ADVERTISEMENT

ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡೆ ಸಹಕಾರಿ: ಜಿಲ್ಲಾಧಿಕಾರಿ ರಘುನಂದನ ಮೂರ್ತಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 15:22 IST
Last Updated 10 ನವೆಂಬರ್ 2022, 15:22 IST
ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿ, ಕ್ರೀಡಾಜ್ಯೋತಿ ಸ್ವೀಕರಿಸಿದರು. ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ, ಎಸ್ಪಿ ಹನುಮಂತರಾಯ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೇಗಡ್ಡಿ ಇದ್ದಾರೆ 
ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಪೊಲೀಸ್‌ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಚಾಲನೆ ನೀಡಿ, ಕ್ರೀಡಾಜ್ಯೋತಿ ಸ್ವೀಕರಿಸಿದರು. ಹೆಚ್ಚುವರಿ ಎಸ್ಪಿ ವಿಜಯಕುಮಾರ ಸಂತೋಷ, ಎಸ್ಪಿ ಹನುಮಂತರಾಯ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೇಗಡ್ಡಿ ಇದ್ದಾರೆ    

ಹಾವೇರಿ: ‘ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸ ಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೂರು ದಿನಗಳ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ. ಮೂರು ದಿನಗಳ ಈ ಕ್ರೀಡಾಕೂಟದಲ್ಲಿ ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದ ಭಾಗವಹಿಸಿ ಎಂದು ಶುಭ ಕೋರಿದರು.

ADVERTISEMENT

ಆಕರ್ಷಕ ಪಥಸಂಚಲನ:

ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾವೇರಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ರಾಣೆಬೆನ್ನೂರು, ಶಿಗ್ಗಾವಿ ಉಪವಿಭಾಗಗಳ ತಂಡ ಹಾಗೂ ಮಹಿಳಾ ಪೊಲೀಸ್ ಕ್ರೀಡಾ ತಂಡಗಳು ಕೇಸರಿ, ಕೆಂಪು, ಹಳದಿ, ಹಸಿರು ಹಾಗೂ ಆಕಾಶ ನೀಲಿ ಬಣ್ಣದ ಟೀ ಶರ್ಟ್ ಧರಿಸಿ ಪಥಸಂಚಲನ ನಡೆಸಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ವೆಂಕಟರಾಜು ನಾಯಕ್, ನಾಗರಿಕ ಪೊಲೀಸ್ ಉಪ ವಿಭಾಗದ ಪ್ರವೀಣಕುಮಾರ, ರಾಣೇಬೆನ್ನೂರ ಉಪವಿಭಾಗದಿಂದ ಪಿ.ಎಸ್.ಐ.ಬಾಳಪ್ಪ , ಮಹಿಳಾ ಪೊಲೀಸ್‍ನ ಸುಜಾತಾ ಪಾಟೀಲ, ಶಿಗ್ಗಾವಿ ಉಪ ವಿಭಾಗದ ರಘು ನಾಯಕ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನ ಅತ್ಯಂತ ಆಕರ್ಷಕವಾಗಿತ್ತು. ಶಂಕರಗೌಡ ಪಾಟೀಲ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು.

ಕ್ರೀಡಾಜ್ಯೋತಿ:

ಕ್ರೀಡಾಕೂಟದ ಅಂಗವಾಗಿ ಕ್ರೀಡಾ ಜ್ಯೋತಿಯನ್ನು ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅವರು ಬೆಳಗಿಸಿದರು. ಕಳೆದ ಆರು ವರ್ಷಗಳಿಂದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪುರಸ್ಕೃತ ಪೊಲೀಸ್ ಕ್ರೀಡಾಪಟು ಸಂತೋಷ ನಾಯಕ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು.

ಉಪವಿಭಾಗಾಧಿಕಾರಿ ಶಿವಾನಂದ ಉಳ್ಳೆಗಡ್ಡಿ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಸ್ವಾಗತಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಎಂ.ಸಂತೋಷ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.