
ಹಾವೇರಿ: ‘ಕೃಷಿ ಉತ್ಪನ್ನಗಳ ಕಾಳು ಮಾಡುವ ಯಂತ್ರಗಳಿಂದ ಅವಘಡಗಳು ಸಂಭವಿಸುತ್ತಿದ್ದು, ರೈತರು ಹಾಗೂ ಯಂತ್ರಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ವಿಮೆ ಅವಕಾಶದಿಂದಲೂ ವಂಚಿತರಾಗಿದ್ದಾರೆ. ಕಾಳು ಮಾಡುವ ಯಂತ್ರಗಳಿಗೆ ಚೆಸ್ಸಿ ನಂಬರ್ ನೀಡಿ, ವಿಮೆಗೆ ಅವಕಾಶ ಕಲ್ಪಿಸಬೇಕು’ ಎಂದು ಆಗ್ರಹಿಸಿ ರೈತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಮುರುಘರಾಜೇಂದ್ರ ಮಠದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಯಂತ್ರಗಳ ಸಮೇತ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ತಮ್ಮ ಬೇಡಿಕೆಗಳ ಈಡೇರಿಕೆಗೆ ಘೋಷಣೆ ಕೂಗಿದರು.
ಮೆರವಣಿಗೆ ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ್ದ ರೈತರು, ಬಹಿರಂಗ ಸಭೆ ನಡೆಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಮಿಕರ ಕೊರತೆ, ಯಂತ್ರ ಬಳಕೆ: ‘ಕೃಷಿ ಚಟುವಟಿಕೆ ಮಾಡಲು ಕೂಲಿ ಕಾರ್ಮಿಕರ ಕೊರತೆ ಹೆಚ್ಚಿದೆ. ಹೀಗಾಗಿ, ಕೃಷಿ ಕೆಲಸಕ್ಕಾಗಿ ರೈತರು ಯಂತ್ರಗಳನ್ನು ಬಳಸುತ್ತಿದ್ದಾರೆ’ ಎಂದು ಪ್ರತಿಭಟನಕಾರರು ಹೇಳಿದರು.
‘ಮೆಕ್ಕೆಜೋಳ, ಶೇಂಗಾ, ಭತ್ತ, ಸೋಯಾಬಿನ್ ಸೇರಿದಂತೆ ಇತರೆ ಬೆಳೆಗಳ ಕಾಳುಗಳನ್ನು ಮಾಡಲು ಯಂತ್ರಗಳನ್ನು ಬಳಸಲಾಗುತ್ತಿದೆ. ಈ ಯಂತ್ರ ಬಳಕೆ ಸಂದರ್ಭದಲ್ಲಿ ಅವಘಡಗಳು ಸಂಭವಿಸುತ್ತಿವೆ. ಹಲವರು ಗಾಯಗೊಳ್ಳುತ್ತಿದ್ದಾರೆ. ಕೆಲವರು ಮೃತಪಡುತ್ತಿರುವ ಘಟನೆಗಳೂ ನಡೆಯುತ್ತಿವೆ. ಇತ್ತೀಚೆಗೆ ದೇವರಗುಡ್ಡ–ಯಲ್ಲಾಪುರ ರಸ್ತೆಯಲ್ಲಿ ರೈತರೊಬ್ಬರು ಮೃತಪಟ್ಟಿದ್ದಾರೆ’ ಎಂದು ತಿಳಿಸಿದರು.
‘ಯಂತ್ರಗಳಿಂದ ಅವಘಡ ಉಂಟಾದಾಗ ವಿಮೆ ಸೌಲಭ್ಯ ಸಿಗುತ್ತಿಲ್ಲ. ಚೆಸ್ಸಿ ನಂಬರ್ ಇಲ್ಲದಿದ್ದರಿಂದ, ವಿಮೆ ನೋಂದಣಿ ಮಾಡಲು ಆಗುತ್ತಿಲ್ಲ. ಚೆಸ್ಸಿ ನಂಬರ್ ನೀಡಿದರೆ ವಾಹನಗಳ ಮಾನ್ಯತೆ ಸಿಗುತ್ತದೆ. ವಿಮೆ ಮಾಡಬಹುದು. ಅವಘಡ ಉಂಟಾದರೆ ಸಂತ್ರಸ್ತರಿಗೆ ವಿಮೆ ಹಣ ಸಿಗುತ್ತದೆ’ ಎಂದು ರೈತರು ಹೇಳಿದರು.
‘ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು. ಎಂಎಸ್‌ಪಿ ₹ 2,450 ದರ ನೀಡಬೇಕು. ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು. ವರದಾ–ಬೇಡ್ತಿ ನದಿ ಜೋಡಣೆ ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಬೇಕು’ ಎಂದು ರೈತರು ಆಗ್ರಹಿಸಿದರು.
ಪ್ರತಿಭಟನೆ ಬಳಿಕ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರ ಮೂಲಕ ರೈತರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಹಾಗೂ ಇತರರು ಇದ್ದರು.
‘ಕಾಯ್ದೆ ತಿದ್ದುಪಡಿಗಾಗಿ ಪತ್ರ’
‘ವಾಹನಗಳ ನೋಂದಣಿ ಹಾಗೂ ಇತರೆ ವಿಚಾರಗಳು ಮೋಟಾರು ವಾಹನಗಳ ಕಾಯ್ದೆ ವ್ಯಾಪ್ತಿಯಲ್ಲಿವೆ. ಕಾಳು ಯಂತ್ರಗಳಿಗೆ ಚೆಸ್ಸಿ ನಂಬರ್ ನೀಡುವ ಬಗ್ಗೆ ಕಾಯ್ದೆಯಲ್ಲಿ ತಿದ್ದುಪಡಿ ಆಗಬೇಕು. ಈ ಬಗ್ಗೆ ರೈತರ ಮನವಿ ಸಮೇತ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಆರ್‌ಟಿಒ ಅವರು ಸಹ ಪತ್ರ ಬರೆಯಲಿದ್ದಾರೆ’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು. ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು ‘ಕಳೆದ ಬಾರಿ ₹ 60 ಕೋಟಿ ಬೆಳೆ ವಿಮೆ ಸಮಸ್ಯೆಯಿತ್ತು. ಅದನ್ನು ಬಗೆಹರಿಸಿ ₹ 50 ಕೋಟಿ ವಿಮೆ ಹಣ ಕೊಡಿಸಲಾಗಿದೆ. ಬೇಡ್ತಿ–ವರದಾ ನದಿ ಜೋಡಣೆ ಬಗ್ಗೆ ಹಲವು ಬಾರಿ ಸಭೆಯಾಗಿದ್ದು ಡಿಪಿಆರ್ ಆಗುವ ಹಂತದಲ್ಲಿದೆ. ಬೆಳೆ ಹಾನಿಗೆ ಸಂಬಂಧಪಟ್ಟಂತೆ ಪರಿಹಾರ ನೀಡುವ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ. ತೋಟಗಾರಿಕೆ ಬೆಳೆಗಳಾದ ಮಾವು ಅಡಿಕೆ ಮೆಣಸಿನಕಾಯಿ ವಿಮೆ ಬಗ್ಗೆ ತಾಂತ್ರಿಕ ಸಮಸ್ಯೆಯಿತ್ತು. ಅದು ಸಹ ಪರಿಹಾರವಾಗಿದ್ದು ಕೆಲವೇ ದಿನಗಳಲ್ಲಿ ರೈತರ ಖಾತೆಗೆ ವಿಮೆ ಹಣ ಜಮೆ ಆಗಲಿದೆ’ ಎಂದು ಹೇಳಿದರು. ‘ಮೆಕ್ಕೆಜೋಳ ಬೆಲೆ ಕುಸಿದಿರುವುದು ಗಮನದಲ್ಲಿದೆ. ಜಿಲ್ಲೆಯಲ್ಲಿರುವ ಕಾರ್ಖಾನೆ ಮಾಲೀಕರ ಸಭೆ ನಡೆಸಿ ಅವರ ಮೂಲಕ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರಕ್ಕೆ ಮೆಕ್ಕೆಜೋಳ ಖರೀದಿಸುವಂತೆ ಕೋರಲಾಗುವುದು’ ಎಂದರು.
‘ಕೃಷಿ ಯಂತ್ರಗಳಿಗೆ ತಾಂತ್ರಿಕ ನೀತಿ ಅಗತ್ಯ’
‘ಕೃಷಿ ಕ್ಷೇತ್ರದಲ್ಲಿ ಯಂತ್ರಗಳ ಬಳಕೆ ಹೆಚ್ಚಾಗಿದೆ. ಯಂತ್ರಗಳಿಗೆ ಹೊಸ ತಾಂತ್ರಿಕ ನೀತಿ ರೂಪಿಸಬೇಕಾದ ಅಗತ್ಯವಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು ‘ರೈತರ ವಿಚಾರದಲ್ಲಿ ಸರ್ಕಾರಗಳು ಹುಡುಗಾಟಿಕೆ ಮಾಡಬಾರದು. ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.