ADVERTISEMENT

ಹಾನಗಲ್ | ಪರವಾನಗಿ ಇಲ್ಲದೇ ವಾಹನ ಓಡಾಟ!

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2023, 16:00 IST
Last Updated 12 ಆಗಸ್ಟ್ 2023, 16:00 IST
ಹಾನಗಲ್ ತಾಲ್ಲೂಕಿನ ಆಡೂರ ಗ್ರಾಮ ಪಂಚಾಯ್ತಿಯ ಕಸ ವಿಲೇವಾರಿ ವಾಹನಕ್ಕೆ ನೊಂದಣಿ ಆಗಿಲ್ಲದ ಕಾರಣಕ್ಕಾಗಿ ಆಡೂರ ಪೊಲೀಸ್‌ ಠಾಣೆಯಲ್ಲಿ ವಾಹನವನ್ನು ಜಪ್ತಿ ಮಾಡಿ ನಿಲ್ಲಿಸಲಾಗಿದೆ.
ಹಾನಗಲ್ ತಾಲ್ಲೂಕಿನ ಆಡೂರ ಗ್ರಾಮ ಪಂಚಾಯ್ತಿಯ ಕಸ ವಿಲೇವಾರಿ ವಾಹನಕ್ಕೆ ನೊಂದಣಿ ಆಗಿಲ್ಲದ ಕಾರಣಕ್ಕಾಗಿ ಆಡೂರ ಪೊಲೀಸ್‌ ಠಾಣೆಯಲ್ಲಿ ವಾಹನವನ್ನು ಜಪ್ತಿ ಮಾಡಿ ನಿಲ್ಲಿಸಲಾಗಿದೆ.   

ಹಾನಗಲ್: ನೋಂದಣಿ ಇಲ್ಲದೇ ಓಡಾಡುತ್ತಿದ್ದ ತಾಲ್ಲೂಕಿನ ಆಡೂರ ಗ್ರಾಮ ಪಂಚಾಯ್ತಿಯ ಕಸ ವಿಲೇವಾರಿ ವಾಹನವನ್ನು ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಓ) ಅಧಿಕಾರಿಗಳು ಶುಕ್ರವಾರ
ಜಪ್ತಿ ಮಾಡಿದ್ದಾರೆ.

ಆಡೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಕಸ ವಿಲೇವಾರಿಗೆ ಇರುವುದು ಇದು ಒಂದೇ ವಾಹನ. ಈ ವಾಹನವನ್ನು ಗ್ರಾಮ ಪಂಚಾಯ್ತಿ ಖರೀದಿಸಿ ಸುಮಾರು ಒಂದೂವರೆ ವರ್ಷವಾಗಿದೆ. ಆದರೆ ಈ ತನಕ ಇದರ ನೋಂದಣಿ ಆಗಿಲ್ಲ. ನಂಬರ್‌ ಪ್ಲೇಟ್‌ ಇಲ್ಲದೇ ಓಡಾಡುತ್ತಿದ್ದ ವಾಹನವನ್ನು ಆರ್‌ಟಿಓ ಅಧಿಕಾರಿಗಳು ತಡೆದು ದಾಖಲೆ ಪರಿಶೀಲಿಸಿ, ಆಡೂರ ಪೊಲೀಸ್‌ ಠಾಣೆಯಲ್ಲಿ ವಾಹನ ಜಪ್ತಿ ಮಾಡಿ ನಿಲ್ಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಆಡೂರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಎಫ್‌.ಚಿಕ್ಕೇರಿ, ‘ಕಸ ವಿಲೇವಾರಿಗಾಗಿ ಹೊಸ ವಾಹನ ಖರೀದಿಸಲಾಗಿದೆ. ನಿಯಮಗಳ ಪ್ರಕಾರ ಟೆಂಡರ್‌ ಕರೆದು ಹುಬ್ಬಳ್ಳಿ ಮೂಲದ ಏಜೆನ್ಸಿ ಮೂಲಕ ವಾಹನ ಖರೀದಿ ಮಾಡಲಾಗಿತ್ತು. ವಾಹನ ಮತ್ತು ನೋಂದಣಿ ಶುಲ್ಕವನ್ನು ಏಜೆನ್ಸಿಗೆ ಪಾವತಿಸಲಾಗಿದೆ. ಅದರೆ ವಾಹನ ಮಾತ್ರ ನಮಗೆ ನೀಡಿ, ನೋಂದಣಿಗೆ ಸತಾಯಿಸುತ್ತಿದ್ದ ಏಜೆನ್ಸಿ ಜವಾಬ್ದಾರಿ ವಹಿಸಿಕೊಂಡ ವ್ಯಕ್ತಿಯ ಮೇಲೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಇದು ಸ್ಥಳೀಯ ಆಡಳಿತದ ಬೇಜವಾಬ್ದಾರಿ. ಇಷ್ಟು ದಿನಗಳವರೆಗೆ ರಿಜಿಸ್ಟ್ರೇಷನ್‌ ಇಲ್ಲದೇ ವಾಹನ ಓಡಾಟ ಅಪರಾಧ. ಅದರಲ್ಲೂ ಸರ್ಕಾರಿ ವಾಹನದ ಸ್ಥಿತಿಯೇ ಈ ರೀತಿಯಾದರೆ ಗತಿ ಏನು ಎಂದು ಆಡೂರ ಗ್ರಾಮದವರೇ ಆಗಿರುವ ತಾಲ್ಲೂಕು ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಸಿದ್ಲಿಂಗಪ್ಪ ಸಕ್ರಿಕೊಪ್ಪ ಹರಿಹಾಯ್ದಿದ್ದಾರೆ.

ತರಬೇತಿ ನೀಡಿ ಸ್ಥಳೀಯ ಮಹಿಳಾ ಚಾಲಕಿಯನ್ನು ವಾಹನ ಚಲಾಯಿಸಲು ನೇಮಕ ಮಾಡಿಕೊಳ್ಳಲಾಗಿದೆ. ಓಡಾಟದ ವೇಳೆ ಅಪಘಾತವಾಗಿದ್ದರೆ ಹೊಣೆ ಯಾರು ಹೊರುತ್ತಿದ್ದರು ಎಂದು ಪ್ರಶ್ನಿಸಿರುವ ಸಿದ್ಲಿಂಗಪ್ಪ, ಈ ರೀತಿಯಲ್ಲಿ ಹಲವು ಗ್ರಾಮ ಪಂಚಾಯ್ತಿಯ ಕಸ ವಿಲೇವಾರಿ ವಾಹನಗಳಿಗೆ ನೋಂದಣಿ ಮಾಡಿಸದೇ ನೋಂದಣಿ ಶುಲ್ಕ ದುರುಪಯೋಗಪಡಿಸಿಕೊಂಡ ಪ್ರಸಂಗಗಳು ತಾಲ್ಲೂಕಿನಲ್ಲಿ ನಡೆದಿವೆ ಎನ್ನಲಾಗುತ್ತಿದ್ದು, ಈ ಬಗ್ಗೆ ತನಿಖೆ ನಡೆಯಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.