ADVERTISEMENT

ಗ್ರಾಮಕ್ಕೆ ಹೊಸದಾಗಿ ಬಂದಿರುವ ವ್ಯಕ್ತಿಗಳಿಗೆ ಬಡಿಗಿ ಏಟು: ದೀಪಾವಳಿ ವಿಶೇಷ ಆಚರಣೆ

ಧುಂಡಸಿ ಗ್ರಾಮದಲ್ಲಿ ದೀಪಾವಳಿ ವಿಶೇಷ ಆಚರಣೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 12:08 IST
Last Updated 12 ನವೆಂಬರ್ 2020, 12:08 IST
ಶಿಗ್ಗಾವಿ ತಾಲ್ಲೂಕಿನ ಧುಂಡಸಿ ಗ್ರಾಮಕ್ಕೆ ದೀಪಾವಳಿಗೆ ಹೊಸದಾಗಿ ಬಂದಿರುವ ವ್ಯಕ್ತಿಗೆ ಬಡಿಗೆಯಿಂದ ಹೊಡೆಯುತ್ತಿರುವುದು (ಸಂಗ್ರಹ ಚಿತ್ರ)
ಶಿಗ್ಗಾವಿ ತಾಲ್ಲೂಕಿನ ಧುಂಡಸಿ ಗ್ರಾಮಕ್ಕೆ ದೀಪಾವಳಿಗೆ ಹೊಸದಾಗಿ ಬಂದಿರುವ ವ್ಯಕ್ತಿಗೆ ಬಡಿಗೆಯಿಂದ ಹೊಡೆಯುತ್ತಿರುವುದು (ಸಂಗ್ರಹ ಚಿತ್ರ)   

ಶಿಗ್ಗಾವಿ: ದೇವರ ಮುಖವಾಡದ ಅರ್ಚಕನ ಒಂದು ಗುಂಪು, ಎದುರಾಳಿ ಭಕ್ತರ ಇನ್ನೊಂದು ಗುಂಪಿನ ನಡುವೆ ಬಡಿಗೆಯಿಂದ ಪರಸ್ಪರ ಹೊಡೆದಾಟ ಆಡುವ ವಿಶಿಷ್ಟ ದೀಪಾವಳಿ ಹಬ್ಬದ ಆಚರಣೆ ಶಿಗ್ಗಾವಿ ತಾಲ್ಲೂಕಿನ ಧುಂಡಸಿ ಗ್ರಾಮದ ಪಾಟೀಲರ ಓಣಿಯಲ್ಲಿ ಕಂಡು ಬರುತ್ತದೆ.

ಪ್ರಸಕ್ತ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಮುಂದಾಗಿದ್ದಾರೆ.

ದೀಪಾವಳಿ ಅಮಾವಾಸ್ಯೆ ಮರುದಿನ ಬಲಿಪಾಡ್ಯ ದಿನದಂದು ಒಂದೇ ಹೆಸರಿನಲ್ಲಿರುವ ದಂಪತಿಗಳಿಂದ ಇಲ್ಲಿ ಪೂಜೆ ನಡೆಯುತ್ತದೆ. ದನ,ಎತ್ತು,ಕರುಗಳನ್ನು ಬೆದರಿಸುವ ಆಚರಣೆ ನಡೆಯುತ್ತದೆ. ಸಂಜೆ ದೇವರ ಮುಖವಾಡ ಹಾಕಿಕೊಂಡ ವ್ಯಕ್ತಿಯನ್ನು ಒಂದು ದೊಡ್ಡ ಬಡಿಗೆ, ಎದುರಾಳಿ ಭಕ್ತರ ಗುಂಪಿನಲ್ಲಿ ಬಡಿಗೆ ಹಿಡಿದುಕೊಂಡು ಈ ಎರಡು ಗುಂಪಿನ ನಡುವೆ ಬಡಿಗೆಯಿಂದ ಪರಸ್ಪರ ಮೆಲ್ಲಗೆ ಬಡಿದಾಟ ನಡೆಸುವುದು ವೀರ ಮುಖ ಆಚರಣೆಯ ವಿಶಿಷ್ಟ ಪರಂಪರೆಯಾಗಿದೆ.

ADVERTISEMENT

ದೀಪಾವಳಿಗೆ ಬಂದಿರುವರನ್ನು ಬಡಿಗೆಯಿಂದ (ಮೆಲ್ಲಗೆ) ಹೊಡೆಯುತ್ತಾರೆ. ಬಡಿಗೆ ಏಟು ತಿಂದವರಿಗೆ ರೋಗರುಜಿನ ಹೋಗುತ್ತದೆ, ವಯಸ್ಕರಿಗೆ ವಿವಾಹ, ಕಂಕಣಬಲ ಕೂಡಿಬರಲಿದೆ, ಉದ್ಯೋಗ ಸೇರಿದಂತೆ ಶುಭ ಕಾರ್ಯಗಳು ನಡೆಯುತ್ತವೆ ಎಂಬ ನಂಬಿಕೆ ಇಂದಿಗೂ ಇದೆ. ಹೀಗಾಗಿ ಕೆಲವು ಯುವಕರು ಗ್ರಾಮಕ್ಕೆ ಬಂದಿರುವ ಹೊಸಬರು, ಅಳಿಯಂದಿರು, ಮಾವಂದಿರರನ್ನು ಗುರುತಿಸಿ ಬಡಿಗೆಯಿಂದ ಹೊಡೆಯಲು ತವಕದಲ್ಲಿ ಇರುತ್ತಾರೆ. ಸುತ್ತಲಿನ ಗ್ರಾಮಸ್ಥರು ಕೂಡ ಬಂದು ಈ ಆಚರಣೆಯಲ್ಲಿ ಪಾಲ್ಗೊಂಡು ಬಡಿಗೆಯಿಂದ ಬಡಿಸಿಕೊಂಡು ಹೋಗುತ್ತಾರೆ ಎಂದು ಶಿವನಗೌಡ್ರ ಪಾಟೀಲ, ರುದ್ರಗೌಡ್ರ ಪಾಟೀಲ, ಬಸನಗೌಡ್ರ ಪಾಟೀಲರ ಕುಟುಂಬಸ್ಥರು ಹೇಳುತ್ತಾರೆ.

ದೇವರ ಮುಖವಾಡ ಹಾಕುವ ಲಕ್ಷ್ಮಣ ಮಲ್ಲಪ್ಪ ಬಾರ್ಕೇರ ಅವರಿಗೆ ಐದು ದಿನಗಳ ಕಾಲ ಗೌಡರ ಮನೆಯಿಂದ ಹಾಲು,ಹಣ್ಣು ವಿತರಿಸಲಾಗುತ್ತಿದೆ. ನಂತರ ಪಾಡ್ಯ ದಂದು ಗೌಡರ ಮನೆಯಿಂದ ಸುಮಾರು ಐದು ಸುತ್ತು ಮೆರವಣಿಗೆ ನಡೆಯುತ್ತದೆ. ನಂತರ ಗ್ರಾಮದ ಹಿರಿಯರಾದ ರೇವಣಸಿದ್ದಯ್ಯ ಹಿರೇಮಠ ಅವರ ಮನೆ ಅಂಗಳದಲ್ಲಿ ಮುಕ್ತಾಯ ಮಾಡುತ್ತಾರೆ. ದೇವರ ಮುಖವಾಡ ಹಾಕಿಕೊಂಡಿರುವ ವ್ಯಕ್ತಿಯನ್ನು ವಿಶೇಷವಾಗಿ ಪೂಜಿಸಲಾಗುತ್ತಿದೆ. ನಂತರ ಗ್ರಾಮದ ಬಸವಣ್ಣ ದೇವಸ್ಥಾನದ ಹತ್ತಿರದಲ್ಲಿ ಗೊಲಕವ್ವನ ಪೂಜೆ, ಅನ್ನಪ್ರಸಾದ ನಡೆಯುತ್ತದೆ. ಅದರಿಂದ ಮಳೆ, ಬೆಳೆ ಹುಲುಸಾಗಿ ಬೆಳೆಯಲಿದೆ ಎಂಬ ನಂಬಿಕೆಯಿದೆ.

'ಪೂರ್ವಜರ ಕಾಲದಿಂದ ಈ ಸಂಪ್ರದಾಯವನ್ನು ನಮ್ಮ ಕುಟುಂಬದಿಂದ ಆಚರಣೆಯಲ್ಲಿದ್ದು, ಆದರಲ್ಲಿ ಇಡೀ ಗ್ರಾಮಸ್ಥರು ಪಾಲ್ಗೊಂಡು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಆದರೆ ಈ ವರ್ಷ ಕೊರೊನಾ ಹಿನ್ನೆಲೆ ಸರಳ ಆಚರಣೆಗೆ ಹಮ್ಮಿಕೊಂಡಿದ್ದೇವೆ ಎಂದು ಧುಂಡಸಿ ಶಿವನಗೌಡ್ರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.