕಡಿತಗೊಳಿಸಿ ಎಂದರು.

ಶಾಸಕ ನೆಹರು ಓಲೇಕಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ, ವಿಧಾನ ಪರಿಷತ್ ಸದಸ್ಯ ಸಂಕನೂರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ದೇವರಾಜು, ಸಿಇಒ ಮೊಹಮ್ಮದ್‌ ರೋಶನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.