
ಹಾನಗಲ್: ತಾಲ್ಲೂಕಿನ 70 ವರ್ಷಗಳ 42 ಲಕ್ಷ ಪುಟಗಳ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಕೆಲಸವನ್ನು ಪೂರ್ಣಗೊಳಿಸಲಾಗಿದ್ದು, ವಿಳಂಬಕ್ಕೆ ಅವಕಾಶವಿಲ್ಲದೆ ಕಂದಾಯ ದಾಖಲೆಗಳು ಸಾರ್ವಜನಿಕರ ಕೈಸೇರುತ್ತಿದ್ದು, ಈಗ ದಾಖಲೆಗಳು ಆನ್‌ಲೈನ್‌ನಲ್ಲಿಯೂ ಲಭ್ಯವಿವೆ.
42 ಲಕ್ಷ ಪುಟಗಳ ಕಂದಾಯ ದಾಖಲೆಗಳನ್ನು ಒಂದು ವರ್ಷದ ಅವಧಿಯಲ್ಲಿ ಡಿಜಿಟಲೀಕರಣಗೊಳಿಸಲಾಗಿದ್ದು, ಕಳೆದ ಮೇ ತಿಂಗಳಿನಿಂದ ಡಿಜಿಟಲ್ ದಾಖಲೆಗಳು ಸಾರ್ವಜನಿಕರಿಗೆ ಸಿಗುವ ವ್ಯವಸ್ಥೆ ಆರಂಭಗೊಂಡಿದೆ.
ತಾಲ್ಲೂಕಿನ 3 ಕಂದಾಯ ಹೋಬಳಿಗಳ 157 ಗ್ರಾಮಗಳ 1930 ರಿಂದ 2000ನೇ ಇಸ್ವಿಯವರೆಗಿನ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಮೂಲಕ ಸವಾಲಿನ ಕೆಲಸವನ್ನು ಸಮರ್ಥವಾಗಿ ಪೂರ್ಣಗೊಳಿಸಲಾಗಿದೆ.
ದಿನಕ್ಕೆ 11 ಗಂಟೆಗಳ ಕಾಲ ಕಂದಾಯ ಇಲಾಖೆಯ 20 ನೌಕರರು ಅವಿರತವಾಗಿ ಶ್ರಮಿಸಿದ್ದಾರೆ. 10 ಕಂಪ್ಯೂಟರ್ ಆಪರೇಟರ್, 10 ಕಚೇರಿಯ ಸಹಾಯಕ ಸಿಬ್ಬಂದಿ, ಕಾಲ ಕಾಲಕ್ಕೆ ಇತರ ಕಂದಾಯ ಇಲಾಖೆಯ ಸಿಬ್ಬಂದಿಯ ಸಹಾಯ ಪಡೆಯಲಾಗಿತ್ತು. ಇದರಿಂದ ಅತ್ಯಂತ ಸುಲಭ ಹಾಗೂ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ದಾಖಲೆಗಳನ್ನು ಸಾರ್ವಜನಿಕರಿಗೆ ನೀಡುವ ಕಾರ್ಯ ನಡೆದಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೈ ಬರಹದ ಪಹಣಿಗಳು, ಮೊಟೇಶನ್ ದಾಖಲೆಗಳು, ಭೂ ನ್ಯಾಯ ಮಂಡಳಿಯ ಮಂಜೂರಿ ಪ್ರಕರಣಗಳು, ಖಾತಾ ಬದಲಾವಣೆ ಮೂಲ ವರದಿ ಕಡತಗಳು, ನ್ಯಾಯಾಲಯ ಪ್ರಕರಣಗಳು, ಪಹಣಿ ತಿದ್ದುಪಡಿ ಪ್ರಕರಣಗಳು, ಷರತ್ತು ತಿದ್ದುಪಡಿಗಳು, ಭೂ ನ್ಯಾಯ ಮಂಡಳಿ ಆದೇಶಗಳು, ಭೂ ಮಂಜೂರಾತಿ ಆದೇಶಗಳು ಸೇರಿದಂತೆ ಕಂದಾಯ ದಾಖಲೆಗೆ ಸಂಬಂಧಿಸಿದ ಕೈ ಬರಹದಲ್ಲಿದ್ದ ಮತ್ತು ಹಾರ್ಡ್ ಕಾಪಿಯಾಗಿದ್ದ ಎಲ್ಲ ದಾಖಲೆಗಳನ್ನು ಈಗ ಸಾಫ್ಟ್ ತಂತ್ರಾಶದಲ್ಲಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಡಿಜಿಟಲೀಕರಣದಿಂದಾಗಿ ಈಗ ಯಾವುದೇ ದಾಖಲೆ ಪಡೆಯಲು ವಿಳಂಬವಾಗುವುದಿಲ್ಲ. ತಹಶೀಲ್ದಾರ್ ಕಚೇರಿಯಲ್ಲಿ ಹಾಗೂ ಬಮ್ಮನಹಳ್ಳಿ, ಅಕ್ಕಿಆಲೂರು ನಾಡ ಕಚೇರಿಗಳಲ್ಲಿ ಸುಲಭವಾಗಿ ದಾಖಲೆಗಳನ್ನು ನಿಗದಿತ ಶುಲ್ಕ ಪಾವತಿಸಿ ಸುಲಭವಾಗಿ ಪಡೆಯಬಹುದಾಗಿದೆ. ಈಗ ದಾಖಲೆಗಳು ಕಳೆಯುವ ಪ್ರಸಂಗವೇ ಇಲ್ಲ. ಅನಗತ್ಯ ಮೋಸ, ವಂಚನೆ ಮೂಲಕ ದಾಖಲೆಗಳನ್ನು ತಿದ್ದುಪಡಿ ಮಾಡಿ ಕೊಡಲು ಬರುವುದಿಲ್ಲ. ಇವೆಲ್ಲ ಸ್ಕ್ಯಾನಿಂಗ್‌ನಲ್ಲಿ ಭದ್ರವಾಗಿವೆ. ಇಷ್ಟಾಗಿಯೂ ಬಿಟ್ಟು ಹೋದ ದಾಖಲೆಗಳನ್ನು ಇಲ್ಲಿ ಮತ್ತೆ ನಮೂದಿಸಬಹುದು. ತಪ್ಪಾಗಿದ್ದರೆ ಅಧಿಕೃತ ಆದೇಶವನ್ನಿಟ್ಟುಕೊಂಡು ತಿದ್ದುಪಡಿಯನ್ನೂ ಮಾಡಬಹುದು.
ಡಿಜಟಲೀಕರಣಗೊಂಡ ಒಂದು ಪುಟ ಮಾಹಿತಿ ಪಡೆಯಲು ₹ 20 ಪಾವತಿಸಬೇಕು. ಈ ಹಣ ನೇರವಾಗಿ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗುತ್ತದೆ. ಈಗಾಗಲೇ 60 ಸಾವಿರ ಪುಟಗಳನ್ನು ಸಾರ್ವಜನಿಕರು ಡಿಜಿಟಲೀಕರಣಗೊಂಡ ದಾಖಲೆಯಿಂದ ಪಡೆದಿದ್ದಾರೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸವಾಲಿನ ಕೆಲಸ
ದಾಖಲೆಗಳ ಡಿಜಿಟಲೀಕರಣ ಸವಾಲಿನ ಕೆಲಸವಾಗಿತ್ತು. ಆರಂಭದಲ್ಲಿ ಇದು ಕಷ್ಟ ಸಾಧ್ಯ ಎನಿಸಿತ್ತು. ಹಾನಗಲ್ ದೊಡ್ಡ ತಾಲ್ಲೂಕು. ಸಿಬ್ಬಂದಿ ಕೊರತೆ ಸಾರ್ವಜನಿಕರ ಕುಂದುಕೊರತೆ ಮತ್ತು ಕಚೇರಿ ಕೆಲಸಗಳ ನಡುವೆಯೂ ಪರಿಶ್ರಮ ಹಾಕಿ ಈ ಕಾರ್ಯ ಪೂರ್ಣಗೊಳಿಸಿದ್ದೇವೆ. ಕೆಲವೊಮ್ಮೆ ಊಟ ಉಪಾಹಾರಕ್ಕೂ ಗಮನ ನೀಡದೇ ಕೆಲಸ ಮಾಡಿದ್ದೇವೆ ಎಂದು ತಹಶೀಲ್ದಾರ್ ರೇಣುಕಾ ಎಸ್. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.