ADVERTISEMENT

ದೀಪಾವಳಿ: ಅಜ್ಞಾನ ಕಳೆದು ಜ್ಞಾನದ ಬೆಳಕು ಪಸರಿಸುವ ಹಬ್ಬ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 5:49 IST
Last Updated 31 ಅಕ್ಟೋಬರ್ 2024, 5:49 IST
<div class="paragraphs"><p>ಮಕ್ಕಳು ಹಣತೆಯಲ್ಲಿ ದೀಪ ಬೆಳಗಿಸಿದರು</p></div>

ಮಕ್ಕಳು ಹಣತೆಯಲ್ಲಿ ದೀಪ ಬೆಳಗಿಸಿದರು

   

ರಾಣೆಬೆನ್ನೂರು: ಬೆಳಕಿನ ಹಬ್ಬ ದೀಪಾವಳಿ, ಸಂತೋಷ ಮತ್ತು ಸಮೃದ್ಧಿಯ ಹಬ್ಬ. ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದಂದು ಈ ಹಬ್ಬ ಆಚರಿಸಲಾಗುತ್ತದೆ. ಪೌರಾಣಿಕ ಮತ್ತು ಪ್ರಾಚೀನ ಇತಿಹಾಸವನ್ನು ಹೊಂದಿರುವ ಹಬ್ಬವನ್ನು ಇಂದಿಗೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಪುರಾಣದ ಪ್ರಕಾರ, ಶ್ರೀರಾಮ 14 ವರ್ಷಗಳ ವನವಾಸ ಮುಗಿಸಿ ನಾಡಿಗೆ ವಾಪಸ್‌ ಬರುವಾಗ ಅಯೋಧ್ಯೆಯ ಜನರು ಇಡೀ ಊರಿನಲ್ಲಿ ದೀಪ ಹಚ್ಚಿದ್ದರು. ಶ್ರೀರಾಮನ ಆಗಮನವನ್ನು ಸಂಭ್ರಮಿಸಿದ ದಿನವೇ ದೀಪಾವಳಿ ಆಚರಣೆಯಾಯಿತು ಎಂಬ ಪ್ರತೀತಿ ಇದೆ. ಈ ಹಬ್ಬ, ಅಸುರರನ್ನು ಶಿಕ್ಷಿಸಿದ ದಿನವೂ ಹೌದು.

ADVERTISEMENT

ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ಪಸರಿಸುವ ಹಬ್ಬವೇ ಈ ದೀಪಾವಳಿ. ಬೆಳಕು ಎಂಬುದು ಜ್ಞಾನದ ಪ್ರತೀಕ. ಬೆಳಕು ಎಂದರೆ ಭರವಸೆ. ಬೆಳಕು ಎಂದರೆ ಬದುಕು. 

ಐತಿಹಾಸಿಕವಾಗಿ ಇದನ್ನು ನರಕ ಚತುರ್ದಶಿ ಎಂದು ಕರೆಯಲಾಗುತ್ತದೆ. ಏಕೆಂದರೆ, ಈ ದಿನ ಕ್ರೂರಿಯಾದ ರಾಜ ನರಕಾಸುರನನ್ನು ಕೃಷ್ಣನು ಸಂಹರಿಸಿದ ದಿನ. ಆ ಕಾರಣದಿಂದಾಗಿ, ಈ ದಿನವನ್ನು ಅನೇಕ ಶುಭಕರ ಕಾರಣಗಳಿಗಾಗಿ ಆಚರಿಸಲಾಗತ್ತದೆ.

ಪ್ರತಿ ಪಟ್ಟಣ, ನಗರ ಹಾಗೂ ಹಳ್ಳಿಗಳಲ್ಲಿ ಸಾಲು ಸಾಲು ದೀಪಗಳು ಬೆಳಗಿಸುವುದನ್ನು ಕಾಣಬಹುದು. ಆದರೆ, ಇದು ಕೇವಲ ಬಾಹ್ಯದ ದೀಪಗಳನ್ನು ಬೆಳಗುವುದಷ್ಟೇ ಅಲ್ಲ, ಆಂತರಿಕ ಬೆಳಕನ್ನೂ ಬೆಳಗಿಸಬೇಕಾಗಿದೆ.

ದೀಪಾವಳಿ ಹಬ್ಬದ ಹಲವು ವಾರಗಳ ಮೊದಲು ಜನರು ತಮ್ಮ ಮನೆ ಮತ್ತು ಕಚೇರಿಗಳನ್ನು ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ಏಕೆಂದರೆ, ದೀಪಾವಳಿಯ ದಿನದಂದು ಶುಚಿಯಾಗಿರುವ ಮನೆಗಳಲ್ಲಿ ಲಕ್ಷ್ಮಿ ದೇವಿ ಕುಳಿತು ಆಶೀರ್ವಾದ ನೀಡುತ್ತಾಳೆ. ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆದೆ.

ವ್ಯಾಪಾರಿಗಳು ಮತ್ತು ಅಂಗಡಿಯವರು ತಮ್ಮ ಅಂಗಡಿಗಳನ್ನು ಅಲಂಕರಿಸುತ್ತಾರೆ. ಜನರು ಹೊಸ ಬಟ್ಟೆ, ಪಾತ್ರೆ, ಸಿಹಿತಿಂಡಿ ಖರೀದಿಸುತ್ತಾರೆ. ಸಿಹಿ ತಿಂಡಿಗಳ ಮಾರಾಟ ಜೋರಾಗಿರುತ್ತದೆ. ಜನರು ತಮ್ಮ ಆತ್ಮೀಯ ಸ್ನೇಹಿತರೊಂದಿಗೆ ಸಿಹಿ ತಿಂಡಿಗಳನ್ನು ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರುತ್ತಾರೆ.

ಈ ವರ್ಷ, ದೀಪಾವಳಿಯನ್ನು ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ಆಚರಿಸಲಾಗುತ್ತಿದೆ.  ಅ. 30ರಂದು ನೀರು ತುಂಬುವ ಹಬ್ಬ, ಮಧ್ಯಾಹ್ನ 12.14ರಿಂದ ನರಕ ಚತುರ್ದಶಿ ಪ್ರಾರಂಭ, ಅ.31 ರಂದು ನರಕ ಚತುರ್ದಶಿ, ನ.1ರಂದು ಅಮವಾಸ್ಯೆ ಹಾಗೂ ನ.2ರಂದು ಬಲಿಪಾಡ್ಯ ಪೂಜೆ ನಡೆಯುತ್ತದೆ.

ವ್ಯಾಪಾರಸ್ಥರು, ಅಂಗಡಿಯಲ್ಲಿ ಹಾಗೂ ಕೆಲವರು ಮನೆಯಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಾರೆ. ಮನೆಮಂದಿಯೆಲ್ಲ ಎಣ್ಣೆ ಹಚ್ಚಿಕೊಂಡು ಅಭ್ಯಂಗ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುತ್ತಾರೆ. ಶ್ಯಾವಿಗೆ ಪಾಯಸ ಸವಿಯುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆ ಸಾರಿಸಿ, ಸುಣ್ಣ ಬಣ್ಣ ಹಚ್ಚುತ್ತಾರೆ. ದನದ ಕೊಟ್ಟಿಗೆ ಬಳಿದು ಸುಣ್ಣ ಕೆಮ್ಮಣ್ಣದಿಂದ ಚಿತ್ರ ಬಿಡಿಸುತ್ತಾರೆ.

ರೈತರು ಎತ್ತುಗಳಿಗೆ ಅಲಂಕಾರ ಮಾಡಿ ಕೋಡುಗಳಿಗೆ ಬಣ್ಣ ಹಚ್ಚಿ ಸಿಂಗಾರ ಮಾಡುತ್ತಾರೆ. ಬೆಳಿಗ್ಗೆ ಜಾನುವಾರುಗಳಿಗೆ ಕಬ್ಬಿಣ ಕಾಯಿಸಿ ಗುಲ್ಲು ಕೊಡುತ್ತಾರೆ. ದೀಪಾವಳಿಯ ನಾಲ್ಕನೇ ದಿನದಂದು ಗೋವರ್ಧನ ಪೂಜ ನೆರವೇರಿಸಲಾಗುತ್ತದೆ. ಕರ್ನಾಟಕದಲ್ಲಿ ನೀರು ತುಂಬುವ ಹಬ್ಬ, ನರಕ ಚತುರ್ದಶಿ, ಬಲಿ ಪಾಡ್ಯಮಿ, ಲಕ್ಷ್ಮೀಪೂಜೆ, ಗೂಪೂಜೆ ಹೀಗೆ ದೀಪಾವಳಿ ಹಬ್ಬವನ್ನು ಸಂಭ್ರಮದೊಂದಿಗೆ ಸಂಪ್ರದಾಯ ಬದ್ಧವಾಗಿ ಆಚರಿಸಲಾಗುತ್ತದೆ.

ದೀಪಾವಳಿ ಹಬ್ಬದ ಇನ್ನೊಂದು ವಿಶೇಷ ಎಂದರೆ, ಪಟಾಕಿ. ದೀಪಾವಳಿ ದಿನಗಳು ಹತ್ತಿರ ಬರುತ್ತಿದ್ದಂತೆ ಪಟಾಕಿಗೆ ಬೇಡಿಕೆ ಬರುತ್ತದೆ. ಆದರೆ, ಈ ವರ್ಷ ಹಸಿರು ಪಟಾಕಿ ಮಾತ್ರ ಬಳಸಲು ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ, ರಾತ್ರಿ 8 ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶಶವಿದೆ.

ದೀಪಾವಳಿ ಸಮಯದಲ್ಲಿ ಗೋಪೂಜೆಗೂ ವಿಶೇಷ ಪ್ರಾಧಾನ್ಯತೆ ಇದೆ. ಈ ದಿನ ಗೋವುಗಳಿಗೆ ಸ್ನಾನ ಮಾಡಿಸಿ, ಹೂವು, ಕುಂಕುಮ ಇತ್ಯಾದಿಗಳಿಂದ ಅಲಂಕಾರ ಮಾಡಿ ಪೂಜೆ ಮಾಡುವುದು ಪದ್ಧತಿ. ಹಿಂದೂ ಧರ್ಮದಲ್ಲಿ ಗೋಪೂಜೆಗೆ ವಿಶೇಷ ಮಹತ್ವವಿದೆ. ಗೋವಿನಲ್ಲಿ 33 ಕೋಟಿ ದೇವರು ನೆಲೆಸಿರುತ್ತಾರೆ ಎಂಬ ನಂಬಿಕೆ ಇದೆ.   

ನೀರು ತುಂಬುವ ಹಬ್ಬ

ದೀಪಾವಳಿಯ ಮೊದಲ ದಿನದ ಆಚರಣೆ, ನೀರು ತುಂಬುವ ಹಬ್ಬ. ಧಾರ್ಮಿಕ ಕಥೆಗಳ ಪ್ರಕಾರ ಧನತ್ರಯೋದಶಿಯ ದಿನದಂದು ಸಮುದ್ರ ಮಂಥನ ಮಾಡುವಾಗ ಲಕ್ಷ್ಮಿದೇವಿ ಉದ್ಭವಿಸುತ್ತಾಳೆ. ಅವಳೊಂದಿಗೆ ಅವಳ ಸಹೋದರರಾದ ಯಕ್ಷ, ಚಂದ್ರ, ಕಾಮಧೇನು, ಐರಾವತ, ಕಲ್ಪವೃಕ್ಷ ಇವರೆಲ್ಲರೂ ಜೊತೆಯಾಗುತ್ತಾರೆ. ಈ ಹಿನ್ನೆಲೆಯಲ್ಲಿ ಧನ ತ್ರಯೋದಶಿ ಆಚರಣೆ ಮಾಡಲಾಗುತ್ತದೆ.

ನೀರು ತುಂಬುವ ಹಬ್ಬದ ದಿನ ಸ್ನಾನದ ಹಂಡೆಯನ್ನು ಚೆನ್ನಾಗಿ ತೊಳೆದು ಅದಕ್ಕೆ ಸುಣ್ಣ ಬಳಿದು, ರಂಗೋಲಿ ಹಾಕಿ, ಹಂಡೆಗೆ ಹೂವಿನಿಂದ ಅಲಂಕಾರ ಮಾಡಿ ನೀರು ತುಂಬಲಾಗುತ್ತದೆ. ಕೆಲವರು ನೀರಿನ ಹಂಡೆಗೆ ಆರತಿ ಬೆಳಗಿ ಪೂಜೆ ಮಾಡುತ್ತಾರೆ. ಮರುದಿನ ಬೆಳಿಗ್ಗೆ ಆ ನೀರಿನಲ್ಲಿ ಸ್ನಾನ ಮಾಡಿ ಹಬ್ಬಕ್ಕೆ ತಯಾರಾಗುವುದು ವಾಡಿಕೆ.

ನರಕ ಚತುರ್ದಶಿ

ದೀಪಾವಳಿಯಲ್ಲಿ ನರಕ ಚತುದರ್ಶಿ ಪ್ರಮುಖ ದಿನ. ನರಕಾಸುರನನ್ನು ಹತ್ಯೆ ಮಾಡಿದ ದಿನ ಎಂದು ಹೇಳಲಾಗುತ್ತದೆ. ಈ ದಿನದಂದು ಶ್ರೀಕೃಷ್ಣ, ಸತ್ಯಭಾಮೆ ಹಾಗೂ ಕಾಳಿ ಈ ಮೂವರು ಸೇರಿ ಅಸುರ ರಾಕ್ಷಸನಾದ ನರಕಾಸುರನನ್ನು ಕೊಂದ ದಿನ. ಇದನ್ನು ‘ಕಾಲಿ ಚೌದಾಸ್‌’ ಎಂದೂ ಕರೆಯುತ್ತಾರೆ. ನರಕ ಚತುರ್ದಶಿಯ ದಿನ ಅಭ್ಯಂಗ ಸ್ನಾನ ಮಾಡುವುದು ಬಹಳ ವಿಶೇಷ. ಅಭ್ಯಂಗ ಸ್ನಾನವನ್ನು ಚಂದ್ರನ ಉಪಸ್ಥಿತಿಯಲ್ಲಿ ಚತುರ್ದಶಿ ತಿಥಿ ಚಾಲ್ತಿಯಲ್ಲಿರುವಾಗ ಮಾಡಬೇಕು ಎಂದು ಹಿರಿಯರು ಹೇಳುತ್ತಾರೆ. ಸೂರ್ಯೋದಯಕ್ಕೂ ಮುಂಚೆ ಹಿಂದಿನ ದಿನ ಹಂಡೆಯಲ್ಲಿ ತುಂಬಿಸಿಟ್ಟ ನೀರಿನಿಂದ ಸ್ನಾನ ಮಾಡುವುದು ಪದ್ಧತಿ. ಈ ದಿನ ಎಳ್ಳೆಣ್ಣೆ ಮೈಗೆ ಹಚ್ಚಿಕೊಂಡು ಸ್ನಾನ ಮಾಡುವುದು ವಾಡಿಕೆ. ಇದರಿಂದ ಬಡತನ, ಅನಿಷ್ಟ, ದುರಾದೃಷ್ಟ ಎಲ್ಲವೂ ದೂರಾಗುತ್ತದೆ ಎಂಬುದು ನಂಬಿಕೆ. ಬಹುತೇಕ ಈ ದಿನದಿಂದ ದೀಪಾವಳಿ ಹಬ್ಬ ಆರಂಭವಾಗಿ, ಬಲಿಪಾಡ್ಯಮಿವರೆಗೆ ಮುಂದುವರಿಯುತ್ತದೆ.

ಬಲಿ ಪಾಡ್ಯಮಿ

ದೀಪಾವಳಿಯಲ್ಲಿ ಬಲಿ ಪಾಡ್ಯಮಿ ದಿನಕ್ಕೂ ಮಹತ್ವವಿದೆ. ಈ ದಿನ ಬಲೀಂದ್ರ ಚಕ್ರವರ್ತಿಯನ್ನು ಪೂಜಿಸಲಾಗುತ್ತದೆ. ಹಿಂದೆಲ್ಲಾ ಮಣ್ಣಿನ ಬಲೀಂದ್ರ ಮೂರ್ತಿಯನ್ನು ಮಾಡಿ ಅದಕ್ಕೆ ಪೂಜೆ ಸಲ್ಲಿಸುತ್ತಿದ್ದರು. ಕೆಲವರು ಬಲೀಂದ್ರ ಮೂರ್ತಿಯನ್ನು ಮನೆಯಲ್ಲೇ ಇರಿಸಿಕೊಂಡಿರುತ್ತಾರೆ. ಬಲೀಂದ್ರ ಚಕ್ರವರ್ತಿಯ ಅಹಂಕಾರವನ್ನು ತಗ್ಗಿಸಲು ಅವನ ತಲೆಯ ಮೇಲೆ ಪಾದವನ್ನು ಇಡುವ ಮೂಲಕ ವಾಮನ (ವಿಷ್ಣು) ಅವನನ್ನು ಪಾಳಾತಕ್ಕೆ ತಳ್ಳುತ್ತಾನೆ, ನಂತರ ವಿಷ್ಣು ಬಲೀಂದ್ರ ಚಕ್ರವರ್ತಿಗೆ ನೀಡಿದ ವರದಂತೆ ಮೂರು ದಿನಗಳ ಕಾಲ ಭೂಮಿಗೆ ಬರುವ ಅವಕಾಶವಿರುತ್ತದೆ.

ದೀಪಾವಳಿ ಅಮಾವಾಸ್ಯೆ

ದೀಪಾವಳಿ ಅಮಾವಾಸ್ಯೆಯಂದು ಅಂಗಡಿ ಪೂಜೆಗಳು ನಡೆಯುತ್ತವೆ. ಆ ದಿನ ಲಕ್ಷ್ಮಿದೇವಿಯನ್ನು ಪೂಜಿಸುವ ಮೂಲಕ ವ್ಯಾಪಾರ, ವಹಿವಾಟುಗಳು ಚೆನ್ನಾಗಿ ನಡೆಯಲಿ ಎಂದು ಪ್ರಾರ್ಥಿಸಲಾಗುತ್ತದೆ. ಈ ದಿನ ವ್ಯಾಪಾರಿಗಳು ತಮ್ಮ ಲೆಕ್ಕ ಪುಸ್ತಕಕ್ಕೆ ಪೂಜೆ ಸಲ್ಲಿಸಿ ಹೊಸ ಲೆಕ್ಕವನ್ನು ಆರಂಭಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.