ADVERTISEMENT

ಡಿಕೆಶಿಗೆ ಗೋಣಿಚೀಲದಲ್ಲಿ ನೋಟು ತಂದು ಹಂಚುವ ಅನುಭವವಿದೆ: ಸಿಎಂ ಬೊಮ್ಮಾಯಿ

ಕಾಂಗ್ರೆಸ್‌ ಬಣ್ಣದ ಮಾತಿಗೆ ಜನರು ಉತ್ತರ ಕೊಡಲಿದ್ದಾರೆ: ಸಿಎಂ ಬೊಮ್ಮಾಯಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 14:38 IST
Last Updated 21 ಅಕ್ಟೋಬರ್ 2021, 14:38 IST
ಹಾನಗಲ್‌ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಚುನಾವಣಾ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಇದ್ದಾರೆ 
ಹಾನಗಲ್‌ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಚುನಾವಣಾ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್‌ ಸದಸ್ಯ ಆರ್‌.ಶಂಕರ್‌ ಇದ್ದಾರೆ    

ಹಾವೇರಿ: ‘ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆ ಯಾವ ರೀತಿ ನಡೆಯಿತು ಎಂಬುದನ್ನು ನೋಡಿದ್ದೇವೆ.ಗೋಣಿ ಚೀಲದಲ್ಲಿ ನೋಟು ತಂದು ಹಂಚುವ ಅನುಭವ ಡಿ.ಕೆ.ಶಿವಕುಮಾರ್‌ ಅವರಿಗಿದೆ. ಆದರೆ, ಬಿಜೆಪಿಯವರು ಹಾನಗಲ್‌ ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆ ಎಂದು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಹಾನಗಲ್‌ ಕ್ಷೇತ್ರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಕಾಂಗ್ರೆಸ್ ಬಣ್ಣದ ಮಾತಿಗೆ ಜನ ಉತ್ತರ ಕೊಡುತ್ತಾರೆ.ಕಾಂಗ್ರೆಸ್‌ನವರು ವಾದದಲ್ಲಿ ಗೆಲ್ಲೋಕೆ ನೋಡುತ್ತಿದ್ದಾರೆ.ನಾವು ಜನರ ಪ್ರೀತಿ ಗೆಲ್ಲೋಕೆ ನೋಡ್ತಾ ಇದ್ದೇವೆ.ಹಾನಗಲ್ ಹಾಗೂ ಸಿಂದಗಿಯಲ್ಲಿ ಜನರ ಪ್ರೀತಿ, ವಿಶ್ವಾಸ ಹಾಗೂ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುತ್ತಿದ್ದೇವೆ. ಅದೇ ನಮಗೆ ಶಕ್ತಿ ಎಂದು ಹೇಳಿದರು.

ಉತ್ತರ ಕರ್ನಾಟಕದ ಬಗ್ಗೆ ಕಾಂಗ್ರೆಸ್‌ನವರು ಅಧಿಕಾರದಲ್ಲಿದ್ದಾಗ ತೋರದ ಪ್ರೀತಿಯನ್ನು ಚುನಾವಣೆ ಬಂದಾಗ ತೋರುತ್ತಿದ್ದಾರೆ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜ್ ದೊರಕಿತ್ತು. ನಂತರ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಆಸಕ್ತಿ ತೋರಲಿಲ್ಲ. ಹೀಗಾಗಿ ಬೇರೆ ಜಿಲ್ಲೆಗೆ ಹೋಯಿತು ಎಂದು ಕುಟುಕಿದರು.

ADVERTISEMENT

ಬಿಜೆಪಿಯನ್ನು ಸೋಲಿಸುವುದು ಕಾಂಗ್ರೆಸ್‌ನವರ ಕೆಲಸ. ಅದು ಅವರ ಕೈಯಲ್ಲಿ ಇಲ್ಲ. ಜನರು ನಾಯಕತ್ವವನ್ನು ತೀರ್ಮಾನ ಮಾಡುತ್ತಾರೆ. ಜನರ ನಾಡಿಮಿಡಿತ ನಮಗೆ ಗೊತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಹಸ್ಯ ಸಭೆ ನಡೆಸಿದ ಸಿಎಂ!

ಹಾನಗಲ್‌ ತಾಲ್ಲೂಕಿನ ಗಡಿಯಂಕನಹಳ್ಳಿಯ ವಂಶಿ ಫಾರ್ಮ್‌ನಲ್ಲಿ ವಿವಿಧ ಸಮುದಾಯಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರವೂ ರಹಸ್ಯ ಸಭೆ ನಡೆಸಿ, ಚುನಾವಣಾ ತಂತ್ರಗಳನ್ನು ರೂಪಿಸಿದರು.

ಬೆಂಗಳೂರಿನಿಂದ ಹಾನಗಲ್‌ ಕ್ಷೇತ್ರಕ್ಕೆ ಬುಧವಾರ ಸಂಜೆ ಬಂದ ಅವರು ಪಕ್ಷದ ನಾಯಕರು, ಸ್ಥಳೀಯ ಮುಖಂಡರೊಂದಿಗೆ ವಂಶಿ ಫಾರ್ಮ್‌ನಲ್ಲಿ ರಹಸ್ಯ ಸಭೆ ನಡೆಸಿದರು. ಗುರುವಾರ ಬೆಳಿಗ್ಗೆ ಕ್ಷತ್ರೀಯ ಮರಾಠ, ಗಂಗಾಮತಸ್ಥರು, ವಾಲ್ಮೀಕಿ ಸಮುದಾಯಗಳ ಮುಖಂಡರೊಂದಿಗೆ ಸರಣಿ ಸಭೆ ನಡೆಸಿದರು.

‘ಸಮುದಾಯಗಳ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಮುಖ್ಯಮಂತ್ರಿ ಆಲಿಸಿದರು. ಚುನಾವಣೆ ನೀತಿಸಂಹಿತೆ ಇರುವುದರಿಂದ ಯಾವುದೇ ಭರವಸೆ ನೀಡುವಂತಿಲ್ಲ. ಚುನಾವಣೆ ನಂತರ ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ. ಬಿಜೆಪಿಯನ್ನು ಬೆಂಬಲಿಸಿ ಎಂದು ಸಿಎಂ ಮನವಿ ಮಾಡಿದರು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.