ADVERTISEMENT

ಹಾನಗಲ್‌ ವಿಧಾನಸಭಾ ಉಪಚುನಾವಣೆ: ಕಾಂಗ್ರೆಸ್ ಭಿನ್ನಮತ ಶಮನ – ಸಲೀಂ ಅಹಮದ್‌

ಅ.7ರಂದು ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಕೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2021, 14:22 IST
Last Updated 5 ಅಕ್ಟೋಬರ್ 2021, 14:22 IST
ಸಲೀಂ ಅಹಮದ್
ಸಲೀಂ ಅಹಮದ್   

ಹಾವೇರಿ: ಹಾನಗಲ್‌ ವಿಧಾನಸಭಾ ಉಪಚುನಾವಣೆಯ ಟಿಕೆಟ್‌ ಪಡೆಯಲು ಎರಡು ಬಣಗಳ ನಡುವೆ ಇದ್ದ ಭಿನ್ನಮತ ಶಮನವಾಗಿದೆ. ಯಾರೇ ಅಭ್ಯರ್ಥಿಯಾಗಿ ಘೋಷಣೆಯಾದರೂ ಒಮ್ಮತದಿಂದ ಕೆಲಸ ಮಾಡುವುದಾಗಿ ಶ್ರೀನಿವಾಸ ಮಾನೆ ಮತ್ತು ಮನೋಹರ ತಹಶೀಲ್ದಾರ್‌ ಅವರು ವರಿಷ್ಠರ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಾನಗಲ್‌ ಮತ್ತು ಸಿಂದಗ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸುವ ವಿಶ್ವಾಸವಿದೆ. ಅ.7ರಂದು ಬೆಳಿಗ್ಗೆ 11 ಗಂಟೆಗೆ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದು, ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಂದೀಪ್‌ ಸಿಂಗ್‌ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಚ್‌.ಕೆ.ಪಾಟೀಲ್‌, ಆರ್‌.ವಿ. ದೇಶಪಾಂಡೆ, ಕೆ.ಎಚ್‌.ಮುನಿಯಪ್ಪ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದ ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತದಿಂದ ಭ್ರಮನಿರಸನಗೊಂಡಿದ್ದಾರೆ. ಕೊರೊನಾ ನಿರ್ವಹಣೆಯಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕುರ್ಚಿಗಾಗಿ ಕಿತ್ತಾಟದ ಮಧ್ಯೆ ಅಭಿವೃದ್ಧಿ ಕೆಲಸಗಳು ಗೌಣವಾಗಿವೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ 7 ವರ್ಷಗಳಿಂದ ಸುಳ್ಳಿನ ಆಶ್ವಾಸನೆ ನೀಡಿ, ಮೋಸ ಮಾಡಿದೆ. ಸ್ವರ್ಗ ಸೃಷ್ಟಿಸುತ್ತೇವೆ ಎಂದವರು ನರಕ ಸೃಷ್ಟಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯದ ಜಿಎಸ್‌ಟಿ ಪಾಲು ₹21 ಸಾವಿರ ಕೋಟಿ ಬರಬೇಕಿದೆ.ರಾಜ್ಯಕ್ಕೆ ಅನುದಾನ ತರುವಲ್ಲಿ ಬಿಜೆಪಿಯ ಸಂಸದರು ವಿಫಲರಾಗಿದ್ದಾರೆ. ಭ್ರಷ್ಟಾಚಾರದ ಆಡಳಿತಕ್ಕೆ ಜನರು ಆಶೀರ್ವಾದ ಮಾಡಬೇಕಾ? ನಿರುದ್ಯೋಗ ಸೃಷ್ಟಿಸಿದ್ದಕ್ಕೆ ಮತ ಹಾಕಬೇಕಾ? ಎಲ್ಲರ ಅಕೌಂಟಿಗೆ ₹15 ಲಕ್ಷ ಹಾಕದೇ ಇದ್ದುದ್ದಕ್ಕೆ ಬೆಂಬಲಿಸಬೇಕಾ? ಇದಕ್ಕೆ ಬಿಜೆಪಿ ನಾಯಕರೇ ಉತ್ತರ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.