ADVERTISEMENT

ಹಾವೇರಿ | ಈದ್ ಮಿಲಾದ್ ಸಂಭ್ರಮ: ಪ್ರವಾದಿ ಸಂದೇಶ ಸಾರಿದ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 3:19 IST
Last Updated 6 ಸೆಪ್ಟೆಂಬರ್ 2025, 3:19 IST
ಈದ್ ಮಿಲಾದ್ ಅಂಗವಾಗಿ ಹಾವೇರಿಯಲ್ಲಿ ಮುಸ್ಲಿಂ ಸಮುದಾಯದವರು ಶುಕ್ರವಾರ ಮೆರವಣಿಗೆ ನಡೆಸಿದರು 
ಈದ್ ಮಿಲಾದ್ ಅಂಗವಾಗಿ ಹಾವೇರಿಯಲ್ಲಿ ಮುಸ್ಲಿಂ ಸಮುದಾಯದವರು ಶುಕ್ರವಾರ ಮೆರವಣಿಗೆ ನಡೆಸಿದರು    

ಹಾವೇರಿ: ಜಿಲ್ಲೆಯಾದ್ಯಂತ ಈದ್ ಮಿಲಾದ್ ಅನ್ನು ಮುಸ್ಲಿಂ ಸಮುದಾಯದವರು ಶುಕ್ರವಾರ ಸಂಭ್ರಮದಿಂದ ಆಚರಿಸಿದರು. ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಪ್ರವಾದಿ ಮುಹಮ್ಮದ್‌ ಜನ್ಮದಿನದ ಅಂಗವಾಗಿ ಮುಸ್ಲಿಮರು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಮಸೀದಿ ಹಾಗೂ ದರ್ಗಾಗಳಿಗೆ ಧ್ವಜಗಳನ್ನು ಕಟ್ಟಿ, ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಮುಸ್ಲಿಂ ಸಮುದಾಯದವರು ಮೆರವಣಿಗೆ ನಡೆಸಿ, ಮುಹಮ್ಮದರ ಸಂದೇಶಗಳನ್ನು ಸಾರಿದರು.

ಶುಕ್ರವಾರ ನಮಾಜ್ ದಿನವಾಗಿದ್ದರಿಂದ, ಹಾವೇರಿಯಲ್ಲಿ ಬೆಳಿಗ್ಗೆ ನಡೆಯಬೇಕಿದ್ದ ಮೆರವಣಿಗೆಯನ್ನು ಸಂಜೆ ನಡೆಸಲಾಯಿತು. ಹಜರತ್ ಮೆಹಬೂಬ್ ಸುಭಾನಿ ದರ್ಗಾ ಬಳಿ ಚಾಲನೆ ನೀಡಲಾಯಿತು. ವಿವಿಧ ರಸ್ತೆಗಳಲ್ಲಿ ಸಾಗಿ, ದರ್ಗಾ ಬಳಿ ಸಮಾಪ್ತಿಗೊಂಡಿತು.

ADVERTISEMENT

ಧರ್ಮಗುರುಗಳು ವಿಶೇಷ ಉಪನ್ಯಾಸ ನೀಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಶರಬತ್, ಮಜ್ಜಿಗೆ, ತಂಪು ಪಾನೀಯ ವಿತರಿಸುವ ಮೂಲಕ ಹಲವರು ಸೇವೆ ಮಾಡಿದರು.

ಹಾವೇರಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಖಾನ್ ಪಠಾಣ, ಉಪಾಧ್ಯಕ್ಷರಾದ ಚಮನ್‌ಸಾಬ್ ಮುಲ್ಲಾ, ಅನ್ವರ ಕಡೇಮನಿ, ಕಾರ್ಯದರ್ಶಿಗಳಾದ ಮುಜಾಫರ್ ಕೊಟ್ಟಿಗೇರಿ, ಖಜಾಂಚಿ ಗುಲಾಮ್ ಬಂಕಾಪುರ, ಹಾವೇರಿ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಭುಗೌಡ ಬಿಸ್ಟನಗೌಡರ ಇದ್ದರು.

ಹಬ್ಬದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಜಿಲ್ಲೆಯಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದರು.

‘ಇಸ್ಲಾಂ ಅಸ್ತಿತ್ವಕ್ಕಾಗಿ ಶ್ರಮಿಸಿದ ಪೈಗಂಬರ್‌’

ಬ್ಯಾಡಗಿ: ‘ಮಾನವೀಯ ಮೌಲ್ಯ ಅಳವಡಿಸಿಕೊಂಡಿದ್ದ ಮುಹಮ್ಮದ್‌ ಪೈಗಂಬರ್‌ ಅವರು ಇಸ್ಲಾಂ ಧರ್ಮದ ಅಸ್ತಿತ್ವಕ್ಕಾಗಿ ಸಾಕಷ್ಟು ಶ್ರಮಿಸಿದರು. ಬಡವರು, ಅನಾಥರ ಆರೈಕೆ ಮಾಡಿದರು’ ಎಂದು ಮುಖಂಡ ಎ.ಎಂ. ಸೌದಾಗರ ಹೇಳಿದರು.

ಈದ್‌ ಮಿಲಾದ್‌ ಅಂಗವಾಗಿ ಚಮನ್‌ ಶಾವಲಿ ದರ್ಗಾದಿಂದ ಶುಕ್ರವಾರ ನಡೆದ ಮೆರವಣೆಗೆಯಲ್ಲಿ ಮಾತನಾಡಿದರು. ಮೆರವಣಿಗೆಯಲ್ಲಿ ಧಾರ್ಮಿಕ ಹಾಡುಗಳನ್ನು ಹಾಡಲಾಯಿತು.

ನಗರ ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್‌ಮುನಾಫ್‌ ಎರೆಸೀಮಿ, ಮುಕ್ತಿಯಾರ ಮುಲ್ಲಾ, ರಾಜೇಸಾಬ್‌ ಕಳ್ಯಾಳ, ಅಬ್ದುಲ್‌ ಸಮ್ಮದ ಬೆಳವಿಗಿ, ಶಫಿ ಮುಲ್ಲಾ, ಸವೀದ್‌ ಶಿಡೇನೂರ, ಅಬ್ದುಲ್‌ಮಜೀದ್‌ ಮುಲ್ಲಾ, ಮಂಜೂರಲಿ ಹಕಿಂ, ರಫೀಕ್‌ಸಾಬ್‌ ಬೆಳಗಾಂವ, ತೌಷಕ್‌ ಕಳ್ಯಾಳ, ಮುಕ್ತಿಯಾರ ಮುಲ್ಲಾ, ಯೂನಸ್‌ ಸವಣೂರ ಇದ್ದರು.

ತತ್ವಾದರ್ಶ ಪಾಲಿಸಲು ಸಲಹೆ

ಸವಣೂರು: ‘ಈದ್‌ ಮಿಲಾದ್‌ ಪ್ರೀತಿ, ಶಾಂತಿ, ಸಹಿಷ್ಣುತೆ ಹಾಗೂ ಮಾನವೀಯ ಮೌಲ್ಯ ಸಾರುವ ಮಹತ್ವದ ಹಬ್ಬವಾಗಿದೆ’ ಎಂದು ಶಾಸಕ ಯಾಸೀರ್ ಅಹ್ಮದಖಾನ್ ಪಠಾಣ ತಿಳಿಸಿದರು.

ಪಟ್ಟಣದ ಆಸಾರ್ ಏ ಷರೀಫ್ ದರ್ಗಾದಲ್ಲಿ ನಡೆದ ಪ್ರಾರ್ಥನೆ ಬಳಿಕ ಮಾತನಾಡಿದರು.

‘ಸತ್ಯ, ದಯೆ, ಸಮಾನತೆ ಮತ್ತು ಸಹೋದರತ್ವ ಸಂದೇಶವನ್ನು ಪೈಗಂಬರ್‌ ಪಸರಿಸಿದರು. ಅವರ ಬದುಕು ಮಾನವೀಯತೆಯ ಪಾಠ ಕಲಿಸುತ್ತದೆ. ಧರ್ಮ, ಜಾತಿ ಭೇದವಿಲ್ಲದೆ ಸಹಜೀವನ ನಡೆಸುವ ತತ್ವ ಅವರದ್ದಾಗಿತ್ತು’ ಎಂದರು.

ಸಡಗರದ ಆಚರಣೆ

ತಿಳವಳ್ಳಿ: ಈದ್‌ ಮಿಲಾದ್ ಅಂಗವಾಗಿ ಇಲ್ಲಿನ ಪ್ರಮುಖ ಬೀದಿಗಳಲ್ಲಿ ಸ್ತಬ್ಧಚಿತ್ರಗಳು, ಘೋಷವಾಕ್ಯಗಳ ಫಲಕದೊಂದಿಗೆ ಮುಸ್ಲಿಮರು ಮೆರವಣಿಗೆ ನಡೆಸಿದರು. ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಮುಖ ರಸ್ತೆ, ವೃತ್ತಗಳಲ್ಲಿ ಭಿತ್ತಿಪತ್ರಗಳು, ಬ್ಯಾನರ್‌ಗಳು ರಾರಾಜಿಸಿದವು. ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಹಣ್ಣು, ಸಿಹಿ ತನಿಸು ಹಾಗೂ ತಂಪು ಪಾನೀಯ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.