
ಹಾವೇರಿ: ‘ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸಬೇಕಾದರೆ, ಛಲದಿಂದ ಅಧ್ಯಯನ ನಡೆಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.
ನಗರದಲ್ಲಿರುವ ಎಂ.ಆರ್.ಎಂ. ವಸತಿಯುತ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳು ತನ್ನ ಕನಸನ್ನು ನನಸು ಮಾಡಲು ನಿರಂತರ ಪ್ರಯತ್ನ ಮಾಡಬೇಕು. ಮಗುವಿನ ಶಿಕ್ಷಣ ಮತ್ತು ಜೀವನವನ್ನು ರೂಪಿಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಎಂ.ಆರ್.ಎಂ ಶಾಲೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಮ ಮೋಹನ ರಾವ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ದೃಢ ಸಂಕಲ್ಪ ಅತೀ ಅವಶ್ಯಕ. ಮನಸ್ಸಿನ ಏಕಾಗ್ರತೆ ಮತ್ತು ಪ್ರಯತ್ನದಿಂದ ಏನನ್ನಾದರೂ ಸಾಧಿಸಲು ಸಾಧ್ಯ. ಇದನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು, ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಹಾವೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಪ್ರಜಾ ಪ್ರಗತಿ ಟ್ರಸ್ಟ್ ನಿರ್ದೇಶಕರಾದ ಎಂ.ಎಸ್.ಗಾಂಧಿ, ಎಂ.ಆರ್.ಎಂ. ಟ್ರಸ್ಟ್ ನಿರ್ದೇಶಕ ರಾಜೀವ್ ಸಾಯಿ, ಮುಖ್ಯ ಶಿಕ್ಷಕರಾದ ಅಕ್ಷತಾ ಸುರಪುರಮಠ ಇದ್ದರು.
ಶಾಲೆಯ ವಿದ್ಯಾರ್ಥಿಗಳು ನೃತ್ಯ, ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.