
ಸವಣೂರು: ತೊಂಡೂರು ಹಾಲು ಉತ್ಫಾದಕರ ಸಹಕಾರ ಸಂಘದ ಕಾರ್ಯದರ್ಶಿ ಮತ್ತು ಹಾಲು ಪರೀಕ್ಷಕ ರೈತರಿಗೆ ಸೇರಬೇಕಿದ್ದ ಲಕ್ಷಾಂತರ ರೂಪಾಯಿ ಹಣದಲ್ಲಿ ಅವ್ಯವಹಾರ ಎಸಗಿದ್ದಾರೆ. ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿ ರೈತರು ಹಾಗೂ ಹಾಲು ಉತ್ಪಾದಕರು, ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಹೈನುಗಾರಿಕೆ ಇಲ್ಲದವರ ಖಾತೆಗೆ ಲಕ್ಷಾಂತರ ರೂಪಾಯಿ ಹಣ ಹಾಕುವ ಮೂಲಕ ಬಡ ಹಾಲು ಉತ್ಪಾದಕರ ಬದುಕನ್ನೇ ನಾಶ ಮಾಡುವಂತಹ ಅವ್ಯವಹಾರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರ ಬಡ ರೈತರ ಶ್ರಮಕ್ಕೆ ನೀಡುವ ಹಾಲಿನ ಪ್ರೋತ್ಸಾಹ ಧನವನ್ನು ಸಂಘದ ಸಿಬ್ಬಂದಿಗಳೇ ತಮ್ಮ ಜೇಬಿಗೆ ಹಾಕಿಕೊಂಡಿದ್ದಾರೆ ಎಂದು ರೈತರು ಆರೋಪಿಸಿ ಆರಂಭಗೊಂಡ ವಾಗ್ವಾದ ತೀವ್ರ ಸ್ವರೂಪ ಪಡೆದುಕೊಂಡ ಹಿನ್ನಲೆಯಲ್ಲಿ ಹಾವೇರಿ ಹಾಲು ಉತ್ಪಾದಕರ ಮಹಾಮಂಡಳಿ (ಹಾವೇಮುಲ್) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೊಂಡೂರು ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಮಹಮದ್ ಷರೀಪ್ ಮರಡೂರ ಹಾಗೂ ಹಾಲು ಪರೀಕ್ಷಕ ನಾಗರಾಜ ತಳವಾರ ಅವರು ಅಕ್ರಮದಲ್ಲಿ ತೊಡಗಿದ್ದು, ಇವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಲು ಒತ್ತಾಯಿಸಿದರು.
ಈ ಕುರಿತು ಗ್ರಾಮದ ಸಿದ್ಧಲಿಂಗೇಶ್ವರ ಕಲ್ಮಠದ ಸಭಾ ಭವನದಲ್ಲಿ ನಡೆದ ಸಭೆಯಲ್ಲಿ ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು ಹಾಗೂ ಹಾವೇಮುಲ್ ಅಧಿಕಾರಿಗಳು ಹಗರಣದಲ್ಲಿ ಭಾಗಿಯಾಗಿರುವ ಸಿಬ್ಬಂದಿಯನ್ನು ವಜಾಗೊಳಿಸುವದಾಗಿ ಭರವಸೆ ನೀಡಿದ ನಂತರ ರೈತರು ಪ್ರತಿಭಟನೆಯನ್ನು ಹಿಂಪಡೆದರು.
ಹಾವೇಮುಲ್ ಅಧಿಕಾರಿಗಳಾದ ಪ್ರವೀಣ ಮಾಳಿ, ಸಿದ್ದಪ್ಪ ಹಡಪದ, ಹಾಲೂ ಉತ್ಪಾದಕರ ಸಂಘದ ಪದಾಧಿಕಾರಿಗಳಾದ ದೇವಪ್ಪ ನೂಲ್ವಿ, ಶಂಕ್ರಮ್ಮ ತಿಮ್ಮೆನಹಳ್ಳಿ, ನಿಂಗಪ್ಪ ಮರಡೂರ, ಬಸವಣ್ಣೆಪ್ಪ ಅಂಗಡಿ, ಗುಡ್ಡಪ್ಪ ಬಾರ್ಕಿ, ವಿಜಯಾ ದೇವಗಿರಿ, ಇಮಾಮಹುಸೇನ್ ದಾವಲಸಾಬನವರ, ರಾಮಣ್ಣ ಬಿದರಳ್ಳಿ, ಇತರರು ಇದ್ದರು.
ರೈತರಿಗೆ ಅನುಕೂಲ ಕಲ್ಪಿಸಿ
‘ತೊಂಡೂರು ಹಾಲು ಉತ್ಪಾದಕ ಸಂಘದಲ್ಲಿ ರೈತರಿಗೆ ಅನ್ಯಾಯವಾಗದಂತೆ ತಾಲ್ಲೂಕಿನಲ್ಲಿ ಎಲ್ಲಿಯೂ ನಡೆಯದಂತೆ ಆಡಳಿತ ಮಂಡಳಿ ಹಾಗೂ ಹಾವೇರಿ ಹಾಲು ಉತ್ಪಾದಕರ ಮಹಾಮಂಡಳಿಯ ಅಧಿಕಾರಿಗಳು ಕಾಲ ಕಾಲಕ್ಕೆ ಪರಿಶೀಲನೆ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಿ ಹೈನುಗಾರಿಕೆ ಸದೃಢವಾಗಿ ಬೆಳೆಯಲು ಪ್ರೋತ್ಸಾಹ ನೀಡಬೇಕು’ ಎಂದು ರೈತ ಸಂಘಟನೆ ಪದಾಧಿಕಾರಿ ಚನ್ನಪ್ಪ ಮರಡೂರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.