ADVERTISEMENT

ಹಾವೇರಿ: ರೊಟ್ಟಿ ಹೊತ್ತು ತಂದು ರೈತರ ಧರಣಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 5:35 IST
Last Updated 26 ನವೆಂಬರ್ 2025, 5:35 IST
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಹಮ್ಮಿಕೊಂಡಿರುವ ಧರಣಿ ಸ್ಥಳದ ಪೆಂಡಾಲ್‌ನಲ್ಲಿ ಮಂಗಳವಾರ ರೊಟ್ಟಿಗಳನ್ನು ಹೊಂದಿಸಿಡಲಾಯಿತು
ಹಾವೇರಿ ಜಿಲ್ಲಾಧಿಕಾರಿ ಕಚೇರಿ ಎದುರು ರೈತರು ಹಮ್ಮಿಕೊಂಡಿರುವ ಧರಣಿ ಸ್ಥಳದ ಪೆಂಡಾಲ್‌ನಲ್ಲಿ ಮಂಗಳವಾರ ರೊಟ್ಟಿಗಳನ್ನು ಹೊಂದಿಸಿಡಲಾಯಿತು   

ಹಾವೇರಿ: ‘ಮೆಕ್ಕೆಜೋಳಕ್ಕೆ ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹ 3,000 ನೀಡಬೇಕು. ಮೆಕ್ಕೆಜೋಳವನ್ನು ಖರೀದಿಸಲು ತ್ವರಿತವಾಗಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿ ನಗರದಲ್ಲಿ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಮಂಗಳವಾರ ಎರಡನೇ ದಿನ ಪೂರೈಸಿತು.

‘ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ಯ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿರುವ ಧರಣಿಯಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಿಂದಲೂ ರೈತರು ಭಾಗವಹಿಸುತ್ತಿದ್ದಾರೆ.

ಬೆಳಿಗ್ಗೆಯಿಂದ ರಾತ್ರಿಯವರೆಗೂ ರೈತರು ಜಿಲ್ಲಾಧಿಕಾರಿ ಕಚೇರಿ ಎದುರೇ ಪೆಂಡಾಲ್‌ನಲ್ಲಿ ಕುಳಿತುಕೊಂಡಿದ್ದರು. ರೈತರೇ ಅಡುಗೆ ಸಿದ್ಧಪಡಿಸಿ ಧರಣಿ ನಿರತರಿಗೆ ನೀಡಿದರು. ಜೊತೆಗೆ, ರೈತರು ತಮ್ಮ ಮನೆಯಿಂದ ರೊಟ್ಟಿಗಳನ್ನು ಮಾಡಿಸಿಕೊಂಡು ಬಂದು ಧರಣಿ ಮಾಡುತ್ತಿರುವವರಿಗೆ ನೀಡಿದರು. ರೈತರು, ಚೀಲಗಳಲ್ಲಿ ರೊಟ್ಟಿಗಳನ್ನು ತುಂಬಿಕೊಂಡು ರಸ್ತೆಯಲ್ಲಿ ಹೊತ್ತುಕೊಂಡು ಬರುತ್ತಿದ್ದ ದೃಶ್ಯಗಳು ಕಂಡುಬಂದವು. ಧರಣಿ ಸ್ಥಳದ ವೇದಿಕೆಯಲ್ಲಿಯೇ ರೊಟ್ಟಿಗಳನ್ನು ಸಾಲಾಗಿ ಜೋಡಿಸಿಟ್ಟು ಒಣಗಿಸುತ್ತಿದ್ದರು.

ADVERTISEMENT

‘ಜಗತ್ತಿಗೆ ಅನ್ನ ನೀಡುವ ರೈತರು ಬೀದಿಯಲ್ಲಿ ಊಟ ಮಾಡುವ ಪರಿಸ್ಥಿತಿಗೆ ಈ ಸರ್ಕಾರವೇ ಕಾರಣ. ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡಿದರೆ ಮಾತ್ರ ರೈತರು ಆರ್ಥಿಕವಾಗಿ ಸುಧಾರಿಸುತ್ತಾರೆ’ ಎಂದು ರೈತರು ಹೇಳಿದರು.

‘ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಪ್ರತಿ ಎಕರೆಗೆ ₹25,000 ಪರಿಹಾರ ನೀಡಬೇಕು. ವರದಾ ಹಾಗೂ ಬೇಡ್ತಿ ನದಿ ಜೋಡಣೆ ಮಾಡಬೇಕು. ಹೆಸ್ಕಾಂನವರು, ವಿದ್ಯುತ್ ಕಂಬ ಹಾಗೂ ತಂತಿಯನ್ನು ರೈತರೇ ಖರೀದಿಸುವಂತೆ ನಿಯಮ ಮಾಡಿದೆ. ಈ ನಿಯಮ ರದ್ದುಪಡಿಸಬೇಕು. ಹೆಸ್ಕಾಂ ಕಂಪನಿಯವರು ವಿಧಿಸುತ್ತಿರುವ ಶುಲ್ಕ ದುಬಾರಿಯಾಗಿದ್ದು, ಅದನ್ನು ಕೈ ಬಿಡಬೇಕು. ಬೆಳೆ ವಿಮೆಯಲ್ಲಾದ ತಾರತಮ್ಯ ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ನಗರದ ಹಲವು ಸಂಘಟನೆಗಳ ಪದಾಧಿಕಾರಿಗಳು ಸಹ ರೈತರ ಧರಣಿಗೆ ಮಂಗಳವಾರ ಬೆಂಬಲ ಸೂಚಿಸಿದರು.

ಸಂಘಟನೆ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಶಿಗ್ಗಾವಿಯ ಸಂಗನಬಸವ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮಾಲತೇಶ ಪೂಜಾರ, ಎಚ್.ಎಚ್. ಮುಲ್ಲಾ, ಸಾಹಿತಿ ಸತೀಶ ಕುಲಕರ್ಣಿ ಇದ್ದರು.

‘ಎರಡೂ ಸರ್ಕಾರಗಳು ಜೀವಂತವಿಲ್ಲ’ ‘ರೈತರು ತಮ್ಮ ಬೇಡಿಕೆ ಈಡೇರಿಕೆಗಾಗಿ ಪ್ರತಿ ಬಾರಿಯೂ ಹೋರಾಟ ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರವಾಗಲಿ ಕೇಂದ್ರ ಸರ್ಕಾರವಾಗಲಿ ರೈತರ ಬೇಡಿಕೆ ಈಡೇರಿಸಲು ಮನಸ್ಸು ಮಾಡುತ್ತಿಲ್ಲ. ರೈತರ ಪಾಲಿಗೆ ಎರಡೂ ಸರ್ಕಾರಗಳು ಜೀವಂತವಿಲ್ಲ’ ಎಂದು ರಾಮಣ್ಣ ಕೆಂಚಳ್ಳೇರ ಕಿಡಿಕಾರಿದರು. ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ ‘₹2400 ಬೆಲೆಯಲ್ಲಿ ಮೆಕ್ಕೆಜೋಳ ಖರೀದಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗಷ್ಟೇ ಪತ್ರಿಕೆಗಳ ಮೂಲಕ ಹೇಳಿದ್ದಾರೆ. ಆದರೆ ಅದು ಜಾರಿಗೆ ಬಂದಿಲ್ಲ. ಖರೀದಿಯ ಮಾನದಂಡಗಳು ಏನು ಎಂಬುದನ್ನೂ ತಿಳಿಸಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.