ADVERTISEMENT

ಯುದ್ಧದ ಭೀಕರತೆ ಸಾರಿದ ರಂಗರೂಪಕ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 16:04 IST
Last Updated 12 ಆಗಸ್ಟ್ 2023, 16:04 IST
ಹಾವೇರಿ ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಕಾವ್ಯರಂಗ ಪ್ರಸ್ತುತ ಪಡಿಸಿದ ರಂಗರೂಪಕ ಪ್ರೇಕ್ಷಕರ ಗಮನ ಸೆಳೆಯಿತು
ಹಾವೇರಿ ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಕಾವ್ಯರಂಗ ಪ್ರಸ್ತುತ ಪಡಿಸಿದ ರಂಗರೂಪಕ ಪ್ರೇಕ್ಷಕರ ಗಮನ ಸೆಳೆಯಿತು   

ಹಾವೇರಿ: ನಗರದ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಮಾನವ ಕುಲಕ್ಕೆ ಯುದ್ಧ ಮಾರಕ ಎಂಬುದನ್ನು ಬೀಭತ್ಸ ಸನ್ನಿವೇಶಗಳ ಮೂಲಕ ಕಾವ್ಯರಂಗ ಪ್ರಸ್ತುತ ಪಡಿಸಿದ ರೂಪಕ ಗಮನ ಸೆಳೆಯಿತು.

ಯುದ್ಧದ ಭಯಾನಕತೆಯನ್ನು ಅನಾವರಣಗೊಳಿಸುವ ಕುವೆಂಪು, ನಿರಂಜನ, ಸವಿತಾ ನಾಗಭೂಷಣ, ಸರಜೂ ಕಾಟ್ಕರ್ ಸೇರಿದಂತೆ ಹಲವು ಕವಿಗಳ ಕವನ ಸರಣಿ ಆಧಾರಿತ ರೂಪಕ ವರ್ತಮಾನದ ತಲ್ಲಣಗಳಿಂದ ಶುರುವಾಯಿತು. ಯುದ್ಧಭೂಮಿಯಲ್ಲಿನ ಆರ್ತನಾದ, ಅದು ಸೃಜಿಸುವ ಆತಂಕಗಳು ಮತ್ತು ತಂದೊಡ್ಡುವ ವಿನಾಶವನ್ನು ವಿವರಿಸಿತು.

ಯುದ್ಧಭೂಮಿಯಲ್ಲಿ ಯಾರೇ ಗೆದ್ದರೂ ಸೋಲುವುದು ಮಾತ್ರ ಮಾನವೀಯತೆ. ಇದೇ ಕಾರಣಕ್ಕೆ ತಮ್ಮವರನ್ನು ಕಳೆದುಕೊಂಡ ಸಂತ್ರಸ್ತರು ಪಾಂಡವರಿಗೂ ಮತ್ತು ಕೌರವರಿಗೂ ಧಿಕ್ಕಾರ ಕೂಗುವ ಪ್ರಸಂಗ ಪ್ರೇಕ್ಷಕರನ್ನು ಭಾವುಕರನ್ನಾಗಿಸಿತು.

ADVERTISEMENT

ಧರ್ಮ ಯುದ್ಧವೂ ಇತ್ತೀಚಿನ ದಿನಗಳಲ್ಲಿ ಮನುಷ್ಯನ ಸಂಬಂಧಗಳಿಗೆ ಕಂದಕವನ್ನೇ ಸೃಷ್ಟಿಸಿದೆ. ಸಾಮರಸ್ಯದ ಬೀಜಗಳನ್ನು ಬಿತ್ತಿರುವ ಧರ್ಮ ಗ್ರಂಥಗಳನ್ನು ಅರಿತು ಸಾಗಬೇಕಿದೆ. ಯುದ್ಧದ ನೆಪದಲ್ಲಿ ನಡೆಯುವ ಅತ್ಯಾಚಾರ, ಕ್ರೌರ್ಯ ಮತ್ತು ಕರಾಳತೆ ವಿರುದ್ಧ ಜನತೆ ಎದ್ದು ನಿಲ್ಲಬೇಕು ಎಂಬ ಸಂದೇಶದೊಂದಿಗೆ ರೂಪಕ ಮುಕ್ತಾಯವಾಯಿತು.

ಶ್ರೀಪಾದ್ ಭಟ್ ಪರಿಕಲ್ಪನೆ, ವಿನ್ಯಾಸ ಮತ್ತು ನಿರ್ದೇಶನ ಮತ್ತು ಶ್ವೇತಾರಾಣಿ ಹಾಸನ ಸಹನಿರ್ದೇಶನದಲ್ಲಿ ಅಕ್ಷತಾ ಕೊಪ್ಪ, ಅರ್ಚನಾ ಸುರೇಶ, ಲಾವಣ್ಯ, ವೀಣಾ ಜಯಶಂಕರ, ನಾಗೇಂದ್ರ ಶ್ರೀನಿವಾಸ, ಶ್ರೀಧರ ಗೊಡಚಿ, ತಿಲಕ್ ಚಕ್ರವರ್ತಿ, ವಿಜಯ, ಸಿದ್ದಪ್ಪ, ಅಭಿಷೇಕ ಆಚಾರ್ಯ, ಪುನೀತಕುಮಾರ ಸಿ, ಸುಮಂತ್ ಯೋಗೀಶ ತಮ್ಮ ಪಾತ್ರಗಳಿಗೆ ಜೀವ ತುಂಬಿದರು.

ಗಣೇಶ ಭೀಮನಕೋಣೆ ನಿರ್ವಹಣೆ, ಅನೂಪ್ ಶೆಟ್ಟಿ, ಮುನ್ನಾ ಮೈಸೂರ ಮತ್ತು ಸಮಂತಾ ಮೈಸೂರ, ಯೋಗೀಶ ಅವರ ಸಂಗೀತ ರಂಗ ವೇದಿಕೆಯನ್ನು ಆಪ್ತವಾಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.