ADVERTISEMENT

ಬೆಳೆಗೆ ಬೆಂಕಿ: ಸುಟ್ಟ ರೈತರ ಬದುಕು

ಸವಣೂರು ತಾಲ್ಲೂಕಿನಲ್ಲಿ ಬೆಂಕಿ ಅವಘಡ | 280 ಟನ್‌ ಗೋವಿನ ಜೋಳ ಬೆಂಕಿಗಾಹುತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 2:39 IST
Last Updated 23 ಡಿಸೆಂಬರ್ 2025, 2:39 IST
   

ಸವಣೂರು: ‘ಸಾಲ ಮಾಡಿ ಬಿತ್ತನೆ ಮಾಡಿದ್ದ ಗೋವಿನ ಜೋಳದ ಫಸಲು ಕೈಗೆ ಬಂದಿತ್ತು. ದರ ಕಡಿಮೆಯೆಂಬ ಕಾರಣಕ್ಕೆ ಜಮೀನಿನಲ್ಲಿಯೇ ರಾಶಿ ಮಾಡಿಡಲಾಗಿತ್ತು. ಉತ್ತಮ ದರ ಬಂದ ಕೂಡಲೇ ಮಾರಿ, ಅದೇ ಹಣದಲ್ಲಿ ಸಾಲ ತೀರಿಸಿ ಮಕ್ಕಳ ಶಾಲಾ ಶುಲ್ಕ ಪಾವತಿಸಬೇಕಿತ್ತು. ಮಕ್ಕಳ ಮದುವೆಗೂ ಸಿದ್ಧತೆ ಮಾಡಬೇಕಿತ್ತು. ಆದರೆ, ಬೆಂಕಿ ಅವಘಡದಿಂದ ಕಣ್ಣೆದುರೇ ಗೋವಿನ ಜೋಳ ಬೆಳೆ ಸುಟ್ಟು ಕರಕಲಾಗಿದೆ. ಅದರ ಜೊತೆಯಲ್ಲಿ, ನಮ್ಮ ಬದುಕು ಸಹ ಸುಟ್ಟು ಹೋಗಿದೆ’...

ಸವಣೂರು ತಾಲ್ಲೂಕಿನ ಹುರಳಿಕುಪ್ಪಿ– ಕುರುಬರಮಲ್ಲೂರ ಮಾರ್ಗದಲ್ಲಿರುವ ಜಮೀನಿನಲ್ಲಿ ಬೆಂಕಿ ಅವಘಡದಿಂದ ಗೋವಿನ ಜೋಳ ಬೆಳೆ ಕಳೆದುಕೊಂಡ ರೈತರ ಗೋಳಾಟದ ಮಾತಿದು.

ಗೋವಿನಜೋಳ ಬೆಳೆಯನ್ನು ಮಾರಿ ಅದರಿಂದ ಬಂದ ಹಣದಲ್ಲಿ ವರ್ಷದ ಬದುಕು ಕಟ್ಟಿಕೊಳ್ಳುವ ಕನಸಿನ ನಿರೀಕ್ಷೆಯಲ್ಲಿದ್ದ ರೈತರಿಗೆ, ಬೆಂಕಿಯ ಅವಘಡ ದೊಡ್ಡ ಪೆಟ್ಟು ನೀಡಿದೆ. ಬೆಳೆಯ ಜೊತೆಯಲ್ಲಿಯೇ ರೈತರ ಬದುಕಿನ ಆಸೆಗಳೂ ಸುಟ್ಟು ಹೋಗಿವೆ.

ADVERTISEMENT

ಹಗಲು–ರಾತ್ರಿ ಎನ್ನದೇ ಜಮೀನಿನಲ್ಲಿ ದುಡಿದು ಬೆಳೆದಿದ್ದ ಗೋವಿನ ಜೋಳದ ರಾಶಿಗಳು ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿ, ಎಲ್ಲವೂ ಕರಕಲಾಗಿದೆ.

ಸುಮಾರು 120 ಎಕರೆ ಜಮೀನಿನಲ್ಲಿ 66 ರೈತರು ಗೋವಿನ ಜೋಳ ಬೆಳೆದಿದ್ದರು. ಎಲ್ಲ ರೈತರು ಒಂದೇ ಜಮೀನಿನಲ್ಲಿ ಗೋವಿನ ಜೋಳದ ತೆನೆಗಳನ್ನು ಪದರದ ಸಮೇತ ರಾಶಿ ಮಾಡಿಟ್ಟಿದ್ದರು. ಮಾರುಕಟ್ಟೆಗೆ ಸಾಗಿಸುವ ಸಂದರ್ಭದಲ್ಲಿಯೇ ಯಂತ್ರದಿಂದ ಗೋವಿನ ಜೋಳ ತೆನೆಯಿಂದ ಕಾಳು ತೆಗೆದು ಕಳುಹಿಸುತ್ತಿದ್ದರು. ದರ ಇಲ್ಲದಿದ್ದರಿಂದ, ಬಹುತೇಕ ರೈತರು ಯಂತ್ರದಲ್ಲಿ ಹಾಕಿಸಿರಲಿಲ್ಲ. ಜಮೀನಿನಲ್ಲಿಯೇ ತೆನೆ ಸಮೇತ ಗೋವಿನ ಜೋಳದ ಬೆಳೆಯಿತ್ತು. 

ಬೆಂಕಿ ಅವಘಡದಿಂದಾಗಿ 16 ರೈತರಿಗೆ ಸೇರಿದ್ದ 280 ಟನ್ ಗೋವಿನ ಜೋಳ ಸಂಪೂರ್ಣ ಸುಟ್ಟು ಕರಕಲಾಗಿದೆ. ಸುಮಾರು ₹ 80 ಲಕ್ಷ ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.

ಮಕ್ಕಳ ಶಿಕ್ಷಣ, ಕುಟುಂಬದ ನಿರ್ವಹಣೆ, ಸಾಲದ ಹೊರೆ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಹಣದ ಮೂಲಕ ನಿಭಾಯಿಸಲು ರೈತರು ಶ್ರಮಪಟ್ಟು ದುಡಿದಿದ್ದರು. ಆದರೆ, ಅವರ ದುಡಿಮೆ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕಮರಿಹೋಗಿದೆ.

‘ಸಾಲ ಮಾಡಿ ಗೋವಿನಜೋಳ ಬೆಳೆದಿದ್ದೆ. ತೆನೆ ರಾಶಿ ಮಾಡಿ ಜಮೀನಿನಲ್ಲಿ ಹಾಕಿದ್ದೆ. ಅದನ್ನು ಮಾರಿದ ನಂತರ ಬರುವ ಹಣದಲ್ಲಿ ಸಾಲ ತೀರಿಸಬೇಕಿತ್ತು. ಆದರೆ, ದಿಢೀರ್ ಬೆಂಕಿ ಅವಘಡ ಉಂಟಾಗಿ ಎಲ್ಲ ಬೆಳೆ ಸುಟ್ಟು ಹೋಗಿದೆ. ಅದರ ಜೊತೆಯಲ್ಲಿ ನಮ್ಮ ಬದುಕು ಸುಟ್ಟಿದೆ’ ಎಂದು ರೈತ ಈರಪ್ಪ ಬಾಲೆಹೊಸೂರು ಅಳಲು ತೋಡಿಕೊಂಡರು.

‘ಮನೆಯಲ್ಲಿದ್ದ ಐದು ಮಕ್ಕಳು ಹಾಗೂ ನಾನು, ಕೃಷಿ ಮಾಡುತ್ತಿದ್ದೇವೆ. ಗೋವಿನ ಜೋಳ ಬೆಳೆ ನಂಬಿ ₹10 ಲಕ್ಷ ಸಾಲ ಮಾಡಿಕೊಂಡಿದ್ದೆ. ಸಾಲದಲ್ಲಿ ಹೊಸ ಟ್ರ್ಯಾಕ್ಟರ್ ಸಹ ತಂದಿದ್ದೆ. ಅಷ್ಟರಲ್ಲೇ ಇಷ್ಟೆಲ್ಲ ನಡೆದುಹೋಯಿತು’ ಎಂದರು.

ರೈತ ಮಹಿಳೆ ಸುಶೀಲಾ ನಿಂಗಪ್ಪ ಸಂದ್ಲಿ, ‘ಈ ಹಿಂದೆ ಹತ್ತಿ, ಶೇಂಗಾ, ಸೋಯಾಬಿನ್ ಬೆಳೆಯುತ್ತಿದ್ದೆವು. ಇಳುವರಿ ಬಾರದಿದ್ದರಿಂದ, ಈ ವರ್ಷ ಗೋವಿನ ಜೋಳ ಹಾಕಿದ್ದೇವು. ಆದರೆ, ಈಗ ಅದು ಸಹ ಸುಟ್ಟು ಹೋಗಿದೆ’ ಎಂದು ಗೋಳು ತೋಡಿಕೊಂಡರು.  

ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಬೆಳೆ ಕಳೆದುಕೊಂಡ ರೈತರು ಆರ್ಥಿಕ ಹಾಗೂ ಮಾನಸಿಕವಾಗಿ ನೊಂದಿದ್ದಾರೆ. ಆಕಸ್ಮಿಕವಾದ ಬೆಂಕಿ ಅವಘಡಕ್ಕೆ ಸರ್ಕಾರ ಕೂಡಲೇ ಪರಿಹಾರ ಮಂಜೂರು ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.