ADVERTISEMENT

ಹಾನಗಲ್ | ಮಳೆಯಿಂದ ಬೆಳೆ ನಷ್ಟ; ನಡೆಯದ ಸಮೀಕ್ಷೆ: ಮರಿಗೌಡ ಪಾಟೀಲ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 2:37 IST
Last Updated 22 ಆಗಸ್ಟ್ 2025, 2:37 IST
<div class="paragraphs"><p>ಮರಿಗೌಡ ಪಾಟೀಲ</p></div>

ಮರಿಗೌಡ ಪಾಟೀಲ

   

ಹಾನಗಲ್: ‘ಸತತ ಮಳೆಯಿಂದಾಗಿ ಬೆಳೆಗಳು ಹಾನಿಗೀಡಾಗಿವೆ. ರೈತರು ಬೆಳೆಹಾನಿ ಸಮೀಕ್ಷೆಯ ನಿರೀಕ್ಷೆಯಲ್ಲಿದ್ದು, ತಾಲ್ಲೂಕು ಆಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳೆಗಳು ಸಂಪೂರ್ಣವಾಗಿ ಹಾನಿಯಾಗುವ ಹಂತ ತಲುಪಿವೆ. ಶೀಘ್ರದಲ್ಲೇ ಬೆಳೆ ಸಮೀಕ್ಷೆ ಕೈಗೊಳ್ಳಬೇಕೆಂದು ಕಳೆದ ತಿಂಗಳೇ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು. ಬಳಿಕ, ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆಯೂ ಒತ್ತಾಯಿಸಲಾಗಿತ್ತು. ಆದರೂ ಸ್ಪಂದಿಸುತ್ತಿಲ್ಲ’ ಆರೋಪಿಸಿದರು.

ADVERTISEMENT

‘ಆಗಸ್ಟ್‌ 4ರಂದು ರೈತ ಸಂಘದ ಪ್ರಮುಖರೊಂದಿಗೆ ಸಭೆ ನಡೆಸಿದ ತಹಶೀಲ್ದಾರ್‌ ರೇಣುಕಾ ಎಸ್‌. ಅವರು, ಬೆಳೆ ಹಾನಿ ಬಗ್ಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದ್ದರು. ಈವರೆಗೆ 7,000ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಕುರಿತು ಸಭೆಯನ್ನೂ ಕರೆದಿಲ್ಲ. ಪಕ್ಕದ ತಾಲ್ಲೂಕುಗಳಲ್ಲಿ ಈಗಾಗಲೇ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡು, ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

‘ಬೆಳೆ ಹಾನಿ ಸಮೀಕ್ಷೆ ಸೇರಿದಂತೆ ರೈತ ವಿವಿಧ ಸಮಸ್ಯೆ ನಿವಾರಿಸಲು ನಿರ್ಲಕ್ಷ್ಯ ವಹಿಸುತ್ತಿರುವ ತಹಶೀಲ್ದಾರ್‌ ವಿರುದ್ಧ ಪ್ರತಿಭಟನೆ ನಡೆಸುವ ಮುನ್ನ, ಅವರು ತಮ್ಮ ಜವಾಬ್ದಾರಿ ಅರಿತು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಶೀಘ್ರದಲ್ಲೇ ಕ್ರಮ; ತಹಶೀಲ್ದಾರ್‌

‘ಬೆಳೆಹಾನಿ ಪರಿಶೀಲನೆ ವಿಚಾರದಲ್ಲಿ ಯಾವುದೇ ವಿಳಂಬವಾಗಿಲ್ಲ. ರೈತರ ಅರ್ಜಿಗಳ ಕುರಿತು ಒಂದು ದಿನದ ಹಿಂದೆಯಷ್ಟೇ ಕೃಷಿ ಇಲಾಖೆಯಿಂದ ಮಾಹಿತಿ ಸಿಕ್ಕಿದೆ. ಬೆಳೆ ಹಾನಿ ಪರಿಹಾರಕ್ಕಾಗಿ 7,489 ಅರ್ಜಿಗಳು ಸಲ್ಲಿಕೆಯಾಗಿವೆ. ಜಂಟಿ ಸಭೆ ಕರೆದು ಬೆಳೆಹಾನಿ ಪರಿಶೀಲನೆಗೆ ಕ್ರಮ ಜರುಗಿಸಲಾಗುತ್ತದೆ. ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗೂ ಮಾಹಿತಿ ನೀಡಲಾಗುತ್ತದೆ. ರೈತರ ಕೆಲಸಗಳನ್ನು ವಿಳಂಬವಿಲ್ಲದೆ ಮಾಡಿಕೊಡಲಾಗುತ್ತಿದೆ’ ಎಂದು ತಹಶೀಲ್ದಾರ್‌ ರೇಣುಕಾ ಎಸ್‌. ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.