ADVERTISEMENT

ರಾಜ್ಯದ 35 ಗ್ರಾಮ ಪಂಚಾಯಿತಿಗಳಲ್ಲಿ ‘ಡಿಜಿಟಲ್‌ ಸಾಕ್ಷರತೆ’

16ರಿಂದ 60 ವರ್ಷದವರಿಗೆ ತಂತ್ರಜ್ಞಾನ ಕುರಿತು ಉಚಿತ ತರಬೇತಿ

ಸಿದ್ದು ಆರ್.ಜಿ.ಹಳ್ಳಿ
Published 16 ಅಕ್ಟೋಬರ್ 2023, 21:14 IST
Last Updated 16 ಅಕ್ಟೋಬರ್ 2023, 21:14 IST
ಹಾವೇರಿ ಜಿಲ್ಲೆಯ ನೆಲೋಗಲ್‌ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ‘ಡಿಜಿಟಲ್‌ ಸಾಕ್ಷರತೆ’ ತರಬೇತಿ ಪಡೆಯುತ್ತಿರುವ ಮಹಿಳೆಯರು  – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ಜಿಲ್ಲೆಯ ನೆಲೋಗಲ್‌ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ‘ಡಿಜಿಟಲ್‌ ಸಾಕ್ಷರತೆ’ ತರಬೇತಿ ಪಡೆಯುತ್ತಿರುವ ಮಹಿಳೆಯರು  – ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಹಾವೇರಿ: ಗ್ರಾಮಗಳು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಮಸ್ಥರು ನಿತ್ಯದ ಚಟುವಟಿಕೆಗಳಿಗೆ ಡಿಜಿಟಲ್‌ ಜ್ಞಾನ ಹೊಂದಬೇಕು ಎಂಬ ಉದ್ದೇಶದಿಂದ ಸರ್ಕಾರ ರಾಜ್ಯದ ಆಯ್ದ 35 ಗ್ರಾಮ ಪಂಚಾಯಿತಿಗಳಲ್ಲಿ ‘ಡಿಜಿಟಲ್‌ ಸಾಕ್ಷರತೆ ತರಬೇತಿ ಕಾರ್ಯಕ್ರಮ’ವನ್ನು ಅನುಷ್ಠಾನಗೊಳಿಸಿದೆ. 

ಕೇರಳದ ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಸಂಪೂರ್ಣ ತಂತ್ರಜ್ಞಾನ ಸಾಕ್ಷರತೆ ಘೋಷಣೆಯಾಗಿದೆ. ಇದೇ ಮಾದರಿ ಇಲ್ಲಿ ಅನುಸರಿಸಿ ಈ ವರ್ಷದ ಡಿಸೆಂಬರ್‌ ಅಂತ್ಯದೊಳಗೆ 35 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ‘ಸಂಪೂರ್ಣ ಡಿಜಿಟಲ್‌ ಸಾಕ್ಷರತೆ’ ಸಾಧಿಸಲು ರಾಜ್ಯ ಸರ್ಕಾರ ಗುರಿ ಹೊಂದಿದೆ.

ಗ್ರಾಮೀಣ ಅಭಿವೃದ್ದಿ ಪಂಚಾಯತ್‌ರಾಜ್‌ ಇಲಾಖೆಯು ಡೆಲ್‌ ಸಂಸ್ಥೆ ಮತ್ತು ಶಿಕ್ಷಣ ಫೌಂಡೇಷನ್‌ ಸಹಯೋಗದಲ್ಲಿ ‘ಗ್ರಾಮ ಡಿಜಿ ವಿಕಸನ’ ಕಾರ್ಯಕ್ರಮದಡಿ, ಗ್ರಾಮಸ್ಥರಿಗೆ ಡಿಜಿಟಲ್‌ ಸಾಧನ ಬಳಸುವ ಕುರಿತು ಉಚಿತ ತರಬೇತಿ ನೀಡಲಾಗುತ್ತಿದೆ. ಸ್ಮಾರ್ಟ್‌ ಫೋನ್‌ ಬಳಕೆ, ಸರ್ಚ್‌, ಅಂತರ್ಜಾಲ ಸುರಕ್ಷತೆ, ವಾಟ್ಸ್‌ಆ್ಯಪ್‌, ಬ್ಯಾಂಕಿಂಗ್‌ ಆ್ಯಪ್‌ಗಳ ಬಳಕೆ, ಆನ್‌ಲೈನ್‌ ಸೇವೆ ಪಡೆಯುವಿಕೆ ಮತ್ತು ಡಿಜಿಟಲ್‌ ಪೇಮೆಂಟ್ಸ್‌ ಕುರಿತು ಅರಿವು ಮೂಡಿಸಲಾಗುತ್ತಿದೆ.

ADVERTISEMENT

1706 ಮಂದಿ ಆಯ್ಕೆ: ‘ಹಾವೇರಿ ಜಿಲ್ಲೆಯ ನೆಲೋಗಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ–ಮನೆ ಸಮೀಕ್ಷೆ ನಡೆಸಿ, ಡಿಜಿಟಲ್‌ ಸಾಕ್ಷರತೆ ತರಬೇತಿಗೆ 1706 ಫಲಾನುಭವಿಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆ. ರೈತರು, ಕೂಲಿ ಕಾರ್ಮಿಕರು, ಅಂಗವಿಕಲರು, ಮಹಿಳೆಯರು ಸೇರಿ ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಈ ಎರಡೂ ವರ್ಗದವರಿಗೂ ಗ್ರಾಮ ಪಂಚಾಯಿತಿಯ ಗ್ರಂಥಾಲಯದಲ್ಲಿ ಸೆಪ್ಟೆಂಬರ್ 1ರಿಂದ ತರಬೇತಿ ಆರಂಭಿಸಿದ್ದೇವೆ. ರೈತರಿಗೆ ಅನುಕೂಲವಾಗುವ ಸಮಯಕ್ಕೆ ವಾರದಲ್ಲಿ ಎರಡು ತರಗತಿ ನಡೆಸುತ್ತೇವೆ’ ಎಂದು ಶಿಕ್ಷಣ ಫೌಂಡೇಷನ್‌ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನಗೌಡ ಫಕ್ಕೀರಗೌಡ್ರ ತಿಳಿಸಿದರು. 

ಸ್ವಯಂ ಸೇವಕರ ಆಯ್ಕೆ: ‘ಗ್ರಾಮದ ಪದವೀಧರರನ್ನು ಗುರುತಿಸಿ, ವಾರ್ಡ್‌ ಹಂತದಲ್ಲಿ ಸ್ವಯಂ ಸೇವಕರನ್ನಾಗಿ ನೇಮಿಸಿಕೊಂಡು, ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ್ದೇವೆ. ಸ್ವಯಂ ಸೇವಕರು ತಮ್ಮ ಗ್ರಾಮಸ್ಥರಿಗೆ ಪ್ರಾಯೋಗಿಕ ತರಬೇತಿ ನೀಡುತ್ತಾರೆ. ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಕ್ರೋಮ್‌ಬುಕ್‌, ಮಾನಿಟರ್‌, ಇಂಟರ್‌ನೆಟ್‌ ಸೌಲಭ್ಯವನ್ನು ಗ್ರಂಥಾಲಯಗಳಿಗೆ ಕಲ್ಪಿಸಲಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾ ಕುರುಬಗೊಂಡ, ಬಸವರಾಜ ಕೊಟ್ರಳ್ಳಿ ತಿಳಿಸಿದರು.

‘8ನೇ ತರಗತಿ ಓದಿರುವ ನಾನು ಡಿಜಿಟಲ್‌ ಸಾಕ್ಷರತೆ ತರಬೇತಿ ಪಡೆಯುತ್ತಿದ್ದು, ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಮಾಡುವುದು, ವಾಯ್ಸ್‌ ಮೆಸೇಜ್‌ ಕಳುಹಿಸುವುದು, ಹೆಸರು ಮತ್ತು ಫೋನ್‌ ನಂಬರ್‌ ಸೇವ್ ಮಾಡುವುದನ್ನು ಕಲಿತಿದ್ದೇನೆ. ಅಪ್ಲಿಕೇಶನ್‌ಗಳ ಬಳಕೆ ಮತ್ತು ಆನ್‌ಲೈನ್‌ ಮೂಲಕ ಬ್ಯಾಂಕಿಂಗ್‌ ವ್ಯವಹಾರ ಮಾಡುವುದನ್ನು ಕಲಿತುಕೊಂಡು ಸಂಜೀವಿನಿ ಒಕ್ಕೂಟದ ಮಹಿಳಾ ಸದಸ್ಯರಿಗೆ ಅರಿವು ಮೂಡಿಸುತ್ತೇನೆ’ ಎಂದು ನೆಲೋಗಲ್‌ ಗ್ರಾಮದ ಸವಿತಾ ದೊಡ್ಡತಳವಾರ ತಿಳಿಸಿದರು. 

16ರಿಂದ 60 ವರ್ಷದ ಎಲ್ಲ ಗ್ರಾಮಸ್ಥರು ಡಿಜಿಟಲ್‌ ಸಾಕ್ಷರರಾದರೆ ಅಂತಹ ಗ್ರಾಮವನ್ನು ‘ಸಂಪೂರ್ಣ ಡಿಜಿಟಲ್‌ ಸಾಕ್ಷರತಾ ಗ್ರಾಮ’ ಎಂದು ಘೋಷಿಸಲಾಗುತ್ತದೆ.
ಅಕ್ಷಯ ಶ್ರೀಧರ, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾವೇರಿ ಜಿಲ್ಲಾ ಪಂಚಾಯಿತಿ
7ನೇ ತರಗತಿ ಓದಿದ ನಾನು ಊದುಬತ್ತಿ ತಯಾರಿಕೆಯ ಸ್ವ–ಉದ್ಯೋಗ ಮಾಡುತ್ತಿದ್ದೇನೆ. ಡಿಜಿಟಲ್‌ ತರಬೇತಿ ಪಡೆದು ಸ್ಮಾರ್ಟ್‌ಫೋನ್‌ನಲ್ಲಿ ವ್ಯವಹರಿಸುವ ಉದ್ದೇಶವಿದ. -
ನಾಗವ್ವ ಲಮಾಣಿ ಡಿಜಿಟಲ್‌ ಸಾಕ್ಷರತೆ ಫಲಾನುಭವಿ ನೆಲೋಗಲ್‌
ಆಯ್ಕೆಯಾದ 35 ಗ್ರಾಮ ಪಂಚಾಯಿತಿಗಳ ವಿವರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.