ADVERTISEMENT

ಹಾವೇರಿ | ಹಣದಾಸೆಗೆ ನನ್ನ ವಿರುದ್ಧ ಅಪಪ್ರಚಾರ: ಶಹಜಹಾನ ಮುದಕವಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 5:57 IST
Last Updated 3 ಡಿಸೆಂಬರ್ 2025, 5:57 IST
<div class="paragraphs"><p>ಹಾವೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜಾನಪದ ವಿವಿ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಅವರು ಅಂಕಪಟ್ಟಿ ಪ್ರದರ್ಶಿಸಿದರು. ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಜತೆಗಿದ್ದರು</p></div>

ಹಾವೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಜಾನಪದ ವಿವಿ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಅವರು ಅಂಕಪಟ್ಟಿ ಪ್ರದರ್ಶಿಸಿದರು. ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಜತೆಗಿದ್ದರು

   

ಹಾವೇರಿ: ‘ನನ್ನ ವಿದ್ಯಾರ್ಹತೆ ಬಗ್ಗೆ ಸುಳ್ಳು ಆರೋಪ ಮಾಡುತ್ತಿರುವ ಕೆಲವರು, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಇದರ ಹಿಂದೆ ಕಾಣದ ಕೈಗಳಿದ್ದು, ಅಪಪ್ರಚಾರ ಮಾಡಬಾರದೆಂದರೆ ₹4 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು’ ಎಂದು ಜಾನಪದ ವಿಶ್ವವಿದ್ಯಾಲಯದ ಸಹಾಯಕ ಕುಲಸಚಿವ ಶಹಜಹಾನ ಮುದಕವಿ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾನೂನುಬದ್ಧವಾಗಿ ವಿದ್ಯಾರ್ಹತೆ ಪಡೆದು, ಸಹಾಯಕ ಕುಲಸಚಿವನಾಗಿದ್ದೇನೆ. ವಿದ್ಯಾರ್ಹತೆ ಬಗ್ಗೆ ಸರ್ಕಾರ ಯಾವುದೇ ತನಿಖೆ ನಡೆಸಿದರೂ ಎದುರಿಸುತ್ತೇನೆ. ಆರೋಪ ಮಾಡುವವರ ಜೊತೆಗೂ ದಾಖಲೆ ಸಮೇತ ಬಹಿರಂಗ ಚರ್ಚೆಗೆ ಸಿದ್ದನಿದ್ದೇನೆ’ ಎಂದರು.

‘ಸ್ನಾತಕ, ಸ್ನಾತಕೋತ್ತರ ಪದವಿಗೆ ಸಮಾನವಾದ ವಿದ್ಯಾರ್ಹತೆ ಪಡೆದಿದ್ದೇನೆ. ಕೆ–ಸೆಟ್ ಉತ್ತೀರ್ಣನಾಗಿ, ಪಿಎಚ್‌ಡಿ ಮಾಡುತ್ತಿದ್ದೇನೆ. ಸಹಾಯಕ ಕುಲಸಚಿವನಾದ ಬಳಿಕ, ಕೆಲವರು ತಮಗೆ ಕೆಲಸ ಸಿಗಲಿಲ್ಲವೆಂದು ಹತಾಶೆಯಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇತ್ತೀಚೆಗೆ ನನ್ನ ಮದುವೆಗೂ ಮುನ್ನ, ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋಗಿದ್ದರು. ಪರಿಚಯವಿಲ್ಲದ ಮಹಿಳೆಯಿಂದ, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿ ಹಿಂಸೆ ನೀಡಿದರು. ನಾನು ನಿಷ್ಠುರವಾಗಿ ಮಾತನಾಡಿದರೆ, ನನ್ನ ಮೇಲೆ ಎಸ್‌.ಸಿ.–ಎಸ್‌.ಟಿ. ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು’ ಎಂದು ಹೇಳಿದರು.

‘ಕೆಲವರು ನಿರಂತರವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನನಗೂ ಹಾಗೂ ವಿವಿಯ ಸಿಬ್ಬಂದಿಗೆ ಬೆದರಿಕೆ ಇರುವ ಬಗ್ಗೆ ನ. 24ರಂದು ಸಿಂಡಿಕೇಟ್ ಸದಸ್ಯರಿಗೆ ಮನವಿ ನೀಡಿದ್ದೆವು. ಸದಸ್ಯರು ನಾಲ್ವರ ಮಾತನ್ನಷ್ಟೇ ಕೇಳಿ ನನ್ನ ನೇಮಕಾತಿ ಬಗ್ಗೆ ಪ್ರಶ್ನಿಸಿದರು. ಸಂಬಂಧವಿಲ್ಲದ ವಿಚಾರಗಳ ಚರ್ಚೆಯಿಂದ ಸಭೆ ತಡವಾಯಿತು. ನನ್ನಿಂದಲೇ ಸಭೆ ತಡವಾಯಿತೆಂದು ಸದಸ್ಯರು ಆರೋಪಿಸುತ್ತಿರುವುದು ಸತ್ಯಕ್ಕೆ ದೂರವಾದದ್ದು’ ಎಂದು ಮುದಕವಿ ದೂರಿದರು.

ಮುದಕವಿ ಪರ ನಿಂತ ಕುಲಪತಿ: ಅಕ್ರಮ ನೇಮಕಾತಿ ಆರೋಪ ಎದುರಿಸುತ್ತಿರುವ ಶಹಜಹಾನ ಮುದಕವಿ ಪರ ನಿಂತಿರುವ ಕುಲಪತಿ ಭಾಸ್ಕರ್, ‘ಮುದಕವಿ ಪರವಾಗಿ ನಾನು ಹಾಗೂ ಇಡೀ ವಿಶ್ವವಿದ್ಯಾಲಯ ನಿಂತಿದೆ. ನೇಮಕಾತಿ ಸಮಿತಿಯ ಅಧ್ಯಕ್ಷನಾಗಿ ಕೆಲಸ ಮಾಡಿದ್ದ ನಾನು, ಪ್ರಾಮಾಣಿಕವಾಗಿ ಹಾಗೂ ನಿಯಮಬದ್ಧವಾಗಿ ನೇಮಕಾತಿ ಪ್ರಕ್ರಿಯೆ ನಡೆಸಿದ್ದೇನೆ. ಈಗ ಕೆಲವರು, ವಿವಿ ಹೆಸರು ಕೆಡಿಸಲು ಸುಖಾಸುಮ್ಮನೇ ಆರೋಪ ಮಾಡುತ್ತಿದ್ದಾರೆ’ ಎಂದರು.

‘ವಿವಿಯಿಂದ ಎಲ್ಲರೂ ಬಂದಿದ್ದೀರಾ. ಕುಲಸಚಿವರು ಏಕೆ ಬಂದಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಕುಲಪತಿ ಭಾಸ್ಕರ್, ‘ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ’ ಎಂದರು.

ಕುಲಪತಿ ಮಾತ್ರವಲ್ಲದೇ ವಿವಿ ಪ್ರಾಧ್ಯಾಪಕರು, ಆಡಳಿತ ವಿಭಾಗ ಸೇರಿ ವಿವಿಧ ವಿಭಾಗದ ಸಿಬ್ಬಂದಿ ಸಹ
ಇದ್ದರು.

ಪರಿಶಿಷ್ಟರ ರಕ್ಷಣೆ ಹಾಗೂ ನ್ಯಾಯಕ್ಕಾಗಿ ಎಸ್‌.ಸಿ–ಎಸ್‌.ಟಿ. ದೌರ್ಜನ್ಯ ತಡೆ ಕಾಯ್ದೆ ಜಾರಿಯಾಗಿದೆ. ಆದರೆ, ಕೆಲವರು ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ನಮ್ಮಂಥ ಅಮಾಯಕರನ್ನು ಬೆದರಿಸಿ ದೌರ್ಜನ್ಯ ಎಸಗುತ್ತಿದ್ದಾರೆ.
ಶಹಜಹಾನ ಮುದಕವಿ,ಸಹಾಯಕ, ಕುಲಸಚಿವ, ಕರ್ನಾಟಕ ಜಾನಪದ ವಿವಿ
ಕಡ್ಡಾಯ ಹಾಜರಾತಿ: ಕುಲಪತಿ ನಡೆಗೆ ಆಕ್ರೋಶ
ಹಾವೇರಿಯಲ್ಲಿ ನಡೆಯುವ ಪತ್ರಿಕಾಗೋಷ್ಠಿಗೆ ಕಡ್ಡಾಯವಾಗಿ ಬರುವಂತೆ ಕುಲಪತಿ ಅವರು ತಿಳಿಸಿದ್ದರು. ಹೀಗಾಗಿ, ಇಷ್ಟವಿಲ್ಲದಿದ್ದರೂ ಪತ್ರಿಕಾಗೋಷ್ಠಿಗೆ ಬಂದಿದ್ದೇವೆ’ ಎಂದು ವಿವಿಯ ಸಿಬ್ಬಂದಿಯೊಬ್ಬರು ಆಕ್ರೋಶ ಹೊರಹಾಕಿದರು. ‘ವಿವಿಯಲ್ಲಿ ಎಲ್ಲವೂ ಸರಿಯಾಗಿಲ್ಲ. ತಪ್ಪು ಮಾಹಿತಿ ನೀಡುವವರೇ ಹೆಚ್ಚಿದ್ದಾರೆ. ಸುಳ್ಳುಗಳನ್ನು ಕೇಳಿ ಸಾಕಾಗಿದೆ. ಪತ್ರಿಕಾಗೋಷ್ಠಿಯ ವಿಷಯ ನಮಗೆ ಗೊತ್ತಿರಲಿಲ್ಲ. ‘ಕುಲಪತಿಯವರು ಹೇಳಿದ್ದಾರೆ. ಕಡ್ಡಾಯವಾಗಿ ಬರಬೇಕು’ ಎಂದು ಮೊಬೈಲ್ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿದ್ದರು. ಕೆಲಸಕ್ಕೆ ತೊಂದರೆಯಾಗಬಹುದೆಂದು ಬಂದಿದ್ದೇವೆ. ತಪ್ಪು ಯಾರೇ ಮಾಡಿದರೂ ಶಿಕ್ಷೆಯಾಗಬೇಕು. ಅಕ್ರಮ ನೇಮಕಾತಿ ಆರೋಪದ ಬಗ್ಗೆಯೂ ಉನ್ನತ ಮಟ್ಟದ ತನಿಖೆಯಾಗಲಿ’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.