
ಬ್ಯಾಡಗಿ: ಒಣಗುತ್ತಿರುವ ಬೆಳೆಗೆ ನೀರು ಹಾಯಿಸಲು ರೈತರ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತು ನಿರಂತರ 7 ಗಂಟೆ ವಿದ್ಯುತ್ ಪೂರೈಸಬೇಕು, ಹಾಳಾದ ಟಿಸಿ ಬದಲಾಯಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಗುರುವಾರ ಹೆಸ್ಕಾಂನ ಎಇಇ ರಾಜು ಅರಳಿಕಟ್ಟಿ ಅವರಿಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಮುಖಂಡ ಕೆ.ವಿ.ದೊಡ್ಡಗೌಡ್ರ ಮಾತನಾಡಿ, ಒಂದೆಡೆ ಪ್ರಕೃತಿ ಮುನಿಸಿಕೊಂಡ ಪರಿಣಾಮ ಬೆಳೆ ಹಾನಿಯಾಗಿದ್ದರೆ, ಇನ್ನೊಂದೆಡೆ ಸರ್ಕಾರ ಗೋವಿನಜೋಳದ ಖರೀದಿ ಕೇಂದ್ರ ತೆರೆಯದೆ ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ನಿರಂತರ ವಿದ್ಯುತ್ ಪೂರೈಕೆಯಾಗದೆ ಬೆಳೆಗಳಿಗೆ ನೀರುಣಿಸಲು ಸಾಧ್ಯವಾಗದೆ ಬೆಳೆಗಳು ಒಣಗುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ರೈತರು ನೆಮ್ಮದಿಯ ಜೀವನ ಸಾಗಿಸದೆ ತೀವ್ರ ಸಂಕಷ್ಟಕ್ಕೆ ಒಳಗಾಗಬೇಕಾಗಿದೆ. ವಿದ್ಯುತ್ ಕಂಬದಲ್ಲಿ ಅಳವಡಿಸಿ ಟಿಸಿ ಹಾಳಾಗಿದ್ದು ಅವುಗಳನ್ನು ಕೂಡಲೆ ಬದಲಿಸಿ ನಿರಂತರ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮುಖಂಡರಾದ ಮಂಜು ತೋಟದ, ಪ್ರಕಾಶ ಮತ್ತೂರು, ಶಿವರುದ್ರಪ್ಪ ಮೂಡೇರ, ಚನ್ನಬಸಪ್ಪ ಪೂಜಾರ, ಪರಮೇಶ ಮೇಗಳಮನಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.