ADVERTISEMENT

ದಿನೇ ದಿನೇ ಬಿಸಿಲ ಝಳ ಹೆಚ್ಚಳ; ಫ್ಯಾನ್‌–ಕೂಲರ್‌ಗೆ ಮೊರೆ

ಸೆಕೆ ತಪ್ಪಿಸಲು ಜನತೆ ಹರಸಾಹಸ

ಮಂಜುನಾಥ ರಾಠೋಡ
Published 21 ಏಪ್ರಿಲ್ 2019, 20:00 IST
Last Updated 21 ಏಪ್ರಿಲ್ 2019, 20:00 IST
ಹಾವೇರಿಯ ಅಂಗಡಿಯೊಂದರಲ್ಲಿ ಫ್ಯಾನ್‌ ರಿಪೇರಿ ಮಾಡುತ್ತಿರುವುದು
ಹಾವೇರಿಯ ಅಂಗಡಿಯೊಂದರಲ್ಲಿ ಫ್ಯಾನ್‌ ರಿಪೇರಿ ಮಾಡುತ್ತಿರುವುದು   

ಹಾವೇರಿ: ನಗರಲ್ಲಿ ದಿನೇ ದಿನೇ ಬಿಸಿಲಿನ ಝಳ ಏರಿಕೆ ಕಾಣುತ್ತಿದ್ದು, ಸಿಲಿಂಗ್‌ ಫ್ಯಾನ್‌, ಟೇಬಲ್‌ ಫ್ಯಾನ್‌, ಟವರ್‌ ಫ್ಯಾನ್‌, ಕೂಲರ್‌ಗಳ ಮಾರಾಟಕ್ಕೂ ಬೇಡಿಕೆ ಬಂದಿದೆ.

‘ಮಾರುಕಟ್ಟೆಯಲ್ಲಿ ಟೇಬಲ್‌, ವಾಲ್‌, ಸಿಲಿಂಗ್‌ ಫ್ಯಾನ್‌ಗಳ ಜೊತೆಗೆ 17ಲೀ., 20 ಲೀ., 25 ಲೀ. ಕೂಲರ್‌ಗಳು ಮಾರಾಟವಾಗುತ್ತಿವೆ. ವ್ಯಾಪಾರ ಸಾಧಾರಣವಾಗಿದ್ದು, ಜನರು ಹಳೆಯ ಫ್ಯಾನ್‌, ಕೂಲರ್‌ಗಳನ್ನು ರಿಪೇರಿ ಮಾಡಿಸಿ ಉಪಯೋಗಿಸುತ್ತಾರೆ’ ಎಂದು ಅನಾಸಾಗರ ಹೋಂ ಅಪ್ಲಾಯಿಸಸ್‌ನ ಅಬುಸಾಲೇಹ್ ತಿಳಿಸಿದರು.

‘ಚಿಕ್ಕ, ಮಧ್ಯಮ, ದೊಡ್ಡಗಾತ್ರದ ಫ್ಯಾನ್‌ಗಳ ಹಾಗೂ ವಿವಿಧ ಕಂಪನಿಯ ಫ್ಯಾನ್‌ಗಳಿದ್ದು, ಅದಕ್ಕೆ ತಕ್ಕಂತೆ ಬೆಲೆಯು ನಿಗದಿಪಡಿಸಲಾಗಿದೆ. ಜನರು ಬಿಸಿಲಿನ ಸೆಕೆ ತಡೆಯಲು, ಹೊಸ ಮನೆಗೆ ಅಳವಡಿಸಲು, ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಉಡುಗೊರೆ ಕೊಡಲು ಫ್ಯಾನ್‌, ಕೂಲರ್‌ಗಳನ್ನು ಖರೀದಿಸುತ್ತಾರೆ’ ಎಂದು ಅವರು ವಿವರಿಸಿದರು.

ADVERTISEMENT

‘ಬರಗಾಲದಿಂದ ಕಂಗೆಟ್ಟ ಜನರ ಆದಾಯ ಕಡಿಮೆಯಾಗಿದೆ. ಮಳೆ–ಬೆಳೆ ಚೆನ್ನಾಗಿದ್ದರೆ ವ್ಯಾಪಾರವು ಚೆನ್ನಾಗಿರುತ್ತದೆ. ಇದರಿಂದಾಗಿ ಹಳೆ ಪ್ಯಾನ್‌ಗಳನ್ನೇ ರಿಪೇರಿ ಮಾಡಿಸಿ ಬಳಕೆ ಮಾಡುವವರ ಸಂಖ್ಯೆಯು ಹೆಚ್ಚಾಗಿದೆ’ ಎಂದು ಪೂಜಾ ಇಲೇಕ್ಟ್ರಾನಿಕ್ಸ್‌ನ ಕೆ.ಡಿ.ಗುಜ್ಜರ ಹೇಳಿದರು.

‘ದಿನೇ ದಿನೇ ಬಿಸಿಲು ಏರುತ್ತಿರುವುದರಿಂದ ಮಜ್ಜಿಗೆ, ಲಸ್ಸಿ, ಹಣ್ಣಿನ ರಸ, ಮಡಿಕೆ ನೀರು ಸೇವಿಸುತ್ತಿದ್ದೇವೆ. ಆದರೂ ಸೆಕೆ ತಡೆಯಲು ಆಗುತ್ತಿಲ್ಲ. ಸ್ವಲ್ಪ ಹೊತ್ತು ಬಿಸಿಲಿನಲ್ಲಿ ನಿಂತರೆ ತಲೆ ತಿರುಗುತ್ತದೆ. ಬಿಸಿಲಿನಿಂದಾಗಿ ಬೆಳಿಗ್ಗೆಯಿಂದಲೇ ಮನೆ ಹಾಗೂ ಕಚೇರಿಗಳಲ್ಲಿ ಫ್ಯಾನ್‌ ಹಾಕಿ ಕುಳಿತುಕೊಳ್ಳುವ ಪರಿಸ್ಥಿತಿ ಇದೆ’ ಎಂದು ಮುಸ್ತಾಕ್ ಅಹ್ಮದ್ ತಿಳಿಸಿದರು.

‘ನಿರಂತರ ಮಳೆಯಾದರೆ ಸೆಕೆ ಇಷ್ಟು ಇರುವುದಿಲ್ಲ, ಒಂದು ದಿನ ಮಳೆಯಾಗಿ ನಿಂತರೆ ಸೆಕೆ ಹೆಚ್ಚಾಗುತ್ತದೆ. ವಾತಾವರಣ ಬದಲಾಗಿ ಮನೆಯ ಮಕ್ಕಳ, ವೃದ್ದರ, ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಜ್ವರ, ನೆಗಡಿ, ಕೆಮ್ಮು ಕಾಯಿಲೆಗೆ ತುತ್ತಾಗುತ್ತಿದ್ದಾರೆ’ ಎಂದು ಅವರು ವಿವರಿಸಿದರು.

‘ಹಿಂದೆ ಬೀಸಣಿಕೆ, ಚಾಮರಗಳು ಇತ್ತು. ನಮ್ಮ ಕಾಲದಲ್ಲಿ ಫ್ಯಾನ್‌, ಕೂಲರ್‌ಗಳು ಏನೆಂದರೆ ಗೊತ್ತಿರಲಿಲ್ಲ. ನಾವು ಬಿಸಣೆಕೆಯನ್ನು ಬಳಕೆ ಮಾಡುತ್ತಿದ್ದೇವೆ. ಬೀಸಣಿಕೆ ಇಲ್ಲದಿದ್ದಾಗ ಪುಸ್ತಕ–ಪತ್ರಿಕೆಗಳನ್ನು ಬಳಕೆ ಮಾಡಿದ್ದೂ ಇದೆ. ಈಗ ಅದೆಲ್ಲ ಈಗ ಮಾಯವಾಗಿದ್ದು, ಆಧುನಿಕ ತಂತ್ರಜ್ಞಾಕ್ಕೆ ನಾವು ಹೊಂದಿಕೊಂಡಿದ್ದೇವೆ’ ಎಂದು ಹಿರಿಯರಾದ ಹಜರೇಸಾಬ್‌ ಗಂಜಿಗಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.