ADVERTISEMENT

ಹಾವೇರಿ | ವೈದ್ಯರ ಕೊರತೆ: ಜನರ ಪರದಾಟ

ತಡಸ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಲ್ಲ ಕಾಯಂ ವೈದ್ಯರು; ಸಕಾಲಕ್ಕೆ ಸಿಗದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 4:05 IST
Last Updated 3 ಆಗಸ್ಟ್ 2025, 4:05 IST
ತಡಸ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ
ತಡಸ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ   

ತಡಸ: ಶಿಗ್ಗಾವಿ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು, 27 ಮಂದಿ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿರುವ ತಡಸ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.

ಸುತ್ತಲಿನ ಮುತ್ತಳ್ಳಿ, ನೀರಲಗಿ, ಕಡಳ್ಳಿ, ಕುನ್ನೂರು, ಹೊನ್ನಾಪುರ, ಮಮದಾಪುರ, ಅಡವಿಸೋಮಾಪುರ ಹಳವಟ್ಟ, ತರ್ಲೆಘಟ್ಟ, ಕಮಲಾನಗರ ಮಾತ್ರವಲ್ಲದೆ, ಕಲಘಟಗಿ ಹಾಗೂ ಕುಂದುಗೋಳ ತಾಲ್ಲೂಕಿನ ಹಲವು ಗ್ರಾಮಗಳ ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬರುತ್ತಾರೆ.

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರೆಕಾಲಿಕ ವೈದ್ಯರಷ್ಟೇ ಇದ್ದಾರೆ. ಕಾಯಂ ವೈದ್ಯವಿಲ್ಲದೆ ಸಮರ್ಪಕವಾಗಿ ಚಿಕಿತ್ಸೆ ಸಿಗುತ್ತಿಲ್ಲ. ವರ್ಷದವರೆಗೆ ಅರೆಕಾಲಿಕ ವೈದ್ಯರು ಕೆಲಸ ಮಾಡಿದ ಬಳಿಕ, ಮತ್ತೆ ಹುದ್ದೆ ಖಾಲಿಯಾಗುತ್ತದೆ. ಶುಶ್ರೂಷಕರ ಸಂಖ್ಯೆಯೂ ನಿಗದಿ ಪ್ರಮಾಣದಲ್ಲಿ ಇಲ್ಲ.

ADVERTISEMENT

ವಿವಿಧ ಗ್ರಾಮಗಳ ಬಾಣಂತಿಯರು ಹಾಗೂ ಹಸುಗೂಸುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ, ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದೆ. ಈ ಮೊದಲು ಊರಿಗೆ ಬಂದು ಚಿಕ್ಕ ಮಕ್ಕಳಿಗೆ ಲಸಿಕೆ ಹಾಗೂ ಚುಚ್ಚುಮದ್ದು ನೀಡುತ್ತಿದ್ದರು. ಈಗ ನಾವೇ ಆಸ್ಪತ್ರೆಗೆ ಹೋಗಿ, ಚಿಕಿತ್ಸೆಗಾಗಿ ತಾಸುಗಟ್ಟಲೆ ಕಾಯಬೇಕಿದೆ’ ಎಂದು ಕುನ್ನೂರು ಗ್ರಾಮದ ಪಾರಮ್ಮ ತಿಳಿಸಿದರು.

ಒಂದೇ ಶೌಚಾಲಯ: ಆರೋಗ್ಯ ಕೇಂದ್ರಕ್ಕೆ ನಿತ್ಯ ಹಲವಾರು ರೋಗಿಗಳು ಭೇಟಿ ನೀಡಿದರೂ, ಸೂಕ್ತ ಶೌಚಾಲಯದ ವ್ಯವಸ್ಥೆ ಇಲ್ಲವಾಗಿದೆ. ಒಂದೇ ಶೌಚಾಲಯವಿದ್ದು, ಪುರುಷರಿಗೆ ಬಯಲು ಬಹಿರ್ದೆಸೆಯೇ ಗತಿಯಾಗಿದೆ.

‘ಆರೋಗ್ಯ ಇಲಾಖೆಯಲ್ಲಿ ನಡೆಯುವ ವರ್ಗಾವಣೆ ಪ್ರಕ್ರಿಯೆಯಿಂದ ಹಲವು ಹುದ್ದೆಗಳು ಖಾಲಿ ಇವೆ. ಲಭ್ಯವಿರುವ ಸಿಬ್ಬಂದಿ ಬಳಸಿಕೊಂಡು ಸೇವೆ ನೀಡುತ್ತಿದ್ದೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಸತೀಶ ಎ.ಆರ್. ಹೇಳಿದರು.

ಅಂಬುಲೆನ್ಸ್ ಸೇವೆ ಸ್ಥಗಿತ:

‘ರಾತ್ರಿ ವೇಳೆ ತುರ್ತು ಚಿಕಿತ್ಸೆ ಅಗತ್ಯವಿದ್ದರೆ ಶಿಗ್ಗಾವಿ ತಾಲ್ಲೂಕು ಆಸ್ಪತ್ರೆ ಅಥವಾ ಮುಂಡಗೋಡದ ಆಸ್ಪತ್ರೆ ಹುಬ್ಬಳ್ಳಿಯ ಕೆಎಂಸಿ–ಆರ್‌ಐಗೆ ಕೆಎಂಸಿಗೆ ಹೋಗಬೇಕಿದೆ. ಅಂಬುಲೆನ್ಸ್ ಸೇವೆಯೂ ಸ್ಥಗಿತಗೊಂಡಿದೆ’ ಎಂದು ಗ್ರಾಮದ ಖಾನ್ ಸಾಬ್ ಅಕ್ಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.