
ಬ್ಯಾಡಗಿ: ತಾಲ್ಲೂಕಿನ ಕೆಂಗೊಂಡ ಗ್ರಾಮದ ಮಹಾಕ್ಷೇತ್ರ ಹಾಗೂ ಬಂಜಾರ ಸಮಾಜದ ಆರಾಧ್ಯ ದೇವತೆಯಾದ ದುರ್ಗಾದೇವಿಯ ಜಾತ್ರಾ ಮಹೋತ್ಸವ ಜ.13ರಂದು ಜರುಗಲಿದೆ.
ನಾಡಿನಾದ್ಯಂತ ಅಪಾರ ಭಕ್ತರನ್ನು ಹೊಂದಿರುವ ದುರ್ಗಾದೇವಿಗೆ ಹರಕೆ ತೀರಿಸಲು ಜಾತ್ರೆ ದಿನದಂದು ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಹಣ್ಣು, ಕಾಯಿ ನೈವೇದ್ಯ ಅರ್ಪಿಸುತ್ತಾರೆ. ಉಳಿದವರು ಹರಕೆಯಂತೆ ಕೋಳಿಗಳನ್ನೂ ಸಹ ಅರ್ಪಿಸುವ ಪದ್ಧತಿ ಮುಂದುವರೆದಿದೆ. ಸಂಜೆಯಿಂದ ಅಹೋರಾತ್ರಿ ನಡೆಯಲಿರುವ ಜಾತ್ರಾ ಮಹೋತ್ಸವ ನಡೆಯಲಿದೆ. ಭಕ್ತರು ನೀಡಿದ ಕಾಣಿಕೆಗಳ ಹರಾಜು ಪ್ರಕ್ರಿಯೆ ಸಹ ನಡೆಯಲಿದೆ.
ರಾಷ್ಟ್ರೀಯ ಹೆದ್ದಾರಿ 48ರಿಂದ 8 ಕಿ.ಮೀ ಅಂತರದಲ್ಲಿರುವ ಕೆಂಗೊಂಡ ಗ್ರಾಮಕ್ಕೆ ಕನವಳ್ಳಿ, ಗುತ್ತಲ, ಹೊಸರಿತ್ತಿ ಕಡೆಗೆ ಹೋಗುವ ಬಸ್‌ಗಳ ಸೌಲಭ್ಯವಿದೆ.
ಸಂತಾನ ಭಾಗ್ಯ : ಹರಕೆಯ ಬಳಿಕ ಸಂತಾನ ಭಾಗ್ಯ ಪಡೆದ ದಂಪತಿ ತಮ್ಮ ಮಗುವಿನ ತೂಕದಷ್ಟು ಬೆಲ್ಲ ಹಾಗೂ ತೆಂಗಿನ ಕಾಯಿಯನ್ನು ಹರಕೆಯಾಗಿ ತೀರಿಸುವ ಪರಿಪಾಠ ನಡೆದು ಬಂದಿದೆ. ದೀರ್ಘಕಾಲದ ಕೆಮ್ಮು ನಿವಾರಣೆಗಾಗಿ ಭಕ್ತರು ಕೆಮ್ಮಮ್ಮನಿಗೆ ಉಪ್ಪು ಮತ್ತು ಹುಣಸೆ ಹಣ್ಣಿನ ಹರಕೆ ತೀರಿಸುತ್ತಾರೆ. ಕಾರಣ ದೇವಸ್ಥಾನದಲ್ಲಿ ಒಂದು ಖಾಯಂ ತಕ್ಕಡಿಯನ್ನು ನೇತು ಹಾಕಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಚಂದ್ರಪ್ಪ ಮಾಹಿತಿ ನೀಡಿದರು.
ಸದಭಕ್ತರ ಸಹಕಾರದಿಂದ ದೇವಸ್ಥಾನವನ್ನು ಸಾಕಷ್ಟು ಅಭಿವೃದ್ಧಿ ಪಡಿಸಲಾಗಿದೆ. ಸರಳ ವಿವಾಹ ಏರ್ಪಡಿಸಲು ಉತ್ತಮ ಸ್ಥಳಾವಕಾಶವಿದೆ. ಸಾರ್ವಜನಿಕರ ಸದುಪಯೋಗ ಪಡೆದುಕೊಳ್ಳಲು 9591784612, 9535792126 ಮೊಬೈಲ್ ಸಂಪರ್ಕಿಸಬಹುದು ಎಂದು ದೇವಸ್ಥಾನ ಸಮಿತಿ ಕಾರ್ಯದರ್ಶಿ ದ್ಯಾಮನಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.