ಸಾಂದರ್ಭಿಕ ಚಿತ್ರ
– ಐಸ್ಟಾಕ್ ಚಿತ್ರ
ಹಾವೇರಿ: ‘ಜಿಲ್ಲೆಯ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ಅಪಘಾತವನ್ನುಂಟು ಮಾಡಿ ಪತ್ನಿ ಹಾಗೂ ಮಗಳು ತೀವ್ರ ಗಾಯಗೊಳ್ಳಲು ಕಾರಣರಾದ’ ಆರೋಪದಡಿ ಉಪವಲಯ ಅರಣ್ಯಾಧಿಕಾರಿ ಮಾಲತೇಶ ವೀರಭದ್ರಪ್ಪ ಬಾರ್ಕಿ ಎಂಬುವರರ ವಿರುದ್ಧ ಹಾನಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯ ಅರಣ್ಯ ಇಲಾಖೆ ಕ್ವಾರ್ಟರ್ಸ್‌ನಲ್ಲಿ ಮಾಲತೇಶ ಅವರು ಕುಟುಂಬ ಸಮೇತ ವಾಸವಿದ್ದಾರೆ. ಗಣೇಶ ಹಬ್ಬದ ನಿಮಿತ್ತ ಬ್ಯಾಡಗಿ ತಾಲ್ಲೂಕಿನ ಮಲ್ಲೂರಿಗೆ ಪತ್ನಿ ಹಾಗೂ ಮಗಳನ್ನು ಬೈಕ್‌ನಲ್ಲಿ ಕರೆದೊಯ್ಯುವಾಗ ಅಪಘಾತ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು.
‘ಆರೋಪಿ ಮಾಲತೇಶ, ಪತ್ನಿ–ಮಗಳ ಜೊತೆ ಬೈಕ್‌ನಲ್ಲಿ (ಕೆಎ 31 ಎಸ್ 5922) ಅಕ್ಕಿಆಲೂರು ಗ್ರಾಮದ ವೀರಾಪೂರ ಆಸ್ಪತ್ರೆ ಬಳಿ ಬೈಕ್‌ನಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲಿ ಬೀದಿನಾಯಿಯೊಂದು ಅಡ್ಡಬಂದಿತ್ತು. ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಮಾಲತೇಶ ಬೈಕ್ ಉರುಳಿಬಿದ್ದಿತ್ತು. ಅಪಘಾತದಲ್ಲಿ ಮಾಲತೇಶ, ಅವರ ಪತ್ನಿ ಹಾಗೂ ಮಗಳಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
‘ಬೀದಿನಾಯಿಯಿಂದ ಅಪಘಾತವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸಂಬಂಧಿಕರು ನೀಡಿರುವ ದೂರು ಆಧರಿಸಿ, ಮಾಲತೇಶ ವಿರುದ್ಧ ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆಯಲ್ಲಿ ಲಭ್ಯವಾಗುವ ಅಂಶ ಆಧರಿಸಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.