ADVERTISEMENT

‘ಅನ್ನದಾತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ’

ಹಾವೇರಿ ಜಿಲ್ಲಾಡಳಿತ ಭವನದ ಮುಂಭಾಗ ರೈತ ಸೇನಾ ಕರ್ನಾಟಕ ಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2021, 16:03 IST
Last Updated 19 ಜನವರಿ 2021, 16:03 IST
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ, ಹಾವೇರಿಯ ಜಿಲ್ಲಾಡಳಿತ ಭವನದ ಎದುರಿಗೆ ರೈತ ಸೇನಾ ಕರ್ನಾಟಕ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು 
ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ, ಹಾವೇರಿಯ ಜಿಲ್ಲಾಡಳಿತ ಭವನದ ಎದುರಿಗೆ ರೈತ ಸೇನಾ ಕರ್ನಾಟಕ ಸಂಘದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು    

ಹಾವೇರಿ: ‘ರಾಜ್ಯದಲ್ಲೇ ಅತಿಹೆಚ್ಚು ಮೆಕ್ಕೆಜೋಳವನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಉತ್ತಮ ದರ ಸಿಗದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನುಕೂಲ ಕಲ್ಪಿಸಲು ಕೂಡಲೇ ಖರೀದಿ ಕೇಂದ್ರ ತೆರೆಯಬೇಕು’ ಎಂದುರೈತ ಸೇನಾ ಕರ್ನಾಟಕ ಸಂಘದ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗ ರೈತರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತ ಸೇನಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರ ಕ್ವಿಂಟಲ್‌ ಮೆಕ್ಕೆಜೋಳಕ್ಕೆ ₹1850 ದರ ನಿಗದಿಪಡಿಸಿದೆ. ಇದರಲ್ಲಿ ದಲ್ಲಾಳಿಗಳಿಗೆ ಮತ್ತು ಅಧಿಕಾರಿಗಳಿಗೆ ಕಮಿಷನ್‌ ಸಿಗುತ್ತದೆ. ಆದರೆ, ರೈತರನಿಗೆ ಅಪಾರ ನಷ್ಟ ಉಂಟಾಗುತ್ತಿದೆ. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆದು ಅನ್ನದಾತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದಲಿಂಗೇಶ (ವರುಣಗೌಡ) ಎಂ. ಪಾಟೀಲ ಮಾತನಾಡಿ, ‘ಈಗಾಗಲೇ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈವರೆಗೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರೈತರು ಮೆಕ್ಕೆಜೋಳವನ್ನು ದಾಸ್ತಾನು ಮಾಡಿಟ್ಟುಕೊಂಡಿದ್ದಾರೆ. ಇನ್ನು ಹೆಚ್ಚಿನ ದಿನದವರೆಗೆ ಅದನ್ನು ಸಂಗ್ರಹಿಸಿಕೊಂಡರೆ ಸಾಲಗಾರರ ಕಾಟ ಹೆಚ್ಚಳವಾಗುತ್ತಿದೆ. ಹೀಗಾಗಿ ರೈತರು ಕಡಿಮೆ ದರಕ್ಕೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ದು, ರೈತರ ಸಮಸ್ಯೆ ಪರಿಹಾರಕ್ಕೆ ಪರಸ್ಪರ ದೂರದೆ ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸದರು ಈ ಕುರಿತು ಸರ್ಕಾರಗಳ ಮೇಲೆ ಒತ್ತಡ ತಂದು ರೈತರ ನೆರವಿಗೆ ಧಾವಿಸಬೇಕು. ಅದು ಬಿಟ್ಟು ಕೇಂದ್ರ ಸರ್ಕಾರ ಮೆಕ್ಕೆಜೋಳವನ್ನು ಪಿಡಿಎಸ್‍ನಿಂದ ಹೊರಗಿಟ್ಟಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಾ ಕುಳಿತುಕೊಳ್ಳಬಾರದು ಎಂದರು.

ರೈತ ಮುಖಂಡರಾದ ಪಿ.ಬಿ. ದುಂಡಿಗೌಡ್ರ, ಎಫ್.ಆರ್ ಕೊಂಡಾಯಿ, ಕೊಟೇಪ್ಪಾ ಸಂಜಿವಣ್ಣನವರ, ಮಹ್ಮದ ಮುಲ್ಲಾ, ರಾಮಜಿ ಸಿಂಧೆ, ಫಕ್ಕೀರಪ್ಪ ಬಿಸೆಟ್ಟಿ, ಸಿದ್ದಯ್ಯ ಹಿರೇಮಠ, ಶಿವಾನಂದ ಹೊಸಮನಿ, ಮಲ್ಲಣ್ಣ ಆಲೇಕರ, ಫಕ್ಕೀರಪ್ಪ ವಾಲ್ಮೀಕಿ, ಬಸವರಾಜ ದೊಡ್ಡಗೌಡ್ರ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.