ADVERTISEMENT

ತಿಳವಳ್ಳಿಯಲ್ಲಿ ಹೋರಿ ಬೆದರಿಸುವ ಓಟ: ‘ಬಿಡಬ್ಯಾಡ.. ಹಿಡ್ಕೊಳ್ಳೋ.. ಹರಿ ಕೊಬ್ಬರಿ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2023, 14:01 IST
Last Updated 15 ನವೆಂಬರ್ 2023, 14:01 IST
ತಿಳವಳ್ಳಿ ಗ್ರಾಮದಲ್ಲಿ ಮಂಗಳವಾರ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು
ತಿಳವಳ್ಳಿ ಗ್ರಾಮದಲ್ಲಿ ಮಂಗಳವಾರ ಹೋರಿ ಬೆದರಿಸುವ ಸ್ಪರ್ಧೆ ನಡೆಯಿತು   

ತಿಳವಳ್ಳಿ: ಈ ಸಲ ಕೊಬ್ರಿ ಹರಕೊಳ್ಳೋದ.. ಬಂತೋ.. ಬಂತು. ಬಿಡಬ್ಯಾಡೋ ಹಿಡ್ಕೋಳ್ಳೋ.. ಹೋರಿ ಹೋಯಿತು. ಗೇಟ್ ತಗಿ..

–ಹೀಗೆ ತಿಳವಳ್ಳಿ ಗ್ರಾಮದಲ್ಲಿ ಹಟ್ಟಿಹಬ್ಬದ ಅಂಗವಾಗಿ ಮಂಗಳವಾರ ನಡೆದ ಹೋರಿ ಬೆದರಿಸುವ ಓಟದಲ್ಲಿ ಸಂಭ್ರಮದ ಚೀರಾಟ ಮುಗಿಲುಮುಟ್ಟಿತ್ತು.

ಹೋರಿ ಬೆದರಿಸುವ ಹಬ್ಬದಲ್ಲಿ ಪಾಲ್ಗೊಂಡ ನೂರಾರು ಸಂಖ್ಯೆಯ ಯುವಕರ ಪಡೆ ಆರ್ಭಟಿಸುತ್ತಿದ್ದ ಹೋರಿಗಳನ್ನು ಹಿಡಿಯಲು ಹರಸಾಹಸ ಪಡುತ್ತಿದ್ದ ದೃಶ್ಯ ರೋಮಾಂಚನ ಮೂಡಿಸಿತು.

ADVERTISEMENT

ಸಿಳ್ಳೆ, ಕೇಕೆ, ಹಲಗೆ ಸದ್ದಿಗೆ ಹೋರಿಗಳ ಆರ್ಭಟ ಸಂಭ್ರಮಕ್ಕೆ ಸಾಕ್ಷಿಯಾಯಿತು. ಜನರನ್ನು ನೋಡಿ ದಂಗು ಬಡಿದಿದ್ದ ಕೆಲ ಹೋರಿಗಳನ್ನು ಪಟಾಕಿ ಸಿಡಿಸಿ, ಹುರಿದುಂಬಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜೀವದ ಹಂಗು ತೊರೆದು ಹೋರಿ ಹಿಡಿಯಲು ಬಂದಿದ್ದ ತಿಳವಳ್ಳಿಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮದ ಜನರು, ಹೋರಿಗಳನ್ನು ಕಂಡು ಮೂಕವಿಸ್ಮಿತರಾದರು.

‘ಈ ಹೋರಿ ಡೇಂಜರ್ ಐತ್ರಿ ದೂರ್ ಸರ್ರಿ’ ಎಂದು ಮೈಕ್‌ನಲ್ಲಿ ಎಚ್ಚರಿಸುತ್ತಿದ್ದುದೂ ಆಗಾಗ ಕೇಳಿ ಬರುತ್ತಿದ್ದವು. ಇದನ್ನು ಕೆಲ ಪಡ್ಡೆಗಳು ಲೆಕ್ಕಕ್ಕೂ ಪರಿಗಣಿಸದೇ ತಮ್ಮದೇ ಧಾಟಿಯಲ್ಲಿ ನಮಗೆ ಗೊತ್ತಿದೆ ಬಿಡ್ರಿ ಎಂದು ಹೇಳುತ್ತಿದ್ದರು.

ಹೋರಿಗಳಿಗೆ ವಿಶೇಷ ಅಲಂಕಾರ ಮಾಡಿ ಸ್ಪರ್ಧೆಯ ಅಖಾಡದಲ್ಲಿ ಬಿಡಲಾಗುತ್ತದೆ. ಈ ಹೊತ್ತಿನಲ್ಲಿ ಹೋರಿಗಳ ಗತ್ತು ನೋಡುವುದೇ ಎಲ್ಲಿಲ್ಲದ ಸಂತಸ. ಹೋರಿಗಳಿಗೆ ರಂಗುರಂಗಿನ ಜೂಲಾ ಹಾಕಿ, ಕೊರಳಲ್ಲಿ ಗೆಜ್ಜೆಸರ, ಕೊಂಬುಗಳಿಗೆ ಬಗೆಬಗೆಯ ಬಲೂನ್‌ಗಳನ್ನು ಹಾಗೂ ರಿಬ್ಬನ್ ಕಟ್ಟಿ ಸಿಂಗರಿಸಿ, ಕೊರಳಿಗೆ ಒಣ ಕೊಬ್ಬರಿ ಸರ ಕಟ್ಟಿ ಅಖಾಡದಲ್ಲಿ ಓಡಿಸಲಾಯಿತು. ಇದರಲ್ಲಿಯ ಕೆಲ ಹೋರಿಗಳನ್ನು ಯುವಕರು ಹಿಡಿದು ಕೊಬ್ಬರಿಯನ್ನು ಹರಿದುಕೊಳ್ಳುವ ಮೂಲಕ ತಮ್ಮ ಚಾಕಚಕ್ಯತೆ ಮೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.