ADVERTISEMENT

ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ: ಕಡತ ತ್ವರಿತ ವಿಲೇವಾರಿಗೆ ಸೂಚನೆ

ಸಾರ್ವಜನಿಕರ ಅಹವಾಲು ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 4:04 IST
Last Updated 20 ಜುಲೈ 2025, 4:04 IST
ಹಾವೇರಿ ಜಿಲ್ಲೆಯ ಹಿರೇಕೆರೂರು ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಸಭೆ ನಡೆಸಿದರು
ಹಾವೇರಿ ಜಿಲ್ಲೆಯ ಹಿರೇಕೆರೂರು ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಸಭೆ ನಡೆಸಿದರು   

ಹಾವೇರಿ: ‘ಕಂದಾಯ ಇಲಾಖೆಯ ಕೆಲಸಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ಇ–ಆಫೀಸ್‌ ವ್ಯವಸ್ಥೆ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಕಡತಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ತಹಶೀಲ್ದಾರ್ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.

ಜಿಲ್ಲೆಯ ಶಿಗ್ಗಾವಿ, ಹಿರೇಕೆರೂರು ತಹಶೀಲ್ದಾರ್ ಕಚೇರಿಗಳಿಗೆ ದಿಢೀರ್ ಭೇಟಿ ನೀಡಿದ ಅವರು, ಕಚೇರಿಯ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ನಡೆಸಿದರು.

‘ಕಚೇರಿಗೆ ಬರುವ ಜನರ ಕೆಲಸಗಳನ್ನು ತುರ್ತಾಗಿ ಆದ್ಯತೆ ಮೇರೆಗೆ ಮಾಡಬೇಕು. ಯಾವುದೇ ಕಡತಗಳನ್ನು ಬಾಕಿ ಉಳಿಸಿಕೊಂಡು ವಿಳಂಬ ಮಾಡಬಾರದು. ಜನರಿಗೆ ಯಾವುದೇ ತೊಂದರೆಯಾಗದಂತೆ ಕೆಲಸ ಮಾಡಬೇಕು’ ಎಂದು ಖಡಕ್ ಸೂಚನೆ ನೀಡಿದರು.

ADVERTISEMENT

‘ಜಿಲ್ಲೆಯ ತಾಲ್ಲೂಕು ಕಚೇರಿಗಳ ದಾಖಲೆ ಕೊಠಡಿಗಳಲ್ಲಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದು ದಾಖಲೆ ಸುರಕ್ಷಿತವಾಗಿರಿಸಲು ಶಾಶ್ವತ ಕ್ರಮವಾಗಿದೆ. ದಾಖಲೆಗಳ ರಕ್ಷಣೆಗೆ ಉತ್ತಮ ತಂತ್ರಾಂಶ ಇದಾಗಿದೆ. ಜನಸಾಮಾನ್ಯರ ದಾಖಲೆಗಳನ್ನು ರಕ್ಷಿಸಿ, ಅವುಗಳು ಸುಲಭವಾಗಿ ದೊರೆಯುವಂತೆ ಮಾಡುವುದು ತಂತ್ರಾಂಶದ ಉದ್ದೇಶವಾಗಿದೆ’ ಎಂದರು.

‘ಕಂದಾಯ ಸಚಿವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಇ–ಆಫೀಸ್ ವ್ಯವಸ್ಥೆ ಪರಿಶೀಲಿಸಿದ್ದರು. ಯಾವುದೇ ಕಚೇರಿಯಲ್ಲಿ ನಿಗದಿತ ಗುರಿ ತಲುಪದಿರುವುದನ್ನು ಗಮನಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ತ್ವರಿತವಾಗಿ ಸರಿಪಡಿಸಬೇಕು. ಡಿಜಿಟಲೀಕರಣಕ್ಕೆ ಒತ್ತು ನೀಡಬೇಕು’ ಎಂದು ಸಿಬ್ಬಂದಿಗೆ ತಿಳಿಸಿದರು.

‘ಭೂ ನಿರ್ವಹಣೆಯನ್ನು ಸರಳ ಮತ್ತು ಹೆಚ್ಚು ಪಾರದರ್ಶಕವಾಗಿಸಲು ಆಧಾರ್ ಜೋಡಣೆ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಮುಂದಿನ ಒಂದು ವಾರದಲ್ಲಿ ಎಲ್ಲ ತಾಲ್ಲೂಕಿನ ಕಂದಾಯ ಇಲಾಖೆಗಳು ಪ್ರಗತಿ ವರದಿ ಸಲ್ಲಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ತಾಕೀತು ಮಾಡಿದರು.

‘ಕಂದಾಯ ಗ್ರಾಮ, ಉಪ ಗ್ರಾಮ ಪ್ರಸ್ತಾವಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಇ– ಪಾವತಿ ಖಾತೆಯನ್ನು ಆಂದೋಲನ ಮಾದರಿಯಲ್ಲಿ ಎಲ್ಲ ಗ್ರಾಮಗಳಲ್ಲಿ ಪ್ರಚಾರ ಮಾಡಬೇಕು’ ಎಂದರು.

‘ಬಗರಹುಕುಂ ಅಡಿಯಲ್ಲಿ ದುರ್ಬಳಕೆ ತಡೆಗಟ್ಟಲು ಡಿಜಿಟಲ್ ಸಹಿಗೆ ಅವಕಾಶ ಮಾಡಿಕೊಟ್ಟು ಡಿಜಿಟಲ್ ಸಾಗುವಳಿ ಚೀಟಿಯನ್ನು ನೀಡಲಾಗುತ್ತದೆ. ಹೀಗಾಗಿ ಸಂಬಂಧಿಸಿದ ಸಿಬ್ಬಂದಿ, ತಮ್ಮ ಲಾಗಿನ್‌ನಲ್ಲಿರುವ ಕಡತಗಳನ್ನು ವಿಲೇವಾರಿ ಮಾಡಬೇಕು. ಯಾವುದನ್ನೂ ಲಾಗಿನ್‌ನಲ್ಲಿ ಉಳಿಸಿಕೊಳ್ಳದೇ ನಿಗದಿಪಡಿಸಿದ ದಿನದೊಳಗೆ ವಿಲೇವಾರಿ ಮಾಡಬೇಕು’ ಎಂದು ಹೇಳಿದರು.

ವಿಜಯ ಮಹಾಂತೇಶ ದಾನಮ್ಮನವರ  
ಕಂದಾಯ ಇಲಾಖೆಯ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣ ಮಾಡಲಾಗುತ್ತಿದೆ. ಇದು ದಾಖಲೆ ಸುರಕ್ಷಿತವಾಗಿರಿಸಲು ಶಾಶ್ವತ ಕ್ರಮವಾಗಿದೆ 
ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

'ಜನರ ಸೇವೆಗಾಗಿ ಸರ್ಕಾರಿ ಕೆಲಸ’:

‘ಜಿಲ್ಲೆಯ ಎಲ್ಲ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನೌಕರರು ಜನರ ಸೇವೆ ಮಾಡುವುದಕ್ಕಾಗಿ ಹೆಚ್ಚು ಓದಿ ಸರ್ಕಾರಿ ಕೆಲಸಕ್ಕೆ ಬಂದಿದ್ದೀರಾ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಿಸ್ವಾರ್ಥ ಹಾಗೂ ಪ್ರಮಾಣಿಕವಾಗಿ ಕೆಲಸ ಮಾಡಿ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು. ‘ಸಿಬ್ಬಂದಿಗಳು ನಿಸ್ವಾರ್ಥವಾಗಿ ಸಮನ್ವಯದೊಂದಿಗೆ ಕೆಲಸ ಮಾಡಬೇಕು. ಆಗ ಮಾತ್ರ ಉತ್ತಮ ಕೆಲಸಗಾರ ಎಂದೆನಿಸಿಕೊಳ್ಳುತ್ತಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.