ರಾಣೆಬೆನ್ನೂರು: ತಾಲ್ಲೂಕಿನ ತೆರೇದಹಳ್ಳಿ ಗ್ರಾಮದಲ್ಲಿನ ವೆಂಕಟೇಶ್ವರ ಹ್ಯಾಚರೀಸ್ ಪ್ರೈ. ಲಿ ಕಂಪನಿಯ (ಕೋಳಿ ಮಾಂಸ ತಯಾರಿಕ ಘಟಕ) ಕಾರ್ಮಿಕ, ತಾಲ್ಲೂಕಿನ ಖಂಡೇರಾಯನಹಳ್ಳಿಯ ಕಾರ್ಮಿಕ ದುರಗಪ್ಪ ಮಾಳಮ್ಮನವರ (41) ಗುರುವಾರ ಸಾವನ್ನಪ್ಪಿದರು. ಅವರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ‘14 ವರ್ಷಗಳಿಂದ ದುಡಿಯುತ್ತಿದ್ದ ಕಾರ್ಮಿಕ ದುರಗಪ್ಪ ಮಾಳಮ್ಮನವರ ಅವರ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡಲ್ಲ’ ಎಂದು ಕಂಪನಿ ಆವರಣದಲ್ಲಿ ಕಾರ್ಮಿನ ಶವ ಇಟ್ಟು ರೈತರು ಮತ್ತು ಕುಟುಂಬದವರು ಪ್ರತಿಭಟನೆ ನಡೆಸಿದರು.
ರೈತರ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿ, ‘ಕಂಪನಿಯ ಕೋಲ್ಡ್ ಸ್ಟೋರೇಜ್‌ನಲ್ಲಿ ಮೈನಸ್ 20 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡುವ ಹಲವು ಕಾರ್ಮಿಕರು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದುರುಗಪ್ಪ ಕೂಡ ಅದೇ ರೀತಿ ಸಾವನ್ನಪ್ಪಿದ್ದು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು’ ಎಂದು ಪಟ್ಟು ಹಿಡಿದರು. ಮಾಕನೂರಿನ ರೈತರ ಮುಖಂಡ ಈರಣ್ಣ ಹಲಗೇರಿ ಕೂಡ ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 10 ಗಂಟೆಗಳ ಕಾಲ ಕಾಲ ನಿರಂತವಾಗಿ ನಡೆದ ಪ್ರತಿಭಟನೆ ನಡೆಸಿದಾಗ ಹೋರಾಟಕ್ಕೆ ಮಣಿದ ಕಂಪನಿಯ ಆಡಳಿತ ಮಂಡಳಿ ಮೃತ ಕಾರ್ಮಿಕ ದುರಗಪ್ಪನ ಮಗನಿಗೆ ಕಾಯಂ ನೌಕರಿ, ಪತ್ನಿಗೆ ಕಂಪನಿಯ ಗುತ್ತಿಗೆ ಆಧಾರದಲ್ಲಿ ಕೆಲಸ ನೀಡುವುದರ ಜೊತೆಗೆ ₹7 ಲಕ್ಷ ನಗದು ಹಾಗೂ ಭವಿಷ್ಯ ನಿಧಿ ಮತ್ತು ಇನ್ಸೂರನ್ಸ್ ಹಾಗೂ ಇತರೆ ಮೂಲಗಳಿಂದ ಬರುವ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಭರವಸೆ ನೀಡಿದರು. ಆಗ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಕಂಪನಿಯ ಎಚ್.ಆರ್.ಡಿ. ಡಿಪಾರ್ಟಮೆಂಟಿನ ಚಿತ್ರಪ್ಪ, ಪ್ರೊಡಕ್ಷನ್ ಮ್ಯಾನೇಜರ್ ರವಿಕುಮಾರ, ಮುರುಗೇಶ ಮಹಾಂತಶೆಟ್ರ ಹಾಜರಿದ್ದರು. ಮೃತ ಕಾರ್ಮಿಕ ದುರಗಪ್ಪ ಗುಡ್ಡಪ್ಪ ಮಾಳಮ್ಮನವರ ಅವರ ಪತ್ನಿ ರೇಖಾ, ಪುತ್ರರಾದ ಪ್ರಜ್ವಲ್, ಮಾಂತೇಶ ಮತ್ತು ಪ್ರದೀಪ ಅವರೊಂದಿಗೆ ಡಾಕೇಶ ಎಂ. ಲಮಾಣಿ, ರಾಘವೇಂದ್ರಗೌಡ, ಮಲ್ಲೇಶಪ್ಪ ತೋಟಗಾರ, ಶಿವಲಿಂಗೇಗೌಡ, ಕಂಪನಿಯ ಯೂನಿಯನ್ ಕೊಟ್ರೇಶಪ್ಪ ಓಲೇಕಾರ, ದೋಣಿಯಪ್ಪ ಸೊಟ್ಟಮ್ಮನವರ, ನಾಗರಾಜ ಕರಿಗಾರ, ವಿರುಪಾಕ್ಷಗೌಡ ಗೌಡ್ರ, ಹರಿಹರಗೌಡ ಪಾಟೀಲ, ಸುರೇಶ ಮಲ್ಲಾಪುರ, ಹಾಲೇಶ ಕೆಂಚನಾಯ್ಕರ ಉಪಸ್ಥಿತರಿದ್ದರು.
ಕಂಪನಿಯ ಸುಮಾರು 770 ಕ್ಕೂ ಹೆಚ್ಚು ಕಾರ್ಮಿಕರು ಕೆಲಸಕ್ಕೆ ಹಾಜರಾಗದೆ ಅಗಲಿದ ಕಾರ್ಮಿಕ ದುರಗಪ್ಪ ಸಾವಿಗೆ ಆತನ ಕುಟುಂಬಕ್ಕೆ ನ್ಯಾಯ ಕೊಡಿಸಲು ಮುಂದಾಗಿದ್ದರು. ಡಿವೈಎಸ್‌ಪಿ ಲೋಕೇಶ, ಸಿ.ಪಿ.ಐ ಸಿದ್ದೇಶ ಮತ್ತು ಪಿ.ಎಸ್.ಐ. ಪರಶುರಾಮ ಲಮಾಣಿ, ಗಡ್ಡೆಪ್ಪ ಗಂಜುಟಗಿ ಬಂದೋಬಸ್ತ ಒದಗಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.