
ಡಾ. ಎಂ. ನಾಗರಾಜು
ಹಾವೇರಿ: ‘ದೇಶದಲ್ಲಿ ದೊಡ್ಡ ದೊಡ್ಡ ವಿದ್ಯಾವಂತರಿದ್ದಾರೆ. ಆದರೆ, ಅವರಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಇಂದಿನ ಸಂಸ್ಕಾರವಿಲ್ಲದ ಸರ್ಕಾರ ಹಾಗೂ ಅಧಿಕಾರಿಗಳಿಂದ, ಭ್ರಷ್ಟಾಚಾರ ಹಾಗೂ ಮೋಸ ವಿಪರೀತವಾಗಿದೆ. ಗಿಂಬಳ ಪಡೆಯದೇ ಸಂಬಳಕ್ಕಷ್ಟೇ ಕೆಲಸ ಮಾಡುವ ಒಬ್ಬನೇ ಒಬ್ಬ ಅಧಿಕಾರಿಯನ್ನು ನಾನು ನೋಡಲಿಲ್ಲ’ ಎಂದು ಬೆಂಗಳೂರು ಕನಕಪುರ ರಸ್ತೆಯ ಸುವರ್ಣಮುಖಿ ಸಂಸ್ಕೃತಿ ಧಾಮದ ಆಚಾರ್ಯ ಡಾ. ಎಂ. ನಾಗರಾಜು ಬೇಸರ ವ್ಯಕ್ತಪಡಿಸಿದರು.
ನಗರದ ಹೊರವಲಯದಲ್ಲಿರುವ ಶಾಲೆಯೊಂದರಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ‘ನಾನೂ ಆಶ್ರಮ ಮೂಲಕ ಶಾಲೆ ನಡೆಸುತ್ತಿದ್ದೇವೆ. ಸರ್ಕಾರಿ ಕಚೇರಿಯಲ್ಲಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೈ ಬಿಸಿ ಮಾಡಿಯೇ ಶಾಲೆ ಕಟ್ಟಿದ್ದೇನೆ. ಈ ವಿಪರೀತ ಭ್ರಷ್ಟಾಚಾರ ನೋಡಲು ನನ್ನಿಂದ ಆಗುತ್ತಿಲ್ಲ. ಹೀಗಾಗಿ, ನಾನು ಸರ್ಕಾರಿ ಕಚೇರಿಗೆ ಹೋಗುವುದನ್ನೇ ಬಿಟ್ಟಿದ್ದೇನೆ’ ಎಂದರು.
‘ನಾನು ವೈದ್ಯಕೀಯ ಶಿಕ್ಷಣ ಮುಗಿಸಿ ಅಮೆರಿಕದಲ್ಲಿ 30 ವರ್ಷ ವೈದ್ಯನಾಗಿ ಕೆಲಸ ಮಾಡುತ್ತಿದ್ದೆ. ಭಾರತದಿಂದ ಬಂದಿದ್ದ ಚಿನ್ಮಯಾನಂದ ಸ್ವಾಮೀಜಿ, ಭಗವದ್ಗೀತೆ ಬಗ್ಗೆ ಪ್ರವಚನ ನೀಡಿದರು. ಪ್ರವಚನದಿಂದ ಪ್ರಭಾವಿತನಾಗಿ ಕರ್ನಾಟಕಕ್ಕೆ ವಾಪಸು ಬಂದು, ಈಗ ಬಡಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವ ಆಶ್ರಮ ಸ್ಥಾಪಿಸಿದ್ದೇನೆ. ಅಂದು ಸ್ವಾಮೀಜಿ, ಸತ್ಯ ಹೇಳಬೇಕು ಹಾಗೂ ಪ್ರತಿಯೊಂದರಲ್ಲೂ ದೇವರನ್ನು ಕಂಡು ಧರ್ಮದಿಂದ ಬದುಕಬೇಕೆಂದು ಹೇಳಿದ್ದರು. ಆದರೆ, ಇಂದು ವ್ಯಾಪಾರ–ವಹಿವಾಟಿನಲ್ಲಿ ನಂಬಿಕೆಯೇ ಇಲ್ಲದಂತಾಗಿದೆ. ವಿದ್ಯಾವಂತರು ಸಂಸ್ಕಾರ ಮರೆತು ಅವಿದ್ಯಾವಂತರಾಗಿದ್ದಾರೆ. ಸಮಾಜದ ಜನರಿಗೂ ಸಂಸ್ಕಾರವಿಲ್ಲ. ಹೀಗಾಗಿ, ಸಂಸ್ಕಾರವಿಲ್ಲದ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹೆಚ್ಚಾಗುತ್ತಿದ್ದಾರೆ. ಅಪರಾಧ ಹಿನ್ನೆಲೆಯುಳ್ಳವರು ರಾಜಕೀಯಕ್ಕೆ ಬರುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ದಕ್ಷಿಣ ಕರ್ನಾಟಕಕ್ಕಿಂತ ಉತ್ತರ ಕರ್ನಾಟಕ ಅಭಿವೃದ್ಧಿಯಲ್ಲಿ 30 ವರ್ಷಗಳಷ್ಟು ಹಿಂದಿರುವುದು ದುರ್ದೈವದ ಸಂಗತಿ. ಉತ್ತರ ಕರ್ನಾಟಕದಲ್ಲಿ ಇಂದಿಗೂ ಜನರು ಹೆಬ್ಬೆಟ್ಟು ಒತ್ತುತ್ತಿದ್ದಾರೆ. ನಮ್ಮ ಸರ್ಕಾರಗಳು ಇಲ್ಲಿಯ ಜನರಿಗೆ ಬಹಳ ಅನ್ಯಾಯ ಮಾಡುತ್ತಿವೆ. ಮೇಲು–ಕೀಳು, ಅಸ್ಪೃಶ್ಯತೆ, ಜಾತಿ–ಧರ್ಮ, ಬಡವ–ಶ್ರೀಮಂತ ಹೆಸರಿನಲ್ಲಿ ಜನರನ್ನು ಕೀಳಾಗಿ ಕಾಣುತ್ತಿರುವುದು ಪಾಪದ ಕೆಲಸ. ಇದರಿಂದಲೇ ನಮ್ಮ ದೇಶದ ಅಭಿವೃದ್ಧಿಯಾಗುತ್ತಿಲ್ಲ. ದೇಶದ ಭವಿಷ್ಯವಾಗಿರುವ ಮಕ್ಕಳನ್ನಾದರೂ ಸಂಸ್ಕಾರವಂತರನ್ನಾಗಿ ಮಾಡಿ, ಸಂಸ್ಕಾರವಂತ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ರೂಪಿಸುವ ಜವಾಬ್ದಾರಿ ತಾಯಂದಿರ ಮೇಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.