ADVERTISEMENT

ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ; ಇನ್‌ಸ್ಪೆಕ್ಟರ್‌ ಚಿದಾನಂದ ಅಮಾನತು

ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2021, 18:21 IST
Last Updated 18 ಡಿಸೆಂಬರ್ 2021, 18:21 IST
ಚಿದಾನಂದ
ಚಿದಾನಂದ   

ಹಾವೇರಿ: ಮಗಳು ಕಾಣೆಯಾದ ಬಗ್ಗೆ ದೂರು ನೀಡಲು ಬಂದಿದ್ದ ಮಹಿಳೆಯೊಂದಿಗೆ ದೂರವಾಣಿ ಮುಖಾಂತರ ಅಶ್ಲೀಲ ಸಂಭಾಷಣೆ ಮತ್ತು ದುರ್ನಡತೆ ತೋರಿದ ಆರೋಪದ ಮೇಲೆ ನಗರದ ಮಹಿಳಾ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಚಿದಾನಂದ ಅವರನ್ನು ದಾವಣಗೆರೆ ಪೂರ್ವ ವಲಯದ ಐಜಿಪಿ ರವಿ ಎಸ್‌. ಅವರು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಚಿದಾನಂದ ಅವರು ಪೋಕ್ಸೋ ಪ್ರಕರಣದ ದೂರುದಾರ ಮಹಿಳೆಗೆ ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್ ಮಾಡಿ ಅಶ್ಲೀಲ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಆಡಿಯೊ ಮತ್ತು ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ವಿಷಯದ ಬಗ್ಗೆ ರಾಣೆಬೆನ್ನೂರು ಡಿವೈಎಸ್ಪಿ ವಿಚಾರಣೆ ನಡೆಸಿದಾಗ, ಅಸಭ್ಯ ಸಂಭಾಷಣೆ ಮತ್ತು ಸಂಜ್ಞೆಯೊಂದಿಗೆ ವ್ಯವಹರಿಸಿರುವುದು ಸ್ಪಷ್ಟವಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ತಿಳಿಸಲಾಗಿದೆ.

ಸಾಲು–ಸಾಲು ದೂರುಗಳು:ಚಿದಾನಂದ ಅವರ ವಿರುದ್ಧ ಈ ಹಿಂದೆಯೂ ಅನೇಕ ದೂರುಗಳು ಬಂದಿದ್ದವು. ಆ ಎಲ್ಲ ಪ್ರಕರಣಗಳನ್ನು ಅಮಾನತು ವರದಿಯಲ್ಲಿ ಉಲ್ಲೇಖಿಸಲಾಗಿದೆ. 2015ರಲ್ಲಿ ಬ್ಯಾಡಗಿ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ, ಮಗ ಕಾಣೆಯಾದ ಬಗ್ಗೆ ದೂರು ನೀಡಲು ಬಂದಿದ್ದ ಮಹಿಳೆಗೆ ಪದೇ ಪದೇ ಕರೆ ಮಾಡಿ, ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ತಿಳಿಸಿ, ಹಣದ ಆಮಿಷ ಮತ್ತು ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪ.

ADVERTISEMENT

2021ರಲ್ಲಿ ಮಗಳ ಮೇಲೆ ನಡೆದ ಲೈಂಗಿಕ ದೌಜನ್ಯ ಕುರಿತು ಅದೇ ಮಹಿಳೆ, ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಲು ಬಂದಾಗ, ಚಿದಾನಂದ ಅವರು ಹಳೆಯ ವಿಷಯವನ್ನು ಪ್ರಸ್ತಾಪಿಸಿ, ಸಹಕರಿಸಿದರೆ ಮಾತ್ರ ಪ್ರಕರಣದಲ್ಲಿ ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡಿ, ಪ್ರಕರಣ ದಾಖಲಿಸದೇ ಹಿಂದಕ್ಕೆ ಕಳುಹಿಸಿದ್ದರು. ಈ ಬಗ್ಗೆ ಹೆಚ್ಚುವರಿ ಎಸ್ಪಿಗೆ ಮಹಿಳೆ ದೂರು ನೀಡಿದ್ದರು ಎಂಬ ಅಂಶವನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಯುವತಿಯೊಂದಿಗೆ ಅಸಭ್ಯ ವರ್ತನೆ:ಮದುವೆಯಾಗುವುದಾಗಿ ನಂಬಿಸಿದ ಆರೋಪಿಯೊಬ್ಬ ಲೈಂಗಿಕ ಸಂಪರ್ಕ ಹೊಂದಿ, ಮಗುವಿಗೆ ತಾಯಿಯಾದ ಪ್ರಕರಣದಲ್ಲಿ ನ್ಯಾಯ ಒದಗಿಸಿಕೊಡುವಂತೆ ದೂರು ನೀಡಲು ಬಂದಿದ್ದ ಹಾವೇರಿ ಮೂಲದ 29 ವರ್ಷದ ಯುವತಿಯೊಂದಿಗೂ ಅಸಭ್ಯ ವರ್ತನೆಯನ್ನು ಚಿದಾನಂದ ತೋರಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ತಿಳಿಸಲಾಗಿದೆ.

ಮೇಲ್ಕಂಡ ಎಲ್ಲ ಪ್ರಕರಣಗಳ ಕುರಿತು ಹಾವೇರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಿದಾನಂದ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಿ ಐಜಿಪಿ ಅವರಿಗೆ ವರದಿ ಸಲ್ಲಿಸಿದ್ದರು. ಶಿಸ್ತಿನ ಇಲಾಖೆಯಲ್ಲಿ ಇನ್‌ಸ್ಪೆಕ್ಟರ್‌ ಆಗಿ, ಠಾಣೆಗೆ ಆಗಮಿಸುವ ನೊಂದ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕರ್ತವ್ಯ ಮರೆತು, ಅಸಭ್ಯ ಮತ್ತು ಅಶ್ಲೀಲವಾಗಿ ವರ್ತಿಸಿ ಕರ್ತವ್ಯ ಲೋಪ ಎಸಗಿದ್ದೀರಿ. ಅಧಿಕಾರ ದುರುಪಯೋಗಪಡಿಸಿಕೊಂಡು ದುರ್ನಡತೆ ತೋರಿದ ಆರೋಪದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ಐಜಿಪಿ ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.