ರಾಣೆಬೆನ್ನೂರು: ಹಲಾಲ್ ಪ್ರಮಾಣ ಪತ್ರ ನಿಷೇಧಿಸುವುದು ಮತ್ತು ದೇವರ ಮತ್ತು ರಾಷ್ಟ್ರಪುರುಷರ ಚಿತ್ರವಿರುವ ಪಟಾಕ್ಷಿ ನಿಷೇಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ತಹಶೀಲ್ದಾರ್ ಶಿವಕುಮಾರ ಕಾರಗಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ವೆಂಕಟರಮಣ ನಾಯಕ್ ಮಾತನಾಡಿ, ಆಹಾರ ಭದ್ರತೆ ಮತ್ತು ಮಾನದಂಡ ಕಾಯ್ದೆ, 2007 ಪ್ರಕಾರ ಭಾರತದಲ್ಲಿ ಮಾರಾಟವಾಗುವ ಯಾವುದೇ ಆಹಾರ ಉತ್ಪನ್ನದ ಗುಣಮಟ್ಟ ಪರೀಕ್ಷೆ ಹಾಗೂ ಪ್ರಮಾಣೀಕರಣ ಮಾಡುವ ಏಕೈಕ ಹಕ್ಕು ಭಾರತೀಯ ಆಹಾರ ಭದ್ರತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ಹಾಗೂ ಆಹಾರ ಮತ್ತು ಔಷಧಿ ಆಡಳಿತ (FDA) ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿದೆ. ಇವುಗಳನ್ನು ಹೊರತುಪಡಿಸಿ ಯಾವುದೇ ಖಾಸಗಿ ಅಥವಾ ಧಾರ್ಮಿಕ ಸಂಸ್ಥೆಗೆ, ಯಾವುದೇ ಆಹಾರ ಅಥವಾ ಇತರ ವಸ್ತುಗಳನ್ನು ಪ್ರಮಾಣೀಕರಿಸುವ ಅಧಿಕಾರ ನೀಡಬಾರದು ಎಂದರು.
ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಲಕ್ಷ್ಮಿ, ಕೃಷ್ಣ, ವಿಷ್ಣು, ಅಯ್ಯಪ್ಪಸ್ವಾಮಿ, ವೆಂಕಟೇಶ್ವರ ಇತ್ಯಾದಿ ಹಿಂದೂ ದೇವರ ಚಿತ್ರ ಮತ್ತು ಮಹಾನ್ ರಾಷ್ಟ್ರಪುರುಷರ ಚಿತ್ರ ಇರುವ ಸಿಡಿಮದ್ದುಗಳನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ. ಇಂತಹ ಪಟಾಕಿಗಳನ್ನು ಸಿಡಿಸಿದ ನಂತರ ಪ್ಯಾಕೆಟಗಳ ಮೇಲಿನ ದೇವರ ಹಾಗೂ ರಾಷ್ಟ್ರಪುರುಷರ ಚಿತ್ರವು ಛಿದ್ರವಾಗಿ ರಸ್ತೆಯ ತುಂಬಾ ಹರಡುತ್ತವೆ. ಜನರು ಕಾಲಿನಡಿಯಲ್ಲಿ ತುಳಿಯುವುದು, ವಾಹನದ ಅಡಿಯಲ್ಲಿ ಅಥವಾ ಕಸದ ಬುಟ್ಟಿ ಹಾಗೂ ಚರಂಡಿಯಲ್ಲಿ ಬೀಳುವುದು ಕಾಣುತ್ತದೆ ಎಂದು ಹೇಳಿದರು.
ಇದು ಹಿಂದೂ ದೇವರುಗಳ ಅಪಮಾನವಾಗಿದ್ದು ಮತ್ತು ರಾಷ್ಟ್ರಪುರುಷರ ಅಗೌರವವಾಗುತ್ತದೆ. ಈಗಾಗಲೇ ಮಹಾರಾಷ್ಟ್ರದ ವಾಣಿಜ್ಯ ಮಂಡಳಿ ಪಟಾಕಿಯಲ್ಲಿ ದೇವರ ಚಿತ್ರ ಮುದ್ರಿಸುವುದನ್ನು ನಿಷೇಧಿಸಿದೆ. ಹಾಗಾಗಿ ತಾವು ಸಹ ಇಂತಹ ಪಟಾಕಿಗಳ ಮೇಲೆ ನಿಷೇಧವನ್ನು ಹಾಕಬೇಕು. ಅದಕ್ಕೆ ಸಂಬಂಧಿಸಿದವರಿಗೆ ಸೂಚನೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ರಾಣೆಬೆನ್ನೂರಿನಲ್ಲಿ ಹಿಂದುಜನಜಾಗೃತಿ ಸಮಿತಿ ಧರ್ಮಪ್ರೇಮಿಗಳಾದ ಕೃಷ್ಣಾ ಸಾ ಪವಾರ್, ಶಿವಕುಮಾರ ಹಿರೇಮಠ, ಮಾರ್ತಾಂಡ ಕುಲಕರ್ಣಿ, ಹರೀಶ ಕಾಟೆನಹಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.