ADVERTISEMENT

ಹಂಸಭಾವಿ: ಶಿಕ್ಷಣದ ಜೊತೆ ಪರಿಸರ ಸಂರಕ್ಷಣೆ

ಕಚವಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಸ್ಯಗಳ ಸೊಬಗು

​ಪ್ರಜಾವಾಣಿ ವಾರ್ತೆ
Published 4 ಜೂನ್ 2023, 23:33 IST
Last Updated 4 ಜೂನ್ 2023, 23:33 IST
ಕಚವಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ಬೆಳೆಸಿರುವುದು
ಕಚವಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ಬೆಳೆಸಿರುವುದು   

ರಾಜೇಂದ್ರ ನಾಯಕ

ಕಚವಿ(ಹಂಸಭಾವಿ): ಇಲ್ಲಿಗೆ ಸಮೀಪದ ಕಚವಿ ಗ್ರಾಮದ ಸರ್ದಾರ್‌ ವೀರಗೌಡ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮುಂದಾಗಿದ್ದಾರೆ.

ಶಾಲೆಯ ಆವರಣದಲ್ಲಿ ಹಲಸು, ಮಾವು, ಕಾಡು ಬಾದಾಮಿ, ನೇರಳೆ, ಬೆಟ್ಟದ ನೆಲ್ಲಿ, ಸೀಬೆಗಿಡ, ತೆಂಗು, ತೇಗ, ಬೀಟೆ, ಸಂಪಿಗೆ, ಅಶೋಕ ಗಿಡ, ಬೇವು, ನುಗ್ಗೆ, ಮತ್ತಿ, ಅಂಟವಾಳ ಗಿಡಗಳನ್ನು ಬೆಳೆಸಿದ್ದಾರೆ.

ADVERTISEMENT

ತುಳಸಿ, ದೊಡ್ಡಪತ್ರೆ, ಲೋಳೆಸರ, ಅಮೃತಬಳ್ಳಿ, ಶತಾವರಿ ಔಷಧಿ ಸಸಿಗಳನ್ನು, ಮಲ್ಲಿಗೆ, ದಾಸವಾಳ, ಚೆಂಡು ಹೂ, ಗುಲಾಬಿ, ಸೇವಂತಿಗೆ ಹೂವಿನ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.

ಶಾಲೆಯ ಆವರಣದಲ್ಲಿ ಬೆಂಡೆ, ಟೊಮೆಟೊ, ಬದನೆಕಾಯಿ, ಮೆಣಸು, ಬೀನ್ಸ್‌, ತೊಂಡೆಬಳ್ಳಿ, ಕೋತಂಬರಿ ಸೊಪ್ಪು, ಮೆಂತೆ, ಪಾಲಕ್‌, ಮೂಲಂಗಿ ಬೆಳೆಯುತ್ತೇವೆ. ಈ ತಾಜಾ ತರಕಾರಿಯನ್ನು ಬಿಸಿಯೂಟಕ್ಕೆ ಬಳಸುತ್ತೇವೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಸಂತೋಷ.

ಶಾಲೆಯ ಆವರಣದಲ್ಲಿ ವಿವಿಧ ರೀತಿಯ ಗಿಡಗಳಿದ್ದು, ಅದರ ಕೆಳಗೆ ಕುಳಿತು ನಾವು ಅಭ್ಯಾಸ ಮಾಡುತ್ತೇವೆ. ಯಾವ ಸಸ್ಯದಿಂದ ಯಾವೆಲ್ಲ ಔಷಧ ತಯಾರಿಸಲಾಗುತ್ತದೆ ಎಂಬುದರ ಕುರಿತು ಶಿಕ್ಷಕರು ಮಾಹಿತಿ ನೀಡುತ್ತಾರೆ. ಗಿಡ-ಮರಗಳನ್ನು ಬೆಳೆಸುತ್ತಿರುವುದು ಖುಷಿ ತಂದಿದೆ ಎಂದು ಶಾಲೆಯ ವಿದ್ಯಾರ್ಥಿನಿ ಚಂದನ್‌ ಮಡಿವಾಳರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.