ADVERTISEMENT

ಜಿಲ್ಲೆಯ ರೈತರಿಂದ ‘ದೆಹಲಿ ಚಲೋ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 4:00 IST
Last Updated 6 ಫೆಬ್ರುವರಿ 2021, 4:00 IST
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಮಾಲತೇಶ ಪೂಜಾರ ಮುಂತಾದವರು ಪಾಲ್ಗೊಂಡಿದ್ದಾರೆ 
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ, ಮಾಲತೇಶ ಪೂಜಾರ ಮುಂತಾದವರು ಪಾಲ್ಗೊಂಡಿದ್ದಾರೆ    

ಹಾವೇರಿ: ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಜಿಲ್ಲೆಯಿಂದ 20 ರೈತರು ‘ದೆಹಲಿ ಚಲೋ’ ಕೈಗೊಂಡು, ಹೋರಾಟದ ಸ್ಥಳವನ್ನು ತಲುಪಿದ್ದಾರೆ.

ಫೆ.3ರಂದು ರಾತ್ರಿ 8.30ಕ್ಕೆ ಹುಬ್ಬಳ್ಳಿಯಿಂದ ಸಂಪರ್ಕ ಕ್ರಾಂತಿ ರೈಲಿನ ಮೂಲಕ ಹೊರಟು ನಾಗಪುರ ಮಾರ್ಗದ ಮೂಲಕ ನವದೆಹಲಿ ತಲುಪಿದ್ದಾರೆ. ಗಾಜಿಪುರ ಗಡಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದ್ದಾರೆ.

‘ರಾಜ್ಯದಿಂದು ಸುಮಾರು 200 ರೈತರು ದೆಹಲಿಗೆ ಬಂದಿದ್ದು, ಗಾಜಿಪುರ, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಈ ದೇಶದ ಇತಿಹಾಸದಲ್ಲಿ ಗುರುತರವಾದ ಹೋರಾಟ ಇದಾಗಿದೆ. ನರೇಂದ್ರ ಮೋದಿ ಅವರ ‘ಸರ್ವಾಧಿಕಾರಿ ನಡೆ’ ಮತ್ತು ಕೇಂದ್ರ ಸರ್ಕಾರದ ‘ಹಠಮಾರಿ ಧೋರಣೆ’ಯನ್ನು ನಾವು ಖಂಡಿಸುತ್ತೇವೆ. ಪ್ರಶ್ನೆ ಮಾಡಿದವರನ್ನು ಜೈಲಿಗಟ್ಟುವ ಹುನ್ನಾರ ನಡೆಸುತ್ತಿರುವುದನ್ನು ನೋಡಿದರೆ ಇಂದಿರಾಗಾಂಧಿ ಅವರು ಹೇರಿದ ‘ಎಮರ್ಜೆನ್ಸಿ’ ನೆನಪಾಗುತ್ತಿದೆ. ಕೃಷಿ ಕಾಯ್ದೆಗಳನ್ನು ಹಿಂಪಡೆಯುವವರೆಗೆ ಈ ಜನಾಂದೋಲನ ನಿಲ್ಲುವುದಿಲ್ಲ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದರು.

ADVERTISEMENT

‘ನಾವು ನಮ್ಮ ಸ್ವಂತ ಖರ್ಚಿನಲ್ಲಿ ದೆಹಲಿಗೆ ಬಂದಿದ್ದೇವೆ. ರಾತ್ರಿ ವೇಳೆ ಟಿಕ್ರಿ ಗಡಿಯ ರೈತರ ಟೆಂಟ್‌ಗಳಲ್ಲಿ ಉಳಿದುಕೊಂಡು, ರೈತರು ತಯಾರಿಸಿದ ಊಟವನ್ನು ಸೇವಿಸುತ್ತಿದ್ದೇವೆ. ಫೆ.6ರಂದು ಸಿಂಘು ಗಡಿಯಲ್ಲಿ ನಡೆಯುವ ರಸ್ತೆ ತಡೆ ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ’ ಎಂದು ರೈತ ಮುಖಂಡ ಮಾಲತೇಶ ಪೂಜಾರ ದೂರವಾಣಿ ಮೂಲಕ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ರೈತ ಮುಖಂಡರಾದ ಹಾಲೇಶ್‌ ಕೆರೋಡಿ, ಪ್ರಭು ರಾಗೇರ, ಭೀಮಪ್ಪ ಅಂಗಡಿ, ರಾಜು ಆರೇರ, ಕಾರ್ತಿಕ್‌, ಭಕ್ತರಹಳ್ಳಿ ಭೈರೇಗೌಡ ಮುಂತಾದವರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.