ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಹಾವೇರಿ: ‘ಮಾರುತಿ ಮ್ಯಾನ್‌ಪವರ್ ಸಂಸ್ಥೆಯ ಹೆಸರಿನಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಹಾವೇರಿ ಜಿಲ್ಲಾ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಿ ವಂಚಿಸಲಾಗಿದೆ’ ಎಂಬ ಆರೋಪದಡಿ ಸಂಸ್ಥೆಯ ಅಧ್ಯಕ್ಷರೂ ಆಗಿರುವ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಸೇರಿ ಎಂಟು ಮಂದಿ ವಿರುದ್ಧ ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘ರಾಣೆಬೆನ್ನೂರಿನ ಮೃತ್ಯುಂಜಯನಗರದ ನಿವಾಸಿ ಶ್ರೀಧರ ರಾಮಚಂದ್ರಪ್ಪ ಚಿಕ್ಕಣ್ಣನವರ ಎಂಬುವವರ ಖಾಸಗಿ ದೂರಿನ ವಿಚಾರಣೆ ನಡೆಸಿದ್ದ ನ್ಯಾಯಾಲಯದ ನಿರ್ದೇಶನದಂತೆ, ಸ್ವಾಮೀಜಿ ಸೇರಿ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಕ್ಕೆ ಸಂಬಂಧಪಟ್ಟಂತೆ ಪುರಾವೆಗಳನ್ನು ಪರಿಶೀಲಿಸಿ, ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ರಾಣೆಬೆನ್ನೂರಿನಲ್ಲಿ ಮಾರುತಿ ಮ್ಯಾನ್‌ಪವರ ಸೊಸೈಟಿ (ರಿ) ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ನಡೆಸಲಾಗುತ್ತಿದೆ. ಸ್ವಾಮೀಜಿಯವರು ಸದ್ಯ ಈ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯು ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಾಯಿತವಾಗಿದೆ. ಇದೇ ಸಂಸ್ಥೆಯ ಹಳೇ ಆಡಳಿತ ಮಂಡಳಿ ಸದಸ್ಯರ ಹೆಸರಿನಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ಸಲ್ಲಿಸಿ ವಂಚಿಸಿರುವುದಾಗಿ ದೂರುದಾರರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಅಧಿಕಾರಿ ಹೇಳಿದರು.
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ದೂರುದಾರ ಶ್ರೀಧರ ಚಿಕ್ಕಣ್ಣನವರ, ‘2022–23ರಲ್ಲಿ ಕಾರ್ಯದರ್ಶಿಯಾಗಿದ್ದೆ. ಆಡಳಿತ ಮಂಡಳಿ ಬದಲಾವಣೆ ಮಾಡಬಹುದೆಂದು ಮುಂಗಡವಾಗಿ ತಕರಾರು ಸಲ್ಲಿಸಿದ್ದೆ. ಇದರ ನಡುವೆಯೇ ಸದಸ್ಯರಾದ ಶಂಕ್ರಪ್ಪ ಈರಣ್ಣನವರ, ನಾಗಪ್ಪ ಹಂಚಿನಮನಿ, ಹನುಮಂತಪ್ಪ ಸೋಮಕ್ಕನವರ, ಸಣ್ಣತಮ್ಮಣ್ಣ ಬಾರ್ಕಿ, ಚಂದ್ರಪ್ಪ ಬೆನಕನಕೊಂಡ, ಶ್ರೀಧರ ಚಿಕ್ಕಣ್ಣನವರ, ಹನುಮಂತಪ್ಪ ಬ್ಯಾಲದಹಳ್ಳಿ ಅವರ ಹೆಸರಿನಲ್ಲಿ ಬಾಂಡ್ ಸಮೇತ ಖೊಟ್ಟಿ ದಾಖಲೆ ಸಲ್ಲಿಸಿ ನೋಂದಣಾಧಿಕಾರಿ ಕಚೇರಿಗೆ ಸಲ್ಲಿಸಲಾಗಿದೆ. ಜೊತೆಗೆ, ಹೊಸ ಮಂಡಳಿಯನ್ನೂ ಆಯ್ಕೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಿದ್ದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.